Guruvani | ಗುರುವಾಣಿ 30 | ಸುಂದರಕಾಂಡ ಅಧ್ಯಾಯ 22: ರಾವಣ ಮತ್ತು

Guruvani | ಗುರುವಾಣಿ 30 | ಸುಂದರಕಾಂಡ ಅಧ್ಯಾಯ 22: ರಾವಣ ಮತ್ತು

ಸೀತಾದೇವಿಯ ನಡುವಿನ ಸಂವಾದ

||ಓಂ ಆಂಜನೇಯಾಯ ನಮಃ||

 

ರಾವಣ ಸೀತೆಯನ್ನು ಮನವೊಲಿಸಲು ಮಾಡಿದ ಪ್ರಯತ್ನ ಹಾಗೂ ಅದಕ್ಕೆ ಸೀತೆ ನೀಡಿದ ಉತ್ತರಗಳನ್ನು ನಾವೆಲ್ಲರೂ ಕೇಳಿದ್ದೇವೆ.

ಬನ್ನಿ!! ಇವರಿಬ್ಬರ ನಡುವಿನ ಸಂವಾದದ ಮುಂದುವರಿದ ಭಾಗವನ್ನ ನಾವಿಂದು ಕೇಳೋಣ..

ಸೀತೆಯ ಮನವೊಲಿಸುವಲ್ಲಿ ವಿಫಲನಾದ ರಾವಣನು, ಕಠೋರನಾಗಿ ಹೀನ ವಚನಗಳಿಂದ ಸೀತೆಯನ್ನು ಸಂಬೋಧಿಸಲು ತೊಡಗಿದ – ‘ಹತೋಟಿ ತಪ್ಪಿದ ಕುದುರೆಗಳನ್ನು ನಿಪುಣನಾದ ಸಾರಥಿಯು ಸರಿದಾರಿಗೆ ತರುವಂತೆ ನೀನು ನನ್ನನ್ನು ಪರೋಕ್ಷವಾಗಿ ಕೇಳುತ್ತಿರುವೆ. ನೀನು ನನ್ನೊಂದಿಗೆ ಆಡಿದ ಒಂದೊಂದು ಮಾತೂ ದಾರುಣವಾದ ಮರಣದಂಡನೆಗೆ ಅರ್ಹವಾಗಿದೆ. ನಾನು ನಿನಗೆ ಎರಡು ತಿಂಗಳ ಸಮಯಾವಕಾಶವನ್ನು ನೀಡುತ್ತಿರುವೆ. .ಅಷ್ಟರೊಳಗೆ ನೀನು ನನ್ನ ವಶವಾಗಬೇಕು.’ ಹೀಗೆಂದು ರಾಕ್ಷಸೇಂದ್ರನಾದ ರಾವಣನು ಈ ವಿಧವಾಗಿ ಸೀತೆಯನ್ನು ಬೆದರಿಸುತ್ತಿರಲು, ಅವನ ಸಮೀಪದಲ್ಲಿದ್ದ ದೇವ ಗಂಧರ್ವ ಕನ್ಯೆಯರು ವಿಶಾದಪಡುತ್ತಿದ್ದರು. ಅವರಲ್ಲಿ ಕೆಲವರು ತುಟಿ ಕಣ್ಣು ಮುಖ ಹಾಗೂ ಹಾವಭಾವಗಳಿಂದ ಸೀತಾದೇವಿಯನ್ನು ಸಂತೈಸುತ್ತಿದ್ದರು. ರಾವಣನ ಮಾತುಗಳನ್ನು ಆಲಿಸಿದ ಸೀತೆ ರಾವಣನ ಆತ್ಮ ಹಿತಕ್ಕೆ ಸಾಧಕವಾದ ಮಾತುಗಳನ್ನು ಆಡಿದಳು.’ದೇವಂದ್ರನಿಗೆ ಶತಿದೇವಿಯಂತೆ,ಧರ್ಮತ್ಮನಾದ ರಾಮನಿಗೆ ನಾನು ಧರ್ಮಪತ್ನಿಯಂತಿರುವ ನನ್ನನ್ನು ಈ ಮೂರುಲೋಕಗಳಲ್ಲಿ ಯಾರೂ ಮನಸ್ಸಿನಿಂದ ಬಯಸಲಾರರು. ಆದರೆ ನೀನು ಮಾತ್ರ ಇಂತಹ ದುಸ್ಸಾಹಸಕ್ಕೆ ಕೈ ಹಾಕಿರುವೆ, .ಮಹಪಾಪಕರವಾದ ಮಾತನ್ನು ಆಡುತ್ತಿರುವ, ನೀನು ಪಾಪದ ಸರಪಳಿಯಿಂದ ತಪ್ಪಿಸಿಕೊಳ್ಳಲಾರೆ. .ಇಕ್ಷ್ವಾಕು ವಂಶಸ್ಥನಾದ ಶ್ರೀರಾಮನನ್ನು ಮಾಯಾಮೃಗದ ನೆಪದಿಂದ ಆಶ್ರಮದಿಂದ ಹೊರಹೋಗುವಂತೆ ಮಾಡಿ, ನನ್ನನ್ನು ಅಪಹರಿಸಿರುವೆ. .ದಶರಥ ಮಹಾರಾಜನ ಸೊಸೆಯಾಗಿರುವ ನನಗೆ ಇಲ್ಲಸಲ್ಲದ ಮಾತನಾಡುತ್ತಿರುವೆ. ನೀನು ಭಸ್ಮವಾಗಲು ಅರ್ಹನಾದವನು’ ಎಂದು ಹೇಳುತ್ತಾಳೆ. ಸೀತಾದೇವಿಯ ಆ ಮಾತುಗಳನ್ನು ಕೇಳಿದ ರಾಕ್ಷಸಾಧಿಪತಿಯಾದ ರಾವಣನು ಕೇಳಿ ಕೆರಳಿದ ಸಿಂಹದಂತೆ, ಸಿಟ್ಟಿಗೆದ್ದ ಹಾವಿನಂತೆ ಬುಸುಗುಟ್ಟುತ್ತಾ- …’ಏಲೈ ಸೀತೆ! ನಿನ್ನ ರಾಮ ನೀತಿ ತಪ್ಪಿದವನು, ಸರ್ವರೀತಿಯ ಸುಖದಿಂದಲೂ ವಂಚಿತನಾದವನು ಎಂದು ಹೇಳುತ್ತಾ ಸಾಮ,ದಾನ,ಭೇದ ಮತ್ತು ದಂಡ ಈ ಉಪಾಯಗಳಿಂದ ಸೀತೆಯ ಮನವೊಲಿಸುವಂತೆ ಅಲ್ಲಿ ಕಾವಲಿದ್ದ ರಕ್ಕಸಿಯರಿಗೆ ಅಪ್ಪಣೆ ನೀಡುತ್ತಾನೆ. ಕಾಮಕ್ರೋಧಗಳಿಂದ ಪೀಡಿತನಾದ ರಾಕ್ಷಸೇಂದ್ರನಾದ ರಾವಣನು ರಾಕ್ಷಸಿಯರಿಗೆ ನೀಡಿದ ಅಪ್ಪಣೆಯ ಬಗ್ಗೆ ಮತ್ತೆಮತ್ತೆ ನೆನಪಿಸುತ್ತಾ ಜಾನಕಿಯನ್ನು ಹೆದರಿಸಿ, ಭೂಮಿಯೇ ನಡುಗುವಂತೆ ಗಟ್ಟಿ ಹೆಜ್ಜೆಗಳನ್ನಿಡುತ್ತಾ ಆಶೋಕವನದಿಂದ ಹೊರನಡೆಯುತ್ತಾನೆ. ಭಯಂಕರ ಆಕೃತಿಯ ರಾಕ್ಷಸ ಸ್ತ್ರೀಯರು ಸೀತೆಯ ಮನವೊಲಿಸಲು ಮಾಡಿದ ಪ್ರಯತ್ನದ ಬಗ್ಗೆ ಮುಂದಿನ ಗುರುವಾಣಿಯಲ್ಲಿ ನಾವೆಲ್ಲರೂ ಕೇಳೋಣ.

|| ಓಂ ಆಂಜನೇಯಾಯ ನಮಃ ||