Guruvani | ಗುರುವಾಣಿ 22

Guruvani | ಗುರುವಾಣಿ 22

ಸುಂದರಕಾಂಡ ಅಧ್ಯಾಯ 11-12: ಮುಂದುವರಿದ    ಸೀತಾ ಶೋಧನೆ

||ಓಂ ಆಂಜನೇಯಾಯ ನಮಃ||

 

ಶುಭ ಶನಿವಾರದ ಶುಭ ಸಂಜೆಯ ಈ ವಾರದ ಗುರುವಾಣಿಗೆ ಬನ್ನಿ. ವಜ್ರಕಾಯ, ಗುಣವಂತ, ಅತಿ ಚತುರನಾದ ಅಂಜನಿ ಪುತ್ರ ಆಂಜನೇಯನ ಸೀತಾನ್ವೇಷಣೆಯ ಕಾರ್ಯ ಮುಂದುವರೆಯಿತು. ರಾವಣೇಶ್ವರನ ಅರಮನೆಯಲ್ಲಿ ತಾನು ಕಂಡ ರೂಪ ಸಂಪನ್ನೆ ಸೀತಾದೇವಿ ಅಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಪಿಶ್ರೇಷ್ಠ, ಸ್ವಲ್ಪ ವಿಚಲಿತಗೊಂಡರೂ ಸಹ ಪುನಃ ಸಮಾಧಾನ ತಂದುಕೊಂಡು ರಾವಣನ ಅಂತಃಪುರದಲ್ಲಿ ಮತ್ತೆ ಉತ್ಸಾಹದಿಂದ ಸೀತೆಗಾಗಿ ಹುಡುಕಾಟ ಮುಂದುವರೆಸಿದ. ಅಂತಃಪುರದ ಸಮೀಪದಲ್ಲೇ ಇದ್ದ ಪಾನಗೃಹಗಳಲ್ಲಿ ಸಾವಿರಾರು ಅಂಗನೆಯರಿದ್ದರು. ಅವರೆಲ್ಲರೂ ಸುಂದರ ಮತ್ತು ಶ್ರೇಷ್ಠವಾದ ಅಭರಣಗಳಿಂದ ಅಲಂಕೃತರಾಗಿದ್ದರು. ಒಂದು ವಿಶಾಲವಾದ ಗೋಶಾಲೆಯಲ್ಲಿ ಉತ್ತಮ ಜಾತಿಯ ಆಕಳುಗಳ ಮಧ್ಯದಲ್ಲಿರುವ ಕೊಬ್ಬಿದ ಗೂಳಿಯಂತೆ ಮಹಾಬಾಹುವಾದ ರಾವಣೇಶ್ವರ ರಾರಾಜಿಸುತ್ತಿದ್ದ. ಸ್ತ್ರೀಯರ ಸಮೂಹವಲ್ಲದೆ ಬೇರೆ ಸ್ಥಳದಲ್ಲಿ ಸೀತಾದೇವಿ ಇರಲಾರಳೆಂದು ಮನಗೊಂಡ ಕಪಿಶ್ರೇಷ್ಠ ಶೋಧ ಕಾರ್ಯವನ್ನು ಮುಂದುವರೆಸಿದನು. ರಾವಣನ ಅರಮನೆಯ ಮಧ್ಯಭಾಗದಲ್ಲಿದ್ದ ಲತಾಗೃಹಗಳನ್ನು, ಚಿತ್ರಗೃಹಗಳನ್ನು ಮತ್ತು ವಿಹಾರಗೃಹಗಳನ್ನು ಹುಡುಕಿದ. ಆದರೆ ಕಪಿಮಹಾರಾಜನ ಈ ಪ್ರಯತ್ನ ಪ್ರಯೋಜನವಾಗಲಿಲ್ಲ. ಸೀತಾದೇವಿ ಕಾಣಸಿಗಲಿಲ್ಲ. ಆಗ ಹನುಮಂತ ಮತ್ತೆ ಚಿಂತೆಗೊಳಗಾದ. ಆತನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಬವಗೊಂಡವು ಸೀತಾದೇವಿ ದೇಹತ್ಯಾಗ ಮಾಡಿಬಿಟ್ಟಳೆ? ಈ ಮಹಾಸಮುದ್ರವನ್ನು ಹಾರಿಕೊಂಡು ಇಲ್ಲಿಗೆ ಬಂದ ಪ್ರಯತ್ನವು ವಿಫಲವಾಯಿತೆ? ನಾನೇನಾದರು ಹೀಗೆಯೇ ಹಿಂದಕ್ಕೆ ಹೋದರೆ ಇತರ ವಾನರರೆಲ್ಲರು ಸೇರಿ ನನ್ನನ್ನು ಪ್ರಶ್ನಿಸದೆ ಇರುವರೇ? ಜಾನಕಿಯನ್ನು ಹುಡುಕಲಾಗದೆ ನಾನು ಹಾಗೆಯೇ ಹಿಂದಕ್ಕೆ ನಡೆದರೆ ನನ್ನನ್ನು ಶಿಕ್ಷಿಸದೆ ಬಿಡುವರೆ? ಮುಂತಾದ ಪ್ರಶ್ನೆಗಳು ಆಂಜನೇಯನ ಮನಸ್ಸಿನಲ್ಲಿ ಉದ್ಭವಗೊಂಡವು. ಆದರೆ ವಜ್ರಾಯುಧದಾರಿ ಮುಖ್ಯಪ್ರಾಣ ಆಂಜನೇಯ ತನ್ನ ಮನಸ್ಸಿನ ಕಳವಳಕ್ಕೆ ತಾನೇ ಉತ್ತರ ಕಂಡುಕೊಂಡು, ಉತ್ಸಹ ಶೀಲತೆಯೇ    ಸಾಧನೆಯ ಮೂಲ ಮಂತ್ರ ಎಂಬುದನ್ನು    ಅರಿತುಕೊಂಡನು. ಅತಿ ಉತ್ಸಾಹದಿಂದ ರಾವಣನ ನೆಲಮಾಳಿಗೆ, ದೇವಾಲಯಗಳು ಮತ್ತು ಮಂಟಪಗಳು ಹೀಗೆ ಒಂದರಿಂದ ಒಂದಕ್ಕೆ ನೆಗೆಯುತ್ತಾ, ಧುಮುಕುತ್ತಾ ಜಾನಕಿಗಾಗಿ ಆ ಮಹಾಬಾಹುವೂ ಹಾಗೂ ಬುದ್ಧಿಶಾಲಿಯೂ ಆದ ವಾಯುನಂದನನು ತನ್ನ ಪ್ರಯತ್ನವನ್ನು ಮುಂದುವರೆಸಿದನು. ಆಂಜನೇಯ ಭಕ್ತರೆ ವಾಯುಪುತ್ರ ಹೇಳಿದ ಉತ್ಸಾಹಶೀಲತೆ ಎಂಬ ಮಂತ್ರವನ್ನು ನಮ್ಮೆಲ್ಲರ ಜೀವನದ ಬಂಡಿಯ ಎರಡು ಚಕ್ರಗಳನ್ನಾಗಿಸಿಕೊಂಡು, ನಮ್ಮ ಜೀವನದ ಗುರಿಯತ್ತ ಅತಿ ಉತ್ಸಾಹದಿಂದ ನಾವೆಲ್ಲರೂ ಮುಂದೆ ಮುಂದೆ ಸಾಗೋಣ. ಇದು ಈ ವಾರದ ಗುರುವಾಣಿ.

|| ಓಂ ಆಂಜನೇಯಾಯ ನಮಃ ||