ಹನುಮಾನ ಚಾಲೀಸಾ: ದೋಹಾ – 2

ಬುದ್ಧಿ-ಹೀನ ತನು ಜಾನಿಕೈ ಸುಮಿರೌ ಪವನಕುಮಾರ.

ಬುದ್ಧಿ-ಬಲ ಬುದ್ಧಿ ವಿದ್ಯಾ ದೇಹೋ ಮೋಹಿ ಹರಹು ಕ್ಲೇಶ ವಿಕಾರಾ.

 

ಮನಸ್ಸಿನ ಕನ್ನಡಿಯನ್ನು ಶುಚಿಗೊಳಿಸಿ ಹೊಳಪು ಮಾಡಿದ ನಂತರ, ದೇವರನ್ನು ಆವಾಹಿಸಿ, ಗುರುವಿನ ಆಶೀರ್ವಾದ ಪಡೆದು ನಮ್ಮ ಅರಿಕೆ ಸಲ್ಲಿಸುವ ಸಮಯ ಇದು.

ಈ ಮೇಲಿನ ಸಾಲುಗಳಲ್ಲಿ ಸಂತ ಕವಿ ತುಳಸಿದಾಸರು ಈ ರೀತಿ ಹೇಳುತ್ತಾರೆ : ಪ್ರಭುವೇ, ನಾನು ಬುದ್ಧಿಹೀನ, ಮಂದಮತಿ, ಅಲ್ಪ ಬುದ್ಧಿಯವ. ಇದರ ಅರಿವು ನನಗಿದೆ. ನಾನು ನಿಮ್ಮಲ್ಲಿ ವಿನಮ್ರವಾಗಿ ಬೇಡಿಕೊಳ್ಳುತ್ತಿದ್ದೇನೆ. ನನಗೆ ಬಲ,ಬುದ್ಧಿ, ನಿಜವಾದ ಜ್ಞಾನವನ್ನು ಕರುಣಿಸು ತಂದೆ, ನನ್ನ ಎಲ್ಲಾ ಕುಂದುಕೊರತೆಗಳನ್ನು ನಿವಾರಿಸಿ, ನನಗೆ ನೋವುಂಟು ಮಾಡುವ ಎಲ್ಲಾ ಕ್ಲೇಶಗಳಿಂದ ಪಾರುಮಾಡಿ, ನಿಜವಾದ ಜ್ಞಾನ ಪ್ರಾಪ್ತಿಯಾಗುವಂತೆ ಮಾಡು ಪ್ರಭುವೇ ಎಂದು ರಾಮನವರೆಗೂ ಕರೆದೊಯ್ಯುವ ಆಂಜನೇಯನನ್ನು ಬೇಡಿಕೊಳ್ಳುತ್ತಾರೆ ಸಂತ ಕವಿ. ನಾನು ಅದೃಷ್ಟ ಅಥವಾ ಯಶಸ್ಸನ್ನು ಕೇಳುತ್ತಿಲ್ಲ. “ನನ್ನ ಮನಸ್ಸು ವಿಚಲಿತವಾಗದೆ ಸ್ವಸ್ಥವಾಗಿರಬೇಕು. ಸ್ವಸ್ಥ ಮನಸ್ಸಿನಿಂದ ಜೀವನದ ಎಲ್ಲಾ ಬದಲಾವಣೆಗಳನ್ನು ನಿಭಾಯಿಸಬಹುದು ಮತ್ತು ಯಾವಾಗಲೂ ಸಂತೋಷವನ್ನು ಕಂಡುಕೊಳ್ಳಬಹುದು” ಎಂದು ಈ ಸಾಲುಗಳನ್ನು ಅರ್ಥೈಸಬಹುದು.

ಪ್ರಾಣಿಗಳಲ್ಲಿಯೂ ಬಲವಿದೆ, ಬುದ್ಧಿಯೂ ಇದೆ. ವಿದ್ಯೆ ಇಲ್ಲದ ಬುದ್ಧಿಯಿಂದ ಎನು ಪ್ರಯೋಜನ. ವಿದ್ಯೆ ಇಲ್ಲದೆ ಕೇವಲ ಬಲ, ಬುದ್ಧಿ ಇರುವ ನಾನು ಪಶುವಿಗೆ ಸಮಾನ. ನನಗೆ ಮನುಷ್ಯನಾಗಲು ಬಲ, ಬುದ್ಧಿಯೊಂದಿಗೆ ವಿದ್ಯೆಯನ್ನೂ ದಯಪಾಲಿಸು. ಹಾಗೆಯೇ ನನ್ನ ಮನೋ ವಿಕಾರಗಳಿಗೆ ಕಾರಣವಾದ ಕ್ರೋಧ, ಮೋಹ,ಮದ, ಮತ್ಸರ,ದ್ವೇಷಗಳನ್ನು ದಮನ ಮಾಡಿ, ತೊಡೆದು ಹಾಕು, ನಕಾರಾತ್ಮಕ ಭಾವನೆಗಳಿಂದ ನನಗೆ ಮುಕ್ತಿ ಕೊಡು.’ ಎಂದು ಕೇಳುತ್ತಾರೆ ಸಂತರು. ಅವರ ಮಾತಿನಲ್ಲಿಯೇ ಹೇಳುವುದಾದರೆ ವಿದ್ಯೆ ದೊರೆಯದ ತನಕ ಮುಕ್ತಿಯಿಲ್ಲ. ನಕಾರಾತ್ಮಕ ಭಾವನೆಗಳು ಮಾನಸಿಕ ಆರೋಗ್ಯದ ಜೊತೆ ದೇಹದ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ ಎಂಬುದನ್ನು ವಿಜ್ಞಾನ ಸಾಬೀತು ಪಡಿಸಿದೆ. ಯೋಗ ಶಾಸ್ತ್ರವು ಶೇಖಡಾ 95% ನಷ್ಟು ರೋಗಗಳನ್ನು “ಆಧೀಜ” ವ್ಯಾಧಿಗಳೆಂದು ಗುರುತಿಸುತ್ತದೆ. ಆಧೀಜ ಎಂದರೆ’ ಒಳಗಿನಿಂದಲೇ ಬಂದ’ ಎಂದು ಅರ್ಥ. ನಕಾರಾತ್ಮಕ ಭಾವನೆಗಳಿಂದ ದೇಹದ ಮೇಲೆ ಆಗುವ ಪರಿಣಾಮಗಳಿಂದಲೇ ದೇಹ ರೋಗಗ್ರಸ್ತವಾಗುವುದು. ಹಾಗಾಗಿಯೇ ಭಾರತದಲ್ಲಿರುವ ಎಲ್ಲಾ ಧರ್ಮಗಳೂ ಮನಸ್ಸಿಗೆ ಆದ್ಯತೆ ನೀಡುತ್ತವೆ.ದೇಹ ಮತ್ತು ಮನಸ್ಸುಗಳ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧವಿರುವುದನ್ನು ಗುರುತಿಸುತ್ತವೆ.

ಜ್ಞಾನವಿಲ್ಲದ ಬುದ್ಧಿವಂತಿಕೆಯು ನಮ್ಮನ್ನು ಕೂಪಮಂಡೂಕಗಳನ್ನಾಗಿ ಮಾಡುತ್ತದೆ. ಬಾವಿಯಲ್ಲಿನ ಕಪ್ಪೆಗೆ ಆ ಬಾವಿಯೇ ಪ್ರಪಂಚ. ಅದನ್ನು ಮೀರಿದ ಜ್ಞಾನ ಅದಕ್ಕೆ ಸಾಧ್ಯವಿಲ್ಲ. ಆದರೆ ಜ್ಞಾನ ಅನಂತವಾದುದು, ಅದಕ್ಕೆ ಯಾವುದೇ ಮಿತಿಯಿಲ್ಲ, ಸೀ ಮೆಯಿಲ್ಲ. ಹಿಂದೂ ಧರ್ಮದಲ್ಲಿ ಆ ಅನಂತ ಜ್ಞಾನವೆಂದರೆ ಆ ಪರಮಾತ್ಮನೇ. ಎಲ್ಲವೂ ತಿಳಿದಿರುವುದು ಆ ಭಗವಂತನಿಗೆ ಮಾತ್ರ.

ಅದಕ್ಕಾಗಿಯೇ ನಾನು ವಾಯು ಪುತ್ರನ (ಹನುಮಾನ್) ಸ್ಮರಣೆ ಮಾಡುತ್ತೇನೆ. ಆತ ಖಂಡಿತವಾಗಿಯೂ ನನಗೆ ಶಕ್ತಿ, ಬುದ್ಧಿವಂತಿಕೆ, ಜ್ಞಾನವನ್ನು ನೀಡುತ್ತಾನೆ ಮತ್ತು ಎಲ್ಲಾ ಸಮಸ್ಯೆ ಮತ್ತು ತೊಂದರೆಗಳಿಂದ ನನ್ನನ್ನು ಪಾರು ಮಾಡುತ್ತಾನೆ ಎಂದು ಅಪಾರ ಭಕ್ತಿ, ಶ್ರದ್ಧೆಯಿಂದ ಸಂತರು ಈ ಚರಣಗಳಲ್ಲಿ ಉಲ್ಲೇಖಿಸಿದ್ದಾರೆ.

ಹನುಮಾನ ಚಾಲೀಸಾದ ಒಂದೊಂದು ಪದ್ಯದಲ್ಲಿಯೂ ಪ್ರಭು ಆಂಜನೇಯನ ಒಂದೊಂದು ಗುಣದ ವರ್ಣನೆ ಇದೆ. ಭಕ್ತರು, ಶ್ರೇಷ್ಠ ರಾಮ ಭಕ್ತನಾದ ಹನುಮಂತನ ಈ ಸ್ತೋತ್ರವನ್ನು ಹಾಡುತ್ತಾರೆ ಮತ್ತು ಪಠಿಸುತ್ತಾರೆ. ಅದರಿಂದ ಆಂಜನೇಯ ಸ್ವಾಮಿಯ ಅನುಗ್ರಹವಾಗಿ ತಮ್ಮೆಲ್ಲಾ ಸಂಕಷ್ಟಗಳು ದೂರಾವಾಗುತ್ತವೆ ಎಂದು ಬಲವಾಗಿ ನಂಬುತ್ತಾರೆ. ಬನ್ನಿ ನಾವೆಲ್ಲರೂ ಆ ನಂಬಿಕೆಯ ಭಾಗವಾಗೋಣ. ಚಾಲೀಸನ್ನು ಪಠಿಸೋಣ. ಪ್ರಭು ಆಂಜನೇಯನ ಕೃಪೆಗೆ ಪಾತ್ರವಾಗೋಣ. ಶುಭವಾಗಲಿ.

|| ಓಂ ಆಂಜನೇಯಾಯ ನಮಃ ||