Guruvani| ಗುರುವಾಣಿ 24| ಸುಂದರಕಾಂಡ ಅಧ್ಯಾಯ 14 -15 :

Guruvani| ಗುರುವಾಣಿ 24| ಸುಂದರಕಾಂಡ ಅಧ್ಯಾಯ 14 -15 :

ಅಶೋಕವನದಲ್ಲಿ ಸೀತಾದೇವಿಯನ್ನು ಕಂಡಿದ್ದು

||ಓಂ ಆಂಜನೇಯಾಯ ನಮಃ||

 

ಮಹಾ ತೇಜಸ್ವಿ, ಅಸುರರ ಸಂಹಾರಕ, ಮುಖ್ಯಪ್ರಾಣ ಆಂಜನೇಯ ಆಶೋಕವನವನ್ನು ಸೇರಿದ ವಿಚಾರವನ್ನು ಹಿಂದಿನ ವಾರ ನಾವೆಲ್ಲರೂ ತಿಳಿದಿದ್ದೇವೆ. ಬನ್ನಿ ಮುಂದೆ ನೋಡೋಣ. ವಸಂತ ಋತುವಿನ ಪ್ರಾರಂಭದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ವಿಧ ವಿಧವಾದ ವೃಕ್ಷಗಳನ್ನು ಮುಖ್ಯಪ್ರಾಣ ಆ ಅಶೋಕವನದಲ್ಲಿ ನೋಡಿದನು. ಮದಿಸಿದ ದುಂಬಿಗಳು, ಮಯೂರ ಮತ್ತು ಕೋಗಿಲೆಗಳು ನಿನಾದ ಮಾಡುತ್ತಿದ್ದವು. ನಾನಾ ವಿಧದ ಪಕ್ಷಿಗಳ ಸಮೂಹ, ಹಾವು, ಮೃಗಗಳ ಹಿಂಡಿನಿಂದ ಆ ಆಶೋಕವನ ಸಮಾಹೃತವಾಗಿತ್ತು. ಹನುಮಂತನು ಆಶೋಕವನದ ಎಲ್ಲಾ ಕಡೆಗಳಲ್ಲಿ ಜಾನಕಿಗಾಗಿ ಹುಡುಕುತ್ತಾ ವೃಕ್ಷಗಳ ಸಮೂಹದಲ್ಲಿ ನುಸುಳಿಕೊಂಡು ಓಡಾಡುತ್ತಿದ್ದನು. ಜಾನಕಿ ಆಶೋಕವನದಲ್ಲಿಯೇ ಇರುವಳೆಂದು ಮನಸ್ಸಿನಲ್ಲಿ ಖಚಿತಪಡಿಸಿಕೊಂಡು, ಶ್ರೀ ರಾಮನ ಆದರಣೀಯ ಪತ್ನಿ ಹಾಗೂ ಶುಭ ಸ್ವರೂಪಳೂ ಆದ ಸೀತಾದೇವಿ ಸ್ನಾನ, ಧ್ಯಾನಾದಿಗಳಿಗಾಗಿ ನದಿ ತೀರಕ್ಕೆ ಬಂದೇ ಬರುವಳೆಂದು ಸೀತಾ ದೇವಿಯ ಬರುವಿಕೆಯ ಪ್ರತೀಕ್ಷೆ ಮಾಡುತ್ತಾ ಕುಳಿತನು. ಹಾಗೆ ಕುಳಿತ ವಾನರೋತ್ತಮನು ಮತ್ತೊಂದು ಕಡೆಗೆ ದೃಷ್ಟಿಯನ್ನು ಹರಿಸಿದಾಗ ದೂರದಲ್ಲಿ ಅತ್ಯಂತ ಉನ್ನತವಾದ, ನಿರ್ಮಲ ಹಾಗು ವರ್ತುಲಕಾರವಾದ ಒಂದು ಚೈತ್ಯ ಪ್ರಾಸಾದವು ಅವನಿಗೆ ಕಾಣಿಸಿತು. ಅದು ಬಿಳಿಯಾಗಿ ಕೈಲಾಸ ಪರ್ವತದಂತೆ ಶೋಭಿಸುತ್ತಿತ್ತು. ಅದರ ಸೋಪಾನವು ಹವಳದ ಮಣಿಗಳಿಂದ ನಿರ್ಮಿತವಾಗಿತ್ತು. ಅದರ ಬಳಿಯಲ್ಲಿಯೇ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಸೀತಾದೇವಿಯನ್ನು ಮುಖ್ಯಪ್ರಾಣ ನೋಡುತ್ತಾನೆ. ಆದರೆ ಅವಳ ವಸ್ತ್ರವು ಮಲಿನವಾಗಿತ್ತು. ಘೋರ ರೂಪಿಣಿಯರಾದ ರಾಕ್ಷಸಿಯರಿಂದ ಅವಳು ಸುತ್ತುವರಿಯಲ್ಪಟ್ಟಿದ್ದಳು. ಅತ್ಯಂತ ಚಿಂತಕ್ರಾಂತಳಾಗಿದ್ದ ಸೀತಾದೇವಿಯು, ಕಮಲರಹಿತವಾದ ಹಾಗೂ ಕೆಸರಿನಿಂದ ಕೂಡಿದ ಸರೋವರದಂತೆ ಕಾಣುತ್ತಿದ್ದಳು. ಆಕೆ ದುಃಖವೆಂಬ ಸಾಗರದಲ್ಲಿ ಮುಳುಗಿಹೋಗಿದ್ದಳು. ಜಿಂಕೆಗಳ ಸಮೂಹದಿಂದ ತಪ್ಪಿಸಿಕೊಂಡು ನಾಯಿಗಳ ಮಧ್ಯದಲ್ಲಿರುವ ಹೆಣ್ಣು ಜಿಂಕೆಯಂತೆ ಕಾಣುತ್ತಿದ್ದಳು. ಸೀತಾದೇವಿ ಅಂಗ ಪ್ರತ್ಯಾಂಗ    ಸೌಷ್ಟವಗಳಿಂದ ಕೂಡಿರುವಂತಹ ಲೋಕಸುಂದರಿ. ಹನುಮಂತನಿಗೆ ಇವಳೇ ಸೀತೆಯೆಂದು ದೃಢವಾಗಿ, ವಾಯುನಂದನನು ಮಹಾನಂದಭರಿತನಾದನು. ಶ್ರೀರಾಮಚಂದ್ರನನ್ನು ಮನಸ್ಸಿನಲ್ಲಿಯೇ ಸ್ಮರಿಸುತ್ತಾ ತನ್ನ ಮಹತ್ಕಾರ್ಯಕ್ಕೆ ಜಯ ದೊರೆಯಿತೆಂದು ಹರುಷಗೊಂಡ ಆಂಜನೇಯ ಆಶೋಕವನದ ಸುತ್ತ ಕುಣಿದಾಡಿದನು. ಇದು ಈ ವಾರದ ಗುರುವಾಣಿ.
|| ಓಂ ಆಂಜನೇಯಾಯ ನಮಃ ||