Guruvani |ಗುರುವಾಣಿ 19 |

Guruvani |ಗುರುವಾಣಿ 19 |

ಸುಂದರಕಾಂಡ ಅಧ್ಯಾಯ-6 & 7 ಸೀತಾಮಾತೆಯ

||ಓಂ ಆಂಜನೇಯಾಯ ನಮಃ||

 

ಶೋಧನೆ



ಶುಭಲಕ್ಷಣ ಸಂಪನ್ನನಾದ ಆಂಜನೇಯ ಹೊಳೆವ ಸೂರ್ಯನ ಕಾಂತಿಯಂತೆ ಪ್ರಕಾಶಿಸುತ್ತಿದ್ದ ರಾವಣನ ಅರಮನೆಗೆ ಬಂದ ವಿಷಯವನ್ನು ಹಿಂದಿನ ಗುರುವಾಣಿಯಲ್ಲಿ ನಾವೆಲ್ಲಾ ತಿಳಿದಿದ್ದೇವೆ. ಬನ್ನಿ ಸುಂದರಕಾಂಡದ ಆರು ಮತ್ತು ಏಳನೇ ಅಧ್ಯಾಯಗಳ ಬಗ್ಗೆ ಇಂದು ನಾವು ತಿಳಿಯೋಣ. ವಾಯುಪುತ್ರ ಸೀತಾ ಮಾತೆಯ ಶೋಧನ ಕಾರ್ಯವನ್ನು ಮುಂದುವರೆಸುತ್ತಾನೆ. ರಾವಣನ ಅರಮನೆಯನ್ನು ನೋಡಿದ ಹನುಮಂತನಿಗೆ ಒಂದೆಡೆ ಆಶ್ಚರ್ಯವಾದರೆ, ಮತ್ತೊಂದೆಡೆ ಸೀತಾ ಮಾತೆಯನ್ನು ಕಾಣದೆ ಚಿಂತೆ ಆವರಿಸುತ್ತದೆ.ರಾವಣನ ಅರಮನೆಯ ವೈಭವವು ವರ್ಣನೆಗೆ ಮಿಗಿಲಾಗಿದ್ದು, ಅದು ಭೂ ಮಂಡಲದ ವಿಸ್ಮಯವೇ ಆಗಿತ್ತು. ಆರಮನೆಯು ಛತ್ರ, ಚಾಮರ, ಸಿಂಹಾಸನ ಇತ್ಯಾದಿಯಾದ ರಾಜ ಚಿಹ್ನೆಗಳಿಂದ ಸಿಂಗರಿಸಲ್ಪಟ್ಟಿತ್ತು. ಬಲಿಷ್ಟರಾದ ರಾಕ್ಷಸರಿಂದ ನಿಬಿಡವಾಗಿತ್ತು. ಭೇರಿ, ಮೃದಂಗ ಮುಂತಾದ ವಾದ್ಯಗಳಿಂದಲೂ,ಶಂಖದ ಧ್ವನಿಯಿಂದಲೂ ನಿನಾದಿತವಾಗಿತ್ತು. ಮಹಾರತ್ನಗಳಿಂದ ಕೂಡಿದ ಅರಮನೆಯು ತನ್ನ ಕಾಂತಿಯಿಂದ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಸೀತಾ ಮಾತೆಯನ್ನು ಹುಡುಕುತ್ತಾ, ಒಂದು ಸೌಧದಿಂದ ಮತ್ತೊಂದು ಸೌಧಕ್ಕೆ ಜಿಗಿಯುತ್ತಾ, ಸುತ್ತಲೂ ಇದ್ದ ಉದ್ಯಾನವನಗಳಲ್ಲಿ ಮಾರುತಿಯು ನಿರ್ಭಯವಾಗಿ ಸಂಚರಿಸಿದನು. ವಾಯುನಂದನನು ಭಯಂಕರ ರಾಕ್ಷಸರಾದ ಮಹಾಪಾಶ್ವ, ಕುಂಭಕರ್ಣ, ಮಹೋದರ, ವಿರೂಪಾಕ್ಷ, ಶುಕ, ಸಾರಣ, ದೂಂಬ್ರಾಕ್ಷ, ಸಂಹಾಟಿ, ಶುಖನಾಸ, ವಿಖಟ ಮುಂತಾದ ರಾಕ್ಷಸ ಶ್ರೇಷ್ಠರ ಅರಮನೆಗಳನ್ನು ಜಿಗಿಯುತ್ತಾ ಹೋದನು. ಆದರೆ ಕಪಿಶ್ರೇಷ್ಟನು ಈ ಆರಮನೆಗಳಲ್ಲಿ ಅಪಾರವಾದ ಸಂಪತ್ತುಗಳನ್ನು ಕಂಡನೇ ಹೊರತು ಸೀತಾ ಮಾತೆಯನ್ನು ಕಾಣಲಿಲ್ಲ. ನಿರಾಶನಾದ ವಾಯುಪುತ್ರನು ಪುನಃ ರಾವಣನ ಮಹಾ ಅರಮನೆಯನ್ನು ಸೇರಿ, ಕೈಗೊಂಡ ಸ್ವಾಮಿ ಕಾರ್ಯದ ನಿಮಿತ್ತ ಬಹುವಿಸ್ತ್ರಿತವಾದ ರಾವಣನ ಅರಮನೆಯಲ್ಲಿಯೇ ಶೋಧನ ಕಾರ್ಯವನ್ನು ಮುಂದುವರೆಸಿದನು. ರಾವಣನ ಅಂತಸ್ತಿಗೆ ಅನುರೂಪವಾಗುವ ಈ ಅರಮನೆಯಲ್ಲಿ ಅತ್ಯಂತ ಶೋಭೆಯಿಂದ ಮೆರೆಯುವ ಪುಷ್ಪಕ ವಿಮಾನವನ್ನು ಕಪೀಶ್ವರ ಕಾಣುತ್ತಾನೆ, ಪುಷ್ಪಕ ವಿಮಾನದಲ್ಲಿ ಲಂಕೆಯ ಸಂಪೂರ್ಣ ಚಿತ್ರವನ್ನು ಸುಂದರವಾಗಿ ಚಿತ್ರಿಸಲಾಗಿತ್ತು. ಪರ್ವತ, ನದಿ, ಸರೋವರ, ಸಮುದ್ರ, ಪ್ರಾಣಿಪಕ್ಷಿಗಳನ್ನು ನಾನಾ ವಿಧವಾದ ಮುತ್ತು ರತ್ನಗಳಿಂದ ಚಿತ್ರಿಸಲಾಗಿತ್ತು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪದ್ಮ ಸರೋವರದಲ್ಲಿ ವಿರಾಜಿಸುವಂತೆ ಚಿತ್ರಿಸಲಾಗಿತ್ತು. ಆದರೆ ಪರಮಪೂಜ್ಯಳಾದ ಜಾನಕಿಯನ್ನು ಕಾಣದೆ ಮನಸಿನಲ್ಲಿಯೇ ವಿಚಾರ ಮಾಡುತ್ತಾ, ಸದಾಚಾರ ಸಂಪನ್ನ ಹನುಮಂತನು ದುಃಖಿತನಾದನು. ಇದು ಇಂದಿನ ಗುರುವಾಣಿ,

|| ಓಂ ಆಂಜನೇಯಾಯ ನಮಃ||