Guruvani | ಗುರುವಾಣಿ 23| ಸುಂದರಕಾಂಡ ಅಧ್ಯಾಯ 13: ಅಶೋಕವನದ ಪ್ರವೇಶ

Guruvani | ಗುರುವಾಣಿ 23| ಸುಂದರಕಾಂಡ ಅಧ್ಯಾಯ 13: ಅಶೋಕವನದ ಪ್ರವೇಶ

||ಓಂ ಆಂಜನೇಯಾಯ ನಮಃ||

 

ಶ್ರೀರಾಮನ ಭಕ್ತ ವತ್ಸಲ, ಸೇವಾಧುರಂಧರ, ವಾಯುಪುತ್ರನಾದ ಮಾರುತಿ, ರಾವಣನ ಅರಮನೆಯಿಂದ ಹೊರಟು ಎಲ್ಲೆಡೆ ಸುತ್ತಾಡಿ ಸೀತಾ ದೇವಿಯ ಜಾಡನ್ನು ಅರಿಯದೆ ಗೊಂದಲಕ್ಕೊಳಗಾದನು. ಸೀತಾ ಮಾತೆಯ ಸಾವು ಬದುಕಿನ ಬಗ್ಗೆ ಮನಸ್ಸಿನಲ್ಲಿ ಅನೇಕ ಗೊಂದಲದ ವಿಚಾರಗಳು ಮೂಡಿದವು. ಜಾನಕಿಯ ಶೋಧಕ್ಕಾಗಿ ತಾನು ಪಟ್ಟ ಪ್ರಯತ್ನವನ್ನು ಮೆಲಕುಹಾಕುತ್ತಾ ನಿಂತನು. ಶ್ರೀ ರಾಮ ಚಂದ್ರನ ಸೇವಕನಾಗಿ ಹೊತ್ತ ಕಾರ್ಯವನ್ನು ಸಂಪೂರ್ಣ ಕಾರ್ಯಗತಗೊಳಿಸುವ ದೃಷ್ಟಿಯಿಂದ, ಮುಖ್ಯಪ್ರಾಣ ಆಂಜನೇಯ ಹೊತ್ತ ಕಾರ್ಯವನ್ನು ಸಂಪೂರ್ಣ ಜವಾಬ್ದಾರಿಯಿಂದ ಕಾರ್ಯಗತಗೊಳಿಸುವುದೇ ಗುರುವಿಗೆ ಶಿಷ್ಯ ನೀಡಬಹುದಾದ ಅತಿ ದೊಡ್ಡ ಗುರುಕಾಣಿಕೆ ಎಂದು ಅರಿತುಕೊಂಡ ಆ ಕಪಿಶ್ರೇಷ್ಠ, ಆಶೋಕವನದಲ್ಲಿ ಸೀತಾಮಾತೆಯನ್ನ ಹುಡುಕಲು ಅಣಿಯಾದನು. ರಾಕ್ಷಸರ ಶೋಕವನ್ನು ಹೆಚ್ಚಿಸಲೆಂದೇ ಬಂದಿದ್ದ ಆ ವಾನರ ವೀರ ಅಷ್ಟವಸುಗಳನ್ನು, ಏಕಾದಶರುದ್ರರನ್ನು, ದ್ವಾದಶಾದಿತ್ಯರನ್ನು, ಅಶ್ವಿನಿ ದೇವತೆಗಳನ್ನು, ಒಡೆಯನಾದ ಸುಗ್ರೀವನನ್ನು ಸ್ಮರಿಸಿ, ಮನಸ್ಸಿನಲ್ಲಿಯೇ ನಮಸ್ಕರಿಸಿ ಅಶೋಕವನದ ಕಡೆಗೆ ಹೊರಟನು. ಮಹಾತೇಜಸ್ವಿಯಾದ ಹನುಮಂತನು ಮುಂದೆ ಮಾಡಬೇಕಾದ ಕಾರ್ಯದ ಬಗ್ಗೆ ಯೋಚಿಸುತ್ತಾ, ಜಾನಕಿಯನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ಅಶೋಕವವನ್ನು ಸೇರಿದನು. ಫಲಪುಷ್ಪಗಳಿಂದ ಸಮೃದ್ಧವಾದ ನಾನಾ ವಿಧದ ವೃಕ್ಷಗಳಿಂದ ವ್ಯಾಪಕವಾದ ಆಶೋಕವನವು ದುಂಬಿ, ಕೋಗಿಲೆ ಮತ್ತು ಮಯೂರಗಳಿಂದ ಕೂಡಿ ಈಗ ತಾನೇ ಉದಿಸಿದ ಸೂರ್ಯನಂತೆ ಕಂಗೊಳಿಸುತ್ತಿತ್ತು. ಕಪಿಶ್ರೇಷ್ಠನು ಆಶೋಕವನದ ಎಲ್ಲಾ ಕಡೆಗಳಲ್ಲಿ ಸೀತೆಯನ್ನು ಹುಡುಕುತ್ತಾ, ಮರ ಗಿಡಗಳ ಮಧ್ಯೆ ಓಡಾಡುತ್ತಿದ್ದನು. ಆತನನ್ನು ನೋಡಿದ ಎಲ್ಲ ಪ್ರಾಣಿ ಪಕ್ಷಿಗಳು ವಸಂತನೇ ಮೂರ್ತಿವೆತ್ತು ಬಂದನೆಂದು ಭಾವಿಸಿದವು. ಸ್ವಚ್ಛವಾದ ಮಧುರ ಜಲದಿಂದ ಕೂಡಿದ ಕೊಳಗಳು, ಅನ್ಯ ಸಂಪಿಗೆ ಮರಗಳು, ಹಂಸ,ಚಕ್ರವಾಕ ಪಕ್ಷಿಗಳು, ಆಶೋಕವನದ ಶೋಭೆಯನ್ನು ಹೆಚ್ಚಿಸಿದ್ದವು. ಆನಂತರ ಹನುಮಂತನು ಸುವರ್ಣಮಯವಾದ ಶಿಂಶುಪಾವೃಕ್ಷವನ್ನು ನೋಡಿದನು. ಅದರ ಸುತ್ತಲೂ ಬಂಗಾರದಿಂದ ನಿರ್ಮಿತವಾದ ವೇದಿಕೆಯಿತ್ತು. ಆ ವೃಕ್ಷದಲ್ಲಿ ನೂರಾರು ಚಿಕ್ಕ ಚಿಕ್ಕ ಗೆಜ್ಜೆಗಳನ್ನು ಅಳವಡಿಸಿದ್ದರು. ಗಾಳಿಯ ವೇಗಕ್ಕೆ ಆ ಗೆಜ್ಜೆಗಳು ಸುಮಧುರ ನಾದ ಮಾಡುತ್ತಿದ್ದವು. ಚಿರಂಜೀವಿ ಹನುಮಂತನು ಜನಕ ನಂದಿನಿಯ ಬರುವಿಕೆಯ ದಾರಿ ನೋಡುತ್ತಾ ಶಿಂಶುಪಾವೃಕ್ಷದಲ್ಲಿ ಅಡಗಿ ಕುಳಿತನು. ಆಂಜನೇಯ ಭಕ್ತರೇ ಇದು ಈ ವಾರದ ಗುರುವಾಣಿ.

|| ಓಂ ಆಂಜನೇಯಾಯ ನಮಃ ||