Guruvani|ಗುರುವಾಣಿ 17|ಸುಂದರಕಾಂಡಅಧ್ಯಾಯ 4

Guruvani|ಗುರುವಾಣಿ 17|ಸುಂದರಕಾಂಡಅಧ್ಯಾಯ 4

ರಾವಣನ ಅರಮನೆಯ ಪ್ರವೇಶ

||ಓಂ ಆಂಜನೇಯಾಯ ನಮಃ||

 

ಸಾಧುಸಂತರ ರಕ್ಷಕ, ಇಂದ್ರಿಯಗಳ ಒಡೆಯ,ಅಸುರರ ಸಂಹಾರಕ, ಶ್ರೀ ರಾಮ ಪ್ರಿಯನಾದ ಹನುಮಂತ, ದಶಕಂಠ ರಾವಣನ ಅರಮನೆಯನ್ನು ಪ್ರವೇಶಿಸುವ ಸನ್ನಿವೇಶದ ಕಿರುಪರಿಚಯವೇ ಇಂದಿನ ಗುರುವಾಣಿ.ಕಪಿಶ್ರೇಷ್ಠನಾದ ಹನುಮಂತನು ಲಂಕೆಯ ಆದಿದೇವತೆಯನ್ನು ಪರಾಕ್ರಮದಿಂದ ಜಯಸಿ ಶತ್ರುವಿನ ವಿನಾಶವನ್ನುಬಯಸಿ ಮುಖ್ಯದ್ವಾರದಿಂದ ಪ್ರವೇಶಿಸದೆ ತನ್ನ ಎಡಗಾಲನ್ನುಮುಂದಿಟ್ಟು ಕೋಟೆಯನ್ನು ಹಾರಿ ಲಂಕಾನಗರವನ್ನು ಪ್ರವೇಶಿಸಿದನು. ಈ ಹಿಂದೆಯೇ ತಿಳಿದಿರುವ ಹಾಗೆ ಅಲ್ಲಿನ ಸೌಧಗಳು ಐರಾವತದಂತೆ ಬೆಳ್ಳಗಿದ್ದು ವಜ್ರ ವೈಡೂರ್ಯಗಳಿಂದ ಅತ್ಯಂತ ಶೋಭಾಯಮಾನವಾಗಿ ಕಾಣುತಿದ್ದವು. ಸ್ವಾಮಿಕಾರ್ಯ ಸಾಧಕ ಹಾಗೂ ದಕ್ಷನಾದ ಹನುಮಂತನು ಶ್ರೀ ರಾಮನ ಕಾರ್ಯಾರ್ಥವಾಗಿ ಮುಂದೆ ಸಾಗುವಾಗ ಲಂಕೆಯ ನೋಟ ಅವನಿಗೆ ಆನಂದ ನೀಡಿತು, ಕೆಲವೊಂದು ಭವನಗಳು ಪದ್ಮ, ಸ್ವಸ್ತಿಕ ಮೊದಲಾದ ಆಕಾರದಿಂದ ಕೂಡಿದ್ದವು.ಅಲ್ಲಿಯ ಭವನಗಳಿಂದ ಸುಮಧುರ ಸಂಗೀತ ಮತ್ತು ಜಪ, ಮಂತ್ರದ ಧ್ವನಿಗಳು ಕೇಳಿಬರುತಿದ್ದವು . ಅಲ್ಲಿಯ ಯೋಧರುಗಳು ಭುಜ ತಟ್ಟಿಕೊಳುತ್ತಾ ಸಿಂಹ ಗರ್ಜನೆ ಮಾಡುತಿದ್ದರು. ಕೆಲವೊಂದು ಯೋಧರು ರಾವಣನನ್ನು ಜಪಿಸುತಿದ್ದರು, ಇನ್ನು ಕೆಲವರು ಯಜ್ಞಗಳಲ್ಲಿ ತೊಡಗಿದ್ದರು, ಮತ್ತೆ ಕೆಲವರು ದರ್ಬೆಯನ್ನೇ ಆಯುಧವನ್ನಾಗಿಸಿ ಕೈಮುಷ್ಟಿಯಲ್ಲಿ ಧರಿಸಿದ್ದರು. ಹಾಗೆಯೇ ಮುಂದುವರಿದು ನೋಡಿದರೆ ಕೆಲವರು ದಂಡಾಯುಧವನ್ನು ಇನ್ನೂ ಕೆಲವರು ಶೂಲಾಯುಧವನ್ನು ಹಿಡಿದಿದ್ದರು. ಅಲ್ಲಿ ಕೆಲವು ವಿಚಿತ್ರ ವ್ಯಕ್ತಿಗಳೂ ಇದ್ದರು. ಅವರಲ್ಲಿ ಕೆಲವರು ಒಂದೆ ಕಣ್ಣು, ಒಂದೆ ಕಿವಿ, ಉದ್ದವಾದ ಹೊಟ್ಟೆ ಹಾಗೂ ವಕ್ರದೃಷ್ಟಿಯ ಮುಖಗಳನ್ನು ಹೊಂದಿದ್ದು ಭಯಂಕರವಾಗಿ ಕಾಣುತ್ತಿದ್ದರು. ಹನುಮಂತನು ರಾವಣನ ಸುವಿಖ್ಯಾತವಾದ ಪರ್ವತದ ಅಗ್ರ ಭಾಗದಲ್ಲಿದ್ದ ಭವ್ಯವಾದ ಅರಮನೆಯನ್ನು ನೋಡಿದನು. ಅರಮನೆಯ ಸುತ್ತ ಕೊಳದಲ್ಲಿ ಬಿಳಿಯ ಕಮಲಗಳು ಅರಳಿ ನಿಂತಿದ್ದವು. ಬಿಳಿಯ ಕುದುರೆ, ರಥ, ಆನೆ ಮುಂತಾದವು ಈ ಅರಮನೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು.ಅನರ್ಘ್ಯ ಮುತ್ತುಗಳಿಂದ ಕೂಡಿ ಕಾಂತೀಯ ಸೌಂದರ್ಯದಿಂದ ಕಂಗೊಳಿಸುತ್ತಾ, ಚಂದನದ ದೂಪಗಳ ಪರಿಮಳವನ್ನು ಪಸರಿಸುತ್ತಿದ್ದ ರಾವಣನ ಅಂತಃಪುರವನ್ನು ಮುಖ್ಯ ಪ್ರಾಣ ಆಂಜನೇಯ ಪ್ರವೇಶಿಸಿದನು.

||ಓಂ ಆಂಜನೇಯಾಯ ನಮಃ||