Guruvani | ಗುರುವಾಣಿ 13 :ಸುಂದರಕಾಂಡದ ಪರಿಚಯ

Guruvani | ಗುರುವಾಣಿ 13 :ಸುಂದರಕಾಂಡದ ಪರಿಚಯ

||ಓಂ ಆಂಜನೇಯಾಯ ನಮಃ||

 

ಹಿಂದೂಗಳ ಮಹಾಕಾವ್ಯಗಳಲ್ಲಿ ಒಂದಾದ ವಾಲ್ಮೀಕಿ ವಿರಚಿತ ರಾಮಾಯಣವು ಪೌರಾಣಿಕ ಸಾಮ್ರಾಜ್ಯದ ಕೋಸಲದ ರಾಜಕುಮಾರ ಶ್ರೀರಾಮನ ಜೀವನದ ವೃತ್ತಾಂತವನ್ನು ವಿವರಿಸುತ್ತದೆ.ಈ ಮಹಾಕಾವ್ಯವು ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಯುದ್ಧಕಾಂಡ, ಸುಂದರಕಾಂಡ, ಹಾಗೂ ಉತ್ತರಕಾಂಡಗಳೆಂಬ 7ವಿಭಾಗಗಳನ್ನು ಒಳಗೊಂಡಿದೆ. ರಾಮಾಯಣವು ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಶ್ರಯ ಕಾವ್ಯ. ಸಂಸ್ಕೃತಿ, ಸಮಾಜ, ರಾಜನೀತಿ, ಮಾನವ ಧರ್ಮ, ಹೀಗೆ ಜೀವನದ ಎಲ್ಲಾ ಕ್ಷೇತ್ರಗಳನ್ನು ಪ್ರತಿಬಿಂಬಿಸುವ ಮಹಾಗ್ರಂಥ. ವಜ್ರಕಾಯ, ಚಿರಂಜೀವಿ, ಸುಗ್ರೀವ ಸಚಿವ, ಹಾಗೂ ರಾಮನ ಬಂಟ ಆಂಜನೇಯನ ಸಾಹಸ ಹಾಗೂ ಈ ಮಾರುತಿಯ ಲೀಲಾ ವೈಭವಗಳನ್ನು ಸುಂದರ ಕಾಂಡದಲ್ಲಿ ಅತಿ ಸುಂದರವಾಗಿ ವಿವರಿಸಲಾಗಿದೆ. ಸಕ್ಕರೆಯ ಬೊಂಬೆಯ ಯಾವ ಭಾಗವನ್ನು ಸವಿದರೂ ಅದು ಸವಿಯೇ, ಹಾಗೆಯೇ ಸುಂದರಕಾಂಡ ಸೌಂದರ್ಯವನ್ನೇ ಸ್ರವಿಸುತ್ತದೆ. ಇದು ಸೌಂದರ್ಯರಾಶಿಯ ನಿಧಿಯೇ ಆಗಿದ್ದು ಇದನ್ನು ಸಂಸ್ಕೃತದಲ್ಲಿ, ಸುಂದರಿ ಆಹಾ ಸುಂದರಿ ಸುಂದರಿ ಈ ಸುಂದರಿ ಸುಂದರಿ ಸೀತಾ ಸುಂದರಿ ಕಿಮ್ ನ ಸುಂದರ ಎಂದು ವರ್ಣಿಸಲಾಗಿದೆ.

ಸುಂದರಕಾಂಡ ಅನೇಕ ಸುಂದರರ ಸಾಹಸದ ವರ್ಣನೆಯನ್ನು ಒಳಗೊಂಡಿದ್ದರೂ ಸಹ ಈ ಕಾಂಡದ ಮುಖ್ಯಪಾತ್ರಧಾರಿ ಮುಖ್ಯಪ್ರಾಣ ಆಂಜನೇಯ. ಈ ಕೇಸರಿ ನಂದನನ ರೂಪ, ಗುಣ, ಶೀಲ, ಹಾಗೂ ಕೃತಿ ಎಲ್ಲವೂ ಸುಂದರ. ಸಂತವರೇಣ್ಯರಾದ ಶ್ರೀ ಪುರಂದರದಾಸರು ಕೂಡ ‘ಸುಂದರ ಮೂರುತಿ ಮುಖ್ಯಪ್ರಾಣ ಮನೆಗೆ ಬಂದ’ ಎಂದು ಹಾಡಿದರು.

ಸುಂದರಕಾಂಡ 68 ಸರ್ಗ ಅಥವಾ ಅಧ್ಯಾಯಗಳನ್ನು ಹೊಂದಿದ್ದು ಇದರಲ್ಲಿ 2800ರಕ್ಕೂ ಅಧಿಕ ಪದ್ಯಗಳಿವೆ. ಈ ಕಾಂಡವು ಹನುಮಂತ ಸಮುದ್ರ ದಾಟುವ ತಯಾರಿಯಿಂದ ಹಿಡಿದು ರಾವಣನ ಅರಮನೆ, ಪುಷ್ಪಕ ವಿಮಾನದ ವರ್ಣನೆ, ಅಶೋಕ ವನದ ಪ್ರವೇಶ, ಸೀತಾ ಮಾತೆಯ ದರ್ಶನ, ರಾವಣ ಹನುಮರ ಭೇಟಿ, ರಾಕ್ಷಸರ ಸಂಹಾರ, ಲಂಕಾ ದಹನ, ಸೀತಾಮಾತೆಯನ್ನು ಪುನಃ ಕರೆತಂದ ಕಪಿಶ್ರೇಷ್ಠನ ಸಾಹಸವನ್ನು ವರ್ಣಿಸುತ್ತದೆ.

ಸುಂದರಕಾಂಡದ ಅಧ್ಯಯನ ಆತ್ಮವಿಶ್ವಾಸವನ್ನು ಮತ್ತು ಭರವಸೆಯನ್ನು ಮೂಡಿಸಿ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ನಮ್ಮ ಮುಂದಿನ ಗುರುವಾಣಿಯಲ್ಲಿ ಈ ಸುಂದರಕಾಂಡದ ಆಯ್ದ ಸರ್ಗಗಳನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನ ಮಾಡುತ್ತೇವೆ.

||ಓಂ ಆಂಜನೇಯಾಯ ನಮಃ||