Guruvani |ಗುರುವಾಣಿ18|ಸುಂದರಕಾಂಡ ಅಧ್ಯಾಯ 5

Guruvani |ಗುರುವಾಣಿ18|ಸುಂದರಕಾಂಡ ಅಧ್ಯಾಯ 5

ಚಂದ್ರನ ವರ್ಣನೆ

||ಓಂ ಆಂಜನೇಯಾಯ ನಮಃ||

 

ಆಂಜನೇಯ ಭಕ್ತರೇ ಮಹಾಬಲ, ವಜ್ರಕಾಯ,ಸುಗ್ರೀವ ಸಚಿವ ,ಮುಖ್ಯಪ್ರಾಣ ಆಂಜನೇಯನ ಪರಾಕ್ರಮದ ವರ್ಣನೆಯ ಸುಂದರಕಾಂಡದ ಐದನೇ ಅಧ್ಯಾಯಕ್ಕೆ ನಾವಿಂದು ಕಾಲಿಡುತ್ತಿದ್ದೇವೆ. ಇದರಲ್ಲಿ ಹುಣ್ಣಿಮೆ ಚಂದ್ರನನ್ನು ವರ್ಣಿಸಲಾಗಿದೆ. ಬನ್ನಿ ಅದರ ಬಗ್ಗೆ ತಿಳಿಯೋಣ. ಆಕಾಶದ ಮಧ್ಯ ಭಾಗದಲ್ಲಿ ಮದಿಸಿದ ವೃಷಭದಂತೆ ಸುತ್ತಾಡುತ್ತಾ ಅಪಾರವಾದ ಬೆಳದಿಂಗಳನ್ನು ಹೊರ ಚೆಲ್ಲುತ್ತಿರುವ ಚಂದ್ರನನ್ನು ಮಾರುತಿ ಕಾಣುತ್ತಾನೆ.ಆ ಬೆಳದಿಂಗಳು ದುಃಖ ತಪ್ತ ಜನರಿಗೆ , ಸರ್ವ ಪ್ರಾಣಿ ಪಕ್ಷಿಗಳಿಗೆ ಸುಂದರ ಬೆಳಕನ್ನು ನೀಡುತಿತ್ತು. ಪರ್ವತ, ಸಾಗರ, ಸರೋವರಗಳು ಚಂದ್ರನ ಅಮೃತ ಕಿರಣಗಳಿಂದ ಕಾಂತಿಯುಕ್ತವಾಗಿ ಪ್ರಕಾಶಿಸುತಿದ್ದವು. ಬೆಳ್ಳಿಯ ಪಂಜರದಿಂದ ಹಂಸದಂತೆ, ಮದಿಸಿದ ಆನೆಯ ಮೇಲೆ ಕುಳಿತಿರುವ ವೀರನಂತೆ ಚಂದ್ರನು ದೇದೀಪ್ಯಮಾನವಾಗಿ ಪ್ರಕಾಶಿಸುತಿದ್ದನು. ಚೂಪಾದ ಕೋಡುಗಳುಳ್ಳ ಗೂಳಿಯಂತೆಯೂ, ಎತ್ತರವಾದ ಶಿಖರಗಳಿರುವ ಪರ್ವತದಂತೆಯೂ, ಬಂಗಾರದ ಪಟ್ಟಿಗಳಿಂದ ಅಲಂಕೃತವಾದ ದಂತಗಳುಳ್ಳ ಆನೆಯಂತೆಯೂ, ಪೂರ್ಣ ಚಂದ್ರ ವಿರಾಜಿಸುತಿದ್ದನು. ಆಗಸದಲ್ಲಿ ವಿರಾಜಮಾನನಾಶಶಾಂಕನು ಶಿಲೆಯ ಮೇಲೆ ಸ್ಥಿರವಾಗಿ ನಿಂತಿರುವ ಸಿಂಹದಂತೆ, ಮಹಾರಣರಂಗದಲ್ಲಿ ನಿಂತಿರುವ ಗಜರಾಜನಂತೆ, ಕಳೆದುಹೋದ ರಾಜ್ಯ ಪಡೆದುಕೊಂಡ ಚಕ್ರವರ್ತಿಯಂತೆ, ಪ್ರಕಾಶಮಾನವಾಗಿ ಬೆಳಗುತಿದ್ದನು. ಪೌರ್ಣಿಮೆಯ ಪೂರ್ಣ ಚಂದ್ರೋದಯದಿಂದ ಜಗತ್ತಿನ ಅಂಧಕಾರವು ತೊಲಗಿ ಜನರು ಹರ್ಷದಿಂದಿದ್ದರು. ಸ್ತ್ರೀಪುರುಷರು ಪ್ರೀತಿ,ಅನುರಾಗದ ಒಡನಾಟದಲ್ಲಿ ಮುಳುಗಿದ್ದರು, ಸೀತಾನ್ವೇಷಣೆಯ ಸಮಯದಲ್ಲಿ ಈ ಲಂಕೆಯ ಪ್ರವೇಶದ ಸಮಯ ಹನುಮಂತನಿಗೆ ಸ್ವರ್ಗದಂತೆ ಸುಖದಾಯಕವಾಗಿತ್ತು. ವೀಣಾವಾದನದ ಮಧುರ ಶಬ್ದ, ಜಪ ತಪ, ಹೋಮಾದಿಗಳ ಕಂಪು, ವಜ್ರ ವೈಡೂರ್ಯಗಳಿಂದ ಕೂಡಿದ ಭವನಗಳು, ಬಿಳಿಯ ಅಶ್ವ ರಥ, ಆನೆಗಳು ಈ ಲಂಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ಮದವೇರಿದ ರಾಕ್ಷಸರು, ಭುಸುಗುಟ್ಟುವ ಸರ್ಪಗಳಂತೆ ಓಡಾಡುತ್ತಿದ್ದರು. ಆದರೆ ಚೆಲುವೆಯಾದ, ಲತೆಯಂತಿದ್ದ,ಧರ್ಮಭಕ್ತಿಭಾವ ಮಾರ್ಗದ ರಾಜಕುಲದಲ್ಲಿ ಬೆಳೆದ ಸೀತಾದೇವಿ ಮಾತ್ರ ಮಾರುತಿಗೆ ಎಲ್ಲೂ ಕಾಣಲಿಲ್ಲ.ನಾರೀರತ್ನಗಳಲ್ಲಿ ಶ್ರೇಷ್ಠಳು ,ಅಂದವಾದ ಹುಬ್ಬನ್ನು ಹೊಂದಿರುವವಳು,ಮಧುರಕಂಠಸ್ಥಳಾದ ಸೀತಾಮಾತೆಯನ್ನು ಕಾಣದೆ ಕಪೀಶ್ವರನಾದ ಹನುಮಂತನಿಗೆ ದುಃಖ ತುಂಬಿ ಬಂದು ಕ್ಷಣಕಾಲ ಅಜ್ಞಾನಿಯಂತೆ ದಿಕ್ಕುಕಾಣದವನಂತಾದ. ಮನಬಂದಂತೆ ರೂಪಧರಿಸುವ ಶಕ್ತಿಯನ್ನು ಹೊಂದಿದ್ದ ಕಪೀಶ್ವರನು ದುಃಖಿತನಾಗಿ ಸೀತಾಮಾತೆಯನ್ನು ಹುಡುಕುತ್ತ ವೇಗದಿಂದ ಮುಂದೆ ಮುಂದೆ ಸಾಗ ತೊಡಗಿದ..

||ಓಂ ಆಂಜನೇಯಾಯ ನಮಃ||