ಗುರುವಾಣಿ 12 |ತುಳಸೀದಾಸರ ಸಂಕಲ್ಪ

ಗುರುವಾಣಿ 12 |ತುಳಸೀದಾಸರ ಸಂಕಲ್ಪ

||ಓಂ ಆಂಜನೇಯಾಯ ನಮಃ||

 

ಸಂಕಟ ಹರಣ, ಶ್ರೇಷ್ಠರಲ್ಲಿ ಶ್ರೇಷ್ಠ, ಮಂಗಲ ಮೂರುತಿ ಆಂಜನೇಯನಿಗೆ ನಮನಗಳು. ಹಿಂದೂ ಸಂಸ್ಕೃತಿಯ ಆಚರಣೆಯ ಪ್ರಕಾರ, ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮವೂ ಸಂಕಲ್ಪದೊಂದಿಗೆ ಪ್ರಾರಂಭವಾಗುತ್ತದೆ. ಸಂಕಲ್ಪವು ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡ ಒಂದು ಉದ್ದೇಶ, ಗಂಭೀರ ಪ್ರತಿಜ್ಞೆ, ಕೋರಿಕೆ, ಅಥವಾ ದೃಢ ನಿಶ್ಚಯವಾಗಿರುತ್ತದೆ. ಈ ಸಂಕಲ್ಪ ಕ್ರಿಯೆ, ಮನಸ್ಸು ಮತ್ತು ದೇಹವನ್ನು ಏಕಾಗ್ರಗೊಳಿಸಿ ಸಮನ್ವಯಗೊಳಿಸುವ ಒಂದು ಸಾಧನ.

ನಾನು ಯಾರು,ನಾನು ಏನನ್ನು ಮಾಡುತ್ತಿದ್ದೇನೆ,ಮತ್ತು ಏತಕ್ಕಾಗಿ ಮಾಡುತ್ತಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸುವ ಆಧ್ಯಾತ್ಮಿಕ ಕೋರಿಕೆಯೇ ಸಂಕಲ್ಪ. ಇಲ್ಲಿ ಬಯಕೆ ಎಂಬ ಬೀಜವನ್ನು ಮೊಳಕೆಯೊಡೆಯುವ ಭರವಸೆಯೊಂದಿಗೆ ಬಿತ್ತುತ್ತೇವೆ.

ಹನುಮಾನ್ ಚಾಲೀಸದಲ್ಲಿ ಸಂತ ತುಳಸೀದಾಸರು ಮಾಡಿದ ಸಂಕಲ್ಪ ಏನೆಂದು ನೋಡೋಣ.

ಬುದ್ಧಿಹೀನತನುಜಾನಿಕೈ ಸುಮಿರೌ ಪವನ ಕುಮಾರ |
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ||

ಇದರ ಅರ್ಥ ಹೀಗಿದೆ: ಪವನಕುಮಾರ ಅಜ್ಞಾನಿಯಾದ ನನಗೆ ಬಲ, ಬುದ್ಧಿ, ಮತ್ತು ವಿದ್ಯೆಯನ್ನು ಕೊಡು. ಬಲ, ಬುದ್ಧಿ ಮತ್ತು ವಿದ್ಯೆ ಇವು ಮೂರು ಒಂದು ತ್ರಿಕೋಣದ 3 ಸಮಭುಜಗಳಿದ್ದಂತೆ. ಬುದ್ಧಿ ಇಲ್ಲದ ಬಲ ಮಂಕನಂತೆ, ವಿದ್ಯೆ ಇಲ್ಲದ ಬುದ್ಧಿ ಬಾವಿಯಲ್ಲಿರುವ ಕಪ್ಪೆಯಂತೆ, ಹಾಗೂ ಬಲವಿಲ್ಲದ ಬುದ್ಧಿ ಅಶಕ್ತನಂತೆ. ಹಾಗಾಗಿ ತುಳಸೀದಾಸರು ಬಲ ಬುದ್ಧಿ ಮತ್ತು ವಿದ್ಯೆಯನ್ನು ನೀಡೆಂದು ಸಂಕಲ್ಪ ಮಾಡಿಕೊಳ್ಳುತ್ತಾರೆ. ಇಲ್ಲಿ ಬಳಸಿರುವ ಪದ ‘ಬಲ’ಕ್ಕೆ ವಿಶೇಷ ಅರ್ಥವಿದ್ದು, ಇದು ಆರೋಗ್ಯವನ್ನು ಸೂಚಿಸುತ್ತದೆ. ದಾಸರು ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಬಲ,ಬುದ್ಧಿ ಮತ್ತುವಿದ್ಯೆಯನ್ನು ಕೋರಿದರೇ ಹೊರತು ಸಂಪತ್ತನ್ನು ಕೇಳಲಿಲ್ಲ. ಇದೇ ದಾಸರು ಮಾಡಿದ ಕೋರಿಕೆಯ ವಿಶೇಷತೆ.

ದೇಹದ ಆರೋಗ್ಯ ಮತ್ತು ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ ಆಯುಷ್ಯ, ಆರೋಗ್ಯ, ಶಾಂತಿ, ಮತ್ತು ಸಂಪತ್ತು ತಾನಾಗಿಯೇ ವೃದ್ಧಿಸುತ್ತದೆ. ಹೇ ವಾಯುಪುತ್ರ ನಮ್ಮೆಲ್ಲರಿಗೂ ಬಲ, ಬುದ್ಧಿ, ಮತ್ತು ವಿದ್ಯೆ ಯನ್ನು ದಯಪಾಲಿಸಿ ಈ ಜೀವನವನ್ನು ಸಾರ್ಥಕ ಗೊಳಿಸು.

||ಓಂ ಆಂಜನೇಯಾಯ ನಮಃ||