ಗುರುವಾಣಿ 11 | ಆಂಜನೇಯನ ಸ್ಪೂರ್ತಿ ಮಂತ್ರಗಳು

ಗುರುವಾಣಿ 11 | ಆಂಜನೇಯನ ಸ್ಪೂರ್ತಿ ಮಂತ್ರಗಳು

||ಓಂ ಆಂಜನೇಯಾಯ ನಮಃ||

 

ಸದೃಢ, ನಿರ್ಭೀತ, ತಾಳ್ಮೆ, ನಿಷ್ಠೆ, ಸಹಾನುಭೂತಿ, ಹಾಗೂ ಶ್ರದ್ಧೆಯ ದ್ಯೋತಕವೇ ಕೇಸರಿ ಪುತ್ರ ಶ್ರೀ ಮುಖ್ಯಪ್ರಾಣ ಆಂಜನೇಯ. ರಾಮ, ಲಕ್ಷ್ಮಣ, ಸೀತೆಯರನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು, ಶ್ರೀ ರಾಮಪ್ರಭುವಿನ ಚರಿತ್ರೆಯನ್ನು ಕೇಳುತ್ತಾ ಆನಂದ ಪಡೆಯುವ ಆಂಜನೇಯ ಪ್ರತಿಯೊಬ್ಬರಿಗೂ ಸ್ಫೂರ್ತಿಯನ್ನು ನೀಡುತ್ತಾನೆ. ರಾಮಾಯಣದಲ್ಲಿ ವಿಶೇಷ ಸ್ಥಾನ ಪಡೆದಿರುವ ಈ ವಾನರ ಶ್ರೇಷ್ಠನ ವ್ಯಕ್ತಿತ್ವವನ್ನು ಅವಲೋಕಿಸಿದಾಗ ಅನೇಕ ಸ್ಫೂರ್ತಿದಾಯಕ ಮಾಹಿತಿಗಳು ದೊರೆಯುತ್ತವೆ.

 . ಅದರಲ್ಲಿ ಪ್ರಮುಖವಾದ ಸ್ಪೂರ್ತಿ ಮಂತ್ರಗಳನ್ನು ತಿಳಿಯುವ ಚಿಕ್ಕ ಪ್ರಯತ್ನವೇ ಇಂದಿನ ಗುರುವಾಣಿ.

ಸ್ಪೂರ್ತಿ ಮಂತ್ರ 1: ಸಂದರ್ಭಕ್ಕೆ ಸರಿಯಾಗಿ ಹೊಂದಿಕೊಳ್ಳುವುದು.

 ಆಂಜನೇಯ ಅತ್ಯಂತ ಬಲಶಾಲಿ ಹಾಗೂ ನಿರ್ಭೀತ ಆಗಿದ್ದರೂ ಸಹ ಸೂಕ್ಷ್ಮ ರೂಪವನ್ನು ಧರಿಸಿ ಸೀತೆಯನ್ನು ಕಂಡ. ಹಾಗೆಯೇ ವಿಕಟ ರೂಪ ಧರಿಸಿ ಲಂಕೆಯನ್ನು ದಹಿಸಿದ. ನಮ್ಮೆಲ್ಲರ ಜೀವನ ನಿಂತ ನೀರಲ್ಲ, ಸಮುದ್ರದ ಅಲೆಗಳಂತೆ ಏರಿಳಿತಗಳಿಂದ ಕೂಡಿರುತ್ತದೆ. ಜೀವನದಲ್ಲಿ ನಾವು ಮುಂದೆ ಸಾಗಬೇಕಾದರೆ ಸಂದರ್ಭವನ್ನು ಸರಿಯಾಗಿ ಅರಿತು, ಅದಕ್ಕೆ ತಕ್ಕಂತೆ ವರ್ತಿಸುವುದೇ ಜೀವನದ ಯಶಸ್ಸಿನ ಗುಟ್ಟು.

ಸ್ಪೂರ್ತಿ ಮಂತ್ರ 2: ನಮ್ಮ ಬಲ ಮತ್ತು ದೌರ್ಬಲ್ಯಗಳನ್ನು ಅರಿಯುವುದು.

 ರಾಮಾಯಣವು ಹನುಮಂತನ ಶಕ್ತಿಗೆ ಸಾಕ್ಷಿಯಾಗಿದೆ. ಆಂಜನೇಯ ತನ್ನ ಬಲ ಮತ್ತು ದೌರ್ಬಲ್ಯಗಳನ್ನು ಅರಿತಿದ್ದ. ಸಾಗರವನ್ನೇ ಜಿಗಿದು ಲಂಕೆಯನ್ನು ಸೇರಿದ. ಲಕ್ಷ್ಮಣನಿಗಾಗಿ ಸಂಜೀವಿನಿ ಪರ್ವತವನ್ನೇ ಹೊತ್ತುತಂದ. ಆಂಜನೇಯ ತನ್ನ ಶಕ್ತಿ ಮತ್ತು ಧೈರ್ಯವನ್ನು ಪ್ರದರ್ಶಿಸಿ ಶ್ರೀರಾಮನ ಪ್ರಶಂಸೆಗೆ ಅರ್ಹನಾದ. ಅಂದರೆ ನಮ್ಮ ಜೀವನದ ಯಶಸ್ಸು, ನಮ್ಮ ಬಲ ಮತ್ತು ದೌರ್ಬಲ್ಯಗಳನ್ನು ಅರಿತು ನಮ್ಮ ಸಾಮರ್ಥ್ಯದಲ್ಲಿ ನಂಬಿಕೆಯಿಟ್ಟು ಮುನ್ನಡೆಯುವದೇ ಆಗಿದೆ.

ಸ್ಪೂರ್ತಿ ಮಂತ್ರ 3: ನಿಸ್ವಾರ್ಥತೆ ಹಾಗೂ ಕ್ರಿಯಾತ್ಮಕತೆ.

 ಆಂಜನೇಯ ತನ್ನ ವಿಶಿಷ್ಟ ವ್ಯಕ್ತಿತ್ವದಿಂದ ಮೃತ್ಯುವನ್ನೇ ಗೆದ್ದು ಅಮರತ್ವವನ್ನು ಪಡೆದ.  ಸುಗ್ರೀವನಿಗೆ ರಾಮನನ್ನು ಪರಿಚಯಿಸಿ ಪುನಃ ರಾಜಪದವಿಯನ್ನು ಕೊಡಿಸಿದ. ರಾಮಲಕ್ಷ್ಮಣರನ್ನು ಅಹಿರಾವಣ ಅಪಹರಿಸಿ ಪಾತಾಳಲೋಕದಲ್ಲಿ ಬಂಧಿಸಿದಾಗ, ಈ ಕಪಿಶ್ರೇಷ್ಠ ಪಂಚಮುಖಗಳನ್ನು ಧರಿಸಿ ರಾಕ್ಷಸರನ್ನು ಸಂಹರಿಸಿ, ಅಯೋಧ್ಯೆಯ ರಾಜಕುಮಾರರಿಗೆ ಬಿಡುಗಡೆಯ ದಾರಿಯನ್ನು ತೋರಿಸಿದ.

ಭೀಮನ ಬೃಹತ್ ರೂಪ ಧರಿಸಿ ಅಸುರರನ್ನು ಸಂಹರಿಸಿದ. ಇದು ಆಂಜನೇಯನನ್ನು ಅತಿ ಎತ್ತರಕ್ಕೆ ಏರಿಸುತ್ತದೆ

ಆಂಜನೇಯ ಭಕ್ತರೇ, ಸ್ಫೂರ್ತಿಯ ಚಿಲುಮೆಯಾಗಿರುವ ಈ ವಾಯುಪುತ್ರನನ್ನು ಸ್ಮರಿಸುತ್ತಾ ನಮ್ಮೆಲ್ಲರ ಜೀವನದಲ್ಲಿಯೂ ಆ ಮುಖ್ಯಪ್ರಾಣ ಸ್ಫೂರ್ತಿ ತುಂಬಲಿ ಎಂದು ಪ್ರಾರ್ಥಿಸೋಣ.

||ಓಂ ಆಂಜನೇಯಾಯ ನಮಃ||