Guruvani | ಗುರುವಾಣಿ 14| ಸುಂದರಕಾಂಡ ಅಧ್ಯಾಯ 1: ಹನುಮಂತನ ಸಾಗರ ಲಂಘನ

Guruvani | ಗುರುವಾಣಿ 14| ಸುಂದರಕಾಂಡ ಅಧ್ಯಾಯ1: ಹನುಮಂತನ ಸಾಗರ ಲಂಘನ

||ಓಂ ಆಂಜನೇಯಾಯ ನಮಃ||

 

ಜ್ಞಾನ ಮತ್ತುಗುಣಗಳ ಮಹಾ ಸಾಗರ, ವಜ್ರಾಯುಧದಾರಿ, ವಿಜಯದ ಪಾತಕೆ ಹೊಂದಿರುವ ಕೇಸರಿಪುತ್ರ,

ಶಂಕರ ಅವತಾರಿಗೆ ನಮನಗಳು.

ರಾಮಾಯಣದ ಒಂದು ಭಾಗವಾದ ಈ ಸುಂದರಕಾಂಡ ಸುಂದರಮೂರ್ತಿಯ ಸಾಹಸವೈಭವಗಳನ್ನು ವರ್ಣಿಸುತ್ತದೆ. ಈ ಸುಂದರಕಾಂಡದ ಮೊದಲನೇ ಅಧ್ಯಾಯದ ಸೂಕ್ಷ್ಮಪರಿಚಯವೇ ಇಂದಿನ ಗುರುವಾಣಿ.

ಈ ಅಧ್ಯಾಯ, ಹನುಮಂತನ ಸಾಗರ ಲಂಘನ ಹಾಗೂ ಮಾರ್ಗ ಮಧ್ಯದಲ್ಲಿ ರಾಕ್ಷಸಿಯರ ಸಂಹಾರದ ವಿಷಯವನ್ನು ಒಳಗೊಂಡಿದೆ.

ಶತ್ರು ಸಂಹಾರಕನಾದ ಹನುಮಂತನು ತನ್ನ ಅದ್ಭುತ ಶಕ್ತಿಯನ್ನು ಸ್ಮರಿಸಿಕೊಂಡು ಸೀತಾಮಾತೆಯ ಜಾಡನ್ನು ಹುಡುಕುವ ಸಲುವಾಗಿ ಹನುಮಂತನಿಗೆ ಹನುಮಂತನೇ ಸಾಟಿಎಂಬರೀತಿಯಲ್ಲಿ ಮಹಾಬಲನಾಗಿ ವಜ್ರದಂತೆ ಶೋಭಿಸುತಿದ್ದನು. ಪ್ರತಿಭಾಶಾಲಿಯಾದ ಹನುಮಂತನು ಕೊಬ್ಬಿದ ಸಿಂಹದಂತೆ ವಿಜೃಂಭಿಸಿದನು.

ಸರ್ವಕಾರ್ಯ ಸಮರ್ಥನಾದ ಮಾರುತಿಯು ಪೂರ್ವಾಭಿಮುಖವಾಗಿ ನಿಂತು ತನ್ನ ಜನ್ಮದಾತನಾದ ವಾಯುದೇವನಿಗೆ ನಮಸ್ಕರಿಸಿ, ಸಮುದ್ರವನ್ನು ಲಂಘಿಸುವ ಸಲುವಾಗಿ ಹೆಚ್ಚು ಹೆಚ್ಚು ಎತ್ತರವಾಗಿ ಬೆಳೆಯತೊಡಗಿದನು. ಮಾರುತಿಯ ಕೈಕಾಲುಗಳಿಂದ ಅದುಮಲ್ಪಟ್ಟ ಮಹೇಂದ್ರ ಪರ್ವತವು ತನ್ನೊಳಗೆ ಅಡಗಿದ್ದ ಬಂಗಾರ,ಬೆಳ್ಳಿ ಮುಂತಾದ ಧಾತುಗಳನ್ನು ಹೊರಹಾಕಿತು. ಮಹೇಂದ್ರ ಪರ್ವತವು ಕಂಪಿಸಿದಾಗ ಗುಹೆಗಳಲ್ಲಿ ವಾಸವಾಗಿದ್ದ ಎಲ್ಲಾ ಪ್ರಾಣಿಗಳು ಭಯದಿಂದ ಅರ್ಥನಾದ ಮಾಡಿದವು.

ಮಹೇಂದ್ರ ಪರ್ವತದಲ್ಲಿ ಆಶ್ರಯಪಡೆದಿದ್ದ ಸಾಧು ಸನ್ಯಾಸಿಗಳು ಭಯದಿಂದ ಅಂತರಿಕ್ಷಕ್ಕೆ ಹಾರಿದರು.ಹಾರಲು ಸನ್ನದ್ಧನಾದ ಮಾರುತಿಯು ತನ್ನ ಬಾಲವನ್ನು ಜೋರಾಗಿ ಕೊಡವಿದನು. ಅದು ಮಹಾಸರ್ಪದಂತೆ ಕಾಣುತಿತ್ತು. ಹೀಗೆ ಹಾರಲು ಸಿದ್ಧನಾಗಿ ನಿಂತ ಕಪಿಶ್ರೇಷ್ಠ ಇತರ ವಾನರರನ್ನು ಸಂಬೋಧಿಸಿ ಲಂಕಾಪಟ್ಟಣದಲ್ಲಿ ಸೀತೆಯನ್ನು ಹುಡುಕಲು ಸಾಧ್ಯವಾಗದಿದ್ದರೆ ಲಂಕೆಯನ್ನೇ ಕಿತ್ತು, ರಾವಣನನ್ನು ಇಲ್ಲಿಗೆ ತರುತ್ತೇನೆಂದು ಆಶ್ವಾಸನೆ ನೀಡಿದನು.

ಹನುಮಂತನ ವೇಗಕ್ಕೆ ಸಮುದ್ರವೇ ಕಂಪಿಸಲಾರಂಭಿಸಿತು, ಜಲಚರಗಳಾದ ಮೊಸಳೆ, ಮೀನು, ಆಮೆಗಳು ಮೇಲಕ್ಕೆ ಜಿಗಿಯುತ್ತಿದ್ದವು.

ಶ್ರೀ ರಾಮನ ಕಾರ್ಯಸಿದ್ಧಿಗಾಗಿ ಪ್ರಯಾಣಿಸುತಿದ್ದ ಸಾಗರೋತ್ತಕನಿಗೆ ಸೂರ್ಯನು ಸಹ ತಾಪವನ್ನುಂಟು ಮಾಡಲಿಲ್ಲ. ಮಹಾಋಕ್ಷ ಮತ್ತು ಲತೆಗಳಿಂದ ಕೂಡಿದ್ದ ಮೈನಾಕ ಪರ್ವತ ಮೇಲೆದ್ದು ತನ್ನಲ್ಲಿ ಸ್ವಲ್ಪ ಕಾಲ ವಿಶ್ರಮಿಸಿ ಆತಿಥ್ಯ ಸ್ವೀಕರಿಸಬೇಕೆಂದು ಕೇಳಿತು. ಆದರೆ ಕಪಿಶ್ರೇಷ್ಟ ಆಕಾಶದಿಂದಲೇ ಮೈನಾಕ ಪರ್ವತವನ್ನು ಮುಟ್ಟಿ ಪಯಣ ಮುಂದುವರಿಸಿದನು.. ಮಾರ್ಗ ಮಧ್ಯದಲ್ಲಿ ಹನುಮಂತನ ಭಕ್ತಿ ಮತ್ತು ಶ್ರದ್ಧೆಯನ್ನು ಪರೀಕ್ಷಿಸಲು ಘೋರರಾಕ್ಷಸಿ ಸುರಸಾದೇವಿ, ತಡೆ ಒಡ್ಡಿದಳು.ಆಂಜನೇಯ ತನ್ನ ವಿಶೇಷ ಶಕ್ತಿಯಿಂದ ಆಕೆಯನ್ನು ಜಯಸಿದನು.

ಇದಾದ ನಂತರ ಕಾಮರೂಪಿಣಿಯಾದ ಸಿಂಹಿಕೆಯೆಂಬ ರಾಕ್ಷಸಿ ಹನುಮಂತನನ್ನು ನುಂಗಲು ದೊಡ್ಡದಾಗಿ ಬಾಯಿತೆರೆದುಕೊಂಡಳು. ಆದರೆ ಹನುಮಂತ ಸಮಯಪ್ರಜ್ಞೆ, ಧೈರ್ಯ ಮತ್ತು ಚತುರತೆಯಿಂದ ಆಕೆಯ ಎದೆಯನ್ನು ಸೀಳಿ ಸಂಹಾರ ಮಾಡಿದನು.

ಧೈರ್ಯ, ದೂರದೃಷ್ಟಿ,ಬುದ್ಧಿ ಮತ್ತು ಕಾರ್ಯಕುಶಲತೆ ಈ ನಾಲ್ಕು ಗುಣಗಳಿಗೆ ಒಡೆಯನಾದ ಹಮುಮಂತ ಗರುಡನಂತೆ ಪುನಃ ಪ್ರಯಾಣ ನಡೆಸಿದನು. ನೂರಾರು ಯೋಜನಗಳ ಪ್ರಯಾಣ ಮಾಡಿದ ನಂತರ ವಿವಿಧ ರುಕ್ಷಗಳಿಂದ ಅಲಂಕೃತವಾಗಿದ್ದ ಲಂಕಾದ್ವೀಪವನ್ನು ನೋಡಿದನು. ಲಂಕೆಯನ್ನು ನೋಡಿದ ಕೂಡಲೇ ಈ ವಾನರ ತನ್ನ ದೊಡ್ಡದಾದ ರೂಪವನ್ನು ತ್ಯಜಿಸಿ ಹಿಂದಿನ ರೂಪಧಾರಣೆ ಮಾಡಿ ಅಮರಾವತಿಯಿಂತಿದ್ದ ಲಂಕಾ ದ್ವೀಪದಲ್ಲಿ ಇಳಿದನು.

ಆಂಜನೇಯ ಭಕ್ತರೆ ಆಂಜನೇಯನ ನಾಲ್ಕು ಗುಣಗಳಾದ ಧೈರ್ಯ, ಬುದ್ಧಿ , ದೂರದೃಷ್ಟಿ ಮತ್ತು ಕಾರ್ಯಕುಶಲತೆ ಇದ್ದರೆ ಯಾವುದೇ ಕಾರ್ಯವಾದರೂ ಸಿದ್ಧಿಯಾಗುತ್ತದೆ.ಹೇ ಮುಖ್ಯಪ್ರಾಣ, ನಮಗೆಲ್ಲರಿಗೂ ಈ ಗುಣಗಳನ್ನು ದಯಪಾಲಿಸು.

|| ಓಂಆಂಜನೇಯಾಯನಮಃ ||