Guruvani | ಗುರುವಾಣಿ 20: ಸುಂದರಕಾಂಡ

Guruvani | ಗುರುವಾಣಿ 20: ಸುಂದರಕಾಂಡ

ಅಧ್ಯಾಯ-8 & 9 – ಪುಷ್ಪಕ ವಿಮಾನದ ವರ್ಣನೆ

||ಓಂ ಆಂಜನೇಯಾಯ ನಮಃ||

 

ಮಹಾವೀರ, ವಿಕ್ರಮ, ಸುವರ್ಣ ಮೈಬಣ್ಣದ ಆಂಜನೇಯನು ಸೀತಾನ್ವೇಷಣೆಯ ಸಂಧರ್ಭದಲ್ಲಿ ರಾವಣನ ಅರಮನೆಯಲ್ಲಿ ಅತಿ ಶೋಭಾಯಮಾನವಾಗಿ ರಾರಾಜಿಸುತ್ತಿದ್ದ ಪುಷ್ಪಕ ವಿಮಾನವನ್ನು ನೋಡುತ್ತಾನೆ. ಮಾರುತಿ ಭಕ್ತರೆ, ಬನ್ನಿ ನಾವಿಂದು ಸುಂದರಕಾಂಡದ ಎಂಟು ಮತ್ತು ಒಂಬತ್ತನೆಯ ಅಧ್ಯಾಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ. ಗ್ರಂಥಗಳ ಉಲ್ಲೇಖದ ಪ್ರಕಾರ ವಿಶ್ವಕರ್ಮನೆಂಬ ಮಹಾಶಿಲ್ಪಿ ಬ್ರಹ್ಮನಿಗಾಗಿ ಆ ಪುಷ್ಪಕ ವಿಮಾನವನ್ನು ನಿರ್ಮಿಸಿದನು. ಕುಬೇರನು ಮಹಾತಪಸ್ಸಿನಿಂದ ಆ ವಿಮಾನವನ್ನು ಬ್ರಹ್ಮನಿಂದ ಪಡೆದನು. ಆನಂತರ ರಾವಣೇಶ್ವರನು ತನ್ನ ಭುಜಬಲ ಪರಾಕ್ರಮಗಳಿಂದ ಕುಬೇರನನ್ನು ಜಯಿಸಿ ಪುಷ್ಪಕ ವಿಮಾನವನ್ನು ಬಲವಂತವಾಗಿ ತನ್ನ ವಶಕ್ಕೆ ತೆಗೆದುಕೊಂಡನೆಂಬ ಉಲ್ಲೇಖವಿದೆ. ಆ ಪುಷ್ಪಕ ವಿಮಾನವು ಅಪ್ರಮೇಯವಾದ ಸೌಂದರ್ಯದಿಂದ ಕೂಡಿತ್ತು. ಲೋಕವೇ ಮೆಚ್ಚುವಂತಹ, ಸಾಟಿಯಿಲ್ಲದ ಆ ಪುಷ್ಪಕ ವಿಮಾನವು ವಿಶ್ವಕರ್ಮನ ಕೌಶಲ್ಯದ ನಿಪುಣತೆಗೆ ಸಾಕ್ಷಿಯಾಗಿತ್ತು. ಆಧುನಿಕ ಕಾಲದಲ್ಲಿನ ವಿಮಾನದಲ್ಲಿರುವ ಎಲ್ಲಾ ಸೌಲಭ್ಯಗಳಂತೆ ಪುಷ್ಪಕ ವಿಮಾನದಲ್ಲಿಯೂ ಸಭಾಭವನ, ಭೋಜನ ಗೃಹ, ಕ್ರೀಡಾವನ, ವಿನೋದ ಮಂದಿರ ಮುಂತಾದ ಸೌಲಭ್ಯಗಳಿದ್ದವು. ವಿಭಿನ್ನ ರೀತಿಯ ಅನೇಕ ಶಿಖರಗಳಿಂದ ಅಲಂಕೃತಗೊಂಡಿದ್ದ ಅದು, ಶರತ್ ಕಾಲದ ಚಂದ್ರನಂತೆ ನಿರ್ಮಲವಾಗಿತ್ತು. ಪ್ರಾಚೀನ ಗ್ರಂಥಗಳ ಪ್ರಕಾರ ಇಪ್ಪತ್ತೈದಕ್ಕೂ ಅಧಿಕ ಪ್ರಕಾರದ ವಿಮಾನಗಳಿದ್ದವು. ಅದರಲ್ಲಿ ಪುಷ್ಪಕ ಅಥವಾ ಪುಷ್ಪಾಕ ವಿಮಾನವೂ ಒಂದು ವಿಧ. ಈ ಪುಷ್ಪಕ ವಿಮಾನವು ಅರ್ಧ ಯೋಜನದಷ್ಟು ಅಗಲ ಹಾಗೂ ಒಂದು ಯೋಜನದಷ್ಟು ಉದ್ದವಾಗಿದ್ದು, ವಿಸ್ತಾರವಾಗಿತ್ತು. ಅಂದರೆ ಆಧುನಿಕ ಕಾಲದ ವಿಮಾನಗಳಿಗಿಂತ ಅದೆಷ್ಟೋ ದೊಡ್ಡದಾಗಿತ್ತು.ವಿಮಾನದ ಹೊದಿಕೆಯನ್ನು ಅಪರಂಜಿ ಚಿನ್ನದಿಂದ ಮಾಡಲಾಗಿದ್ದು, ಬೆಳ್ಳಿಯ ಸ್ತಂಭಗಳಿಂದ ಅಲಂಕೃತವಾಗಿತ್ತು. ಹೊಳೆವ ಸೂರ್ಯನ ಪ್ರಕಾಶಕ್ಕೆ ಸಮನಾಗಿ ಬೆಳಗುತ್ತಿತ್ತು. ಪುಷ್ಪಕ ವಿಮಾನದ ಇನ್ನೊಂದು ರೋಚಕ ವಿಷಯವೇನೆಂದರೆ, ಸ್ವಾಮಿಯ ಮನಸ್ಸಿಗೆ ಅನುಸಾರವಾಗಿ, ಆತ ಮನಸ್ಸಿನಲ್ಲಿ ನಿಶ್ಚಯಿಸಿದ ಸ್ಥಳಕ್ಕೆ ಆ ವಿಮಾನವು ವಾಯು ವೇಗದಲ್ಲಿ    ಸಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ, ಅಂದರೆ 2013 ರಲ್ಲಿ ಅಮೆರಿಕಾದ ವಿಶ್ವವಿದ್ಯಾನಿಲಯದ ಸಂಶೋಧಕರು ಪುಷ್ಪಕ ವಿಮಾನವನ್ನು ಆಧಾರವಾಗಿರಿಸಿಕೊಂಡು, ಮಾನವನ ಆಲೋಚನಾ ಶಕ್ತಿಯಿಂದ ಹಾರಿಸಬಹುದಾದ ವಿಶೇಷ ವಿಮಾನದ ಮಾದರಿಯನ್ನ ತಯಾರಿಸಿದರು. ಎಲ್ಲೋರಾ ಗುಹೆಯ ದೇವಾಲಯಗಳಲ್ಲಿರುವ ರಾವಣನ ಪುಷ್ಪಕ ವಿಮಾನದ ಕೆತ್ತನೆಗಳನ್ನು ಆಧುನಿಕ ಜೆಟ್ಪ್ಯಾಕ್ ನೊಂದಿಗೆ ಹೋಲಿಸಬಹುದು. ವಿಶ್ವಕರ್ಮನ ಕೌಶಲ್ಯದಿಂದ ನಿರ್ಮಿತವಾದ ವಿಮಾನದಲ್ಲಿ ಸುವರ್ಣಮಯವಾದ ಸೋಪಾನುಗಳಿದ್ದು, ಜಗದ ಶ್ರೇಷ್ಠತೆಗಳಿಂದ ಕೂಡಿತ್ತು. ಆಧುನಿಕ ಕಾಲದ ವಿಮಾನಕ್ಕೆ ಹೋಲಿಸಿ ನೋಡಿದರೆ ಯಾವ ಕೊರತೆಯೂ ಇಲ್ಲದಂತಿತ್ತು. ಇಂತಹ ಶ್ರೇಷ್ಠತರವಾದ ಪುಷ್ಪಕ ವಿಮಾನವನ್ನು ವಾನರಶ್ರೇಷ್ಠ ಮಾರುತಿ ರಾವಣನ ಅರಮನೆಯಲ್ಲಿ ಕಂಡನು.

|| ಓಂ ಆಂಜನೇಯಾಯ ನಮಃ ||