Guruvani | ಗುರುವಾಣಿ 21 |ಸುಂದರಕಾಂಡ ಅಧ್ಯಾಯ 10:    ರಾವಣನ ಹಾಗೂ ಆತನ

Guruvani | ಗುರುವಾಣಿ 21 |ಸುಂದರಕಾಂಡ ಅಧ್ಯಾಯ 10:    ರಾವಣನ ಹಾಗೂ ಆತನ

ಅಂತಃಪುರದ ವರ್ಣನೆ

||ಓಂ ಆಂಜನೇಯಾಯ ನಮಃ||

 

ಸೀತಾ ಶೋಧನೆಯನ್ನು ಮುಂದುವರೆಸಿದ ಆಂಜನೇಯನಿಗೆ, ಬೆಳ್ಳಿ, ಸುವರ್ಣ, ವಜ್ರಗಳಿಂದ ಕೂಡಿದ್ದ ಹಾಗೂ ಅತ್ಯಂತ ಶೋಭಾಯಮಾನವಾಗಿದ್ದ ಪುಷ್ಪಕ ವಿಮಾನ ಕಂಡಿತೆಂಬ ಸಂಗತಿಯನ್ನು ಹಿಂದಿನ ವಾರ ನಾವೆಲ್ಲರೂ ತಿಳಿದಿದ್ದೇವೆ. ಬನ್ನಿ ಸುಂದರಕಾಂಡದ ಹತ್ತನೇ ಅಧ್ಯಾಯದ ಬಗ್ಗೆ ನಾವಿಂದು ತಿಳಿಯೋಣ. ರಾವಣನ ಅರಮನೆಯಲ್ಲಿ ವಾಯುಪುತ್ರನು, ದಿವ್ಯಶಾಲೆಯನ್ನು ಕಾಣುತ್ತಾನೆ. ಶಾಲೆಯ ಮಧ್ಯದಲ್ಲಿ ವಿಶಾಲವಾದ ರತ್ನಗಂಬಳಿಯನ್ನು ಹಾಸಲಾಗಿರುತ್ತದೆ. ಅದರ ಮೇಲೆ ಕಸೂತಿಯಿಂದ ನದಿ, ಸಮುದ್ರ,ಅರಣ್ಯಗಳ ಚಿತ್ರವನ್ನು ಬಿಡಿಸಲಾಗಿತ್ತು .ಹಾಗೆಯೇ ದಿವ್ಯ ಗಂಧಗಳಿಂದ ಶಾಲೆಯು ಸುವಾಸಿತವಾಗಿತ್ತು. ರಾವಣನಿಂದ ಪಾಲಿತವಾದ ದಿವ್ಯ ಶಾಲೆಯ ಶಬ್ದ,ಸ್ಪರ್ಶ, ರೂಪ,ರಸ, ಗಂಧಗಳು ಪಂಚೇಂದ್ರಿಯಗಳಾದ ಕಿವಿ, ಕಣ್ಣು, ಮೂಗು, ಚರ್ಮ ಹಾಗೂ ನಾಲಿಗೆಗಳಿಗೆ ಹಿತವಾಗಿ ಆಂಜನೇಯನಿಗೆ ಮುದ ನೀಡಿತು. ಅಂತಹ ದಿವ್ಯ ಶಾಲೆಗಳಲ್ಲಿ ರಾವಣ್ಣೇಶ್ವರನ ಮಹಾ ಆಸನವನ್ನು ಮಾರುತಿ ಕಾಣುತ್ತಾನೆ. ಸ್ಪಟಿಕಮಯವೂ, ರತ್ನ ಖಚಿತವೂ, ದಂತ ಮತ್ತು ಸುವರ್ಣದಿಂದ ಕೂಡಿದ ಮಹಾ ಪರ್ಯಂಕವು ಸ್ವರ್ಗದಲ್ಲಿರುವ ಶಯನಾಸನಗಳಿಗೆ ಅನುರೂಪವಾಗಿತ್ತು. ಕೈಯಲ್ಲಿ ಚಾಮರವನ್ನು ಹಿಡಿದು ರಾವಣನಿಗೆ ಗಾಳಿ ಬೀಸಲು ದೇವಲೋಕದಲ್ಲಿನ ಅಪ್ಸರೆಯಂತಹ ಸ್ತ್ರೀಯರು ನಿಂತಿದ್ದರು. ಶ್ರೇಷ್ಠವಾದ ಪುಷ್ಪಮಾಲಿಕೆಗಳಿಂದ ಅಲಂಕರಿಸಲ್ಪಟ್ಟಿದ್ದ ಪರಮಾಸನವು ಅತ್ಯಂತ ಶೋಭಾಯಮಾನವಾಗಿ ಕಂಗೊಳಿಸುತ್ತಿತ್ತು. ಅಂತಹ ಶ್ರೇಷ್ಠವಾದ ಪರ್ಯಂಕದ ಮೇಲೆ ರಾವಣೇಶ್ವರ ಅಸೀನನಾಗಿದ್ದನು. ಮಹಾಬಾಹುವಾದ ರಾವಣನು ಸುವರ್ಣದ ಜರಿಯ ವಸ್ತ್ರವನ್ನು ಧರಿಸಿದ್ದನು. ಕರ್ಣ ಕುಂಡಲ, ದಿವ್ಯಾಭರಣಗಳಿಂದ ಭೂಷಿತನಾದ ಸುರದ್ರೂಪಿಯೂ, ಕಾಮರೂಪಿಯೂ ಆದ ಆತ ಮಿಂಚುಗಳಿಂದ ಕೂಡಿದ ಮೇಘದಂತೆ ಪ್ರಕಾಶಿಸುತ್ತಿದ್ದನು. ಬಲಿಷ್ಟವಾದ ಭುಜಗಳಲ್ಲಿ ವಜ್ರಯುಧದ ಏಟಿನ ಮಚ್ಚೆ ಮತ್ತು ವಿಷ್ಣು ಚಕ್ರದ ಚಿಹ್ನೆಗಳು ಮೂಡಿದ್ದವು. ದುಂಡಾದ ಸಂದಿ ಬಂದಗಳು, ದಷ್ಟಪುಷ್ಟವಾಗಿಯೂ ಇದ್ದ ತೋಳುಗಳು ಐದು ಹೆಡೆಯ ಎರಡು ಸರ್ಪಗಳಂತೆ ಕಾಣುತ್ತಿದ್ದವು. ಮಂದಾರ ಪರ್ವತದಲ್ಲಿ ಮಲಗಿರುವ ರೋಷಗೊಂಡ ಸರ್ಪಗಳಂತೆ ಇದ್ದ ರಾವಣನ ತೋಳುಗಳನ್ನು ಮಹಾವೀರ ವಿಕ್ರಮ ಭಜರಂಗಿ ವಾಯುಪುತ್ರ ನೋಡಿದನು. ನಾಲ್ಕು ದಿಕ್ಕುಗಳಲ್ಲಿ ಬೆಳಗುತ್ತಿದ್ದ ಸುವರ್ಣದ ನಾಲ್ಕು ದೀಪಗಳು ರಾವಣನ ಸರ್ವಾಂಗವನ್ನು ಬೆಳಗುತ್ತಿದ್ದವು. ರಾವಣನ ವಕ್ಷ ಸ್ಥಳವು ರಕ್ತ ಚಂದನದಿಂದ ಲೇಪಿತವಾಗಿದ್ದು ರತ್ನ ಹಾರಗಳಿಂದ ಶೋಬಿಸುತ್ತಿತ್ತು. ನೃತ್ಯ, ವಾದ್ಯ, ಸಂಗೀತ ಕಲಿಗಳಲ್ಲಿ ಪರಿಣತನಾಗಿದ್ದ ರಾವಣನ ಅಂತಪುರದ ನಾರಿಯರು ಚಂದ್ರಸದೃಶವಾದ ಮುಖಗಳಿಂದ ಕಂಗೊಳಿಸುತ್ತಿದ್ದರು. ಸ್ತ್ರೀಯರಿದ್ದ ಸ್ಥಳದಿಂದ ಪ್ರತ್ಯೇಕವಾಗಿದ್ದ ಏಕಾಂತಸ್ಥಳದಲ್ಲಿ, ರೂಪ ಸಂಪನ್ನೆಯಾದ ಮತ್ತೊಬ್ಬ ಸ್ತ್ರೀಯನ್ನು ಕಪಿಶ್ರೇಷ್ಠ ಹನುಮಂತನು ಕಾಣುತ್ತಾನೆ.ರೂಪ ಸಂಪನ್ನೆಯು, ಸರ್ವಾಂಗ ಸುಂದರಳೂ ಅಂತಃಪುರಕ್ಕೆ ಒಡತಿಯಂತೆ ಕಾಣುತ್ತಿದ್ದ ಆ ಸ್ತ್ರೀ ರತ್ನ ಮಣಿಯನ್ನು ಮಾರುತಿ ಕಂಡನು. ಸೀತೆಯನ್ನು ನೋಡಿದನೆಂದು, ಮಹಾತ್ಕಾರ್ಯವನ್ನು ಸಾಧಿಸಿದನೆಂದು ಭಾವಿಸಿದ ಮಾರುತಿ ಆನಂದತುಂದಿಲನಾಗಿ ಕುಣಿದಾಡಿದನು. ಆದರೆ ಸ್ತ್ರೀ ಮಣಿ ಸೀತಾ ಮಾತೆ ಆಗಿರದೆ ರಾವಣನ ಪತ್ನಿ ಮಂಡೋದರಿ ಆಗಿದ್ದಳು. ದುಃಖತಪ್ತನಾದ ಆಂಜನೇಯ ಪುನಃ ಸ್ಥೈರ್ಯವನ್ನು ತಂದು ಕೊಂಡು ಸೀತಾನ್ವೇಷಣೆಯನ್ನು ಮುಂದುವರೆಸಿದನು.

|| ಓಂ ಆಂಜನೇಯಾಯ ನಮಃ ||