Guruvani | |ಗುರುವಾಣಿ15| ಸುಂದರಕಾಂಡಅಧ್ಯಾಯ 2

Guruvani | |ಗುರುವಾಣಿ15| ಸುಂದರಕಾಂಡಅಧ್ಯಾಯ 2

ಲಂಕೆಯ ವರ್ಣನೆ

||ಓಂ ಆಂಜನೇಯಾಯ ನಮಃ||

 

ಮಹಿರಾವಣಮರ್ದನ,ಸರ್ವವಿದ್ಯಾಸಂಪನ್ನ, ಬಲ ಸಿದ್ಧಿಕರಕೇಸರಿ ನಂದನನ ಪಾದಕಮಲಗಳಿಗೆ ನಮನಗಳು. ಈ ಸುಂದರ ಮೂರ್ತಿಯು ಸೀತಾನ್ವೇಷಣೆಯ ಸಮಯದಲ್ಲಿ ತೋರಿದ ಉತ್ಸಾಹ, ಧೈರ್ಯ, ಸಮಯಸ್ಫೂರ್ತಿ ಮತ್ತು ಪರಾಕ್ರಮದ ವರ್ಣನೆಯ ಮುಂದುವರೆದ ಭಾಗವೇ ಸುಂದರಕಾಂಡದ ಈ ಎರಡನೇ ಅಧ್ಯಾಯ. ಈ ಸರ್ಗದಲ್ಲಿ ಲಂಕಾ ಪಟ್ಟಣದ ವರ್ಣನೆ ಇದೆ.. ಮಹಾಬಲನಾದ ಹನುಮಂತನು ಅಸಾಧ್ಯವಾದ ಹಾಗೂ ಸಾಮಾನ್ಯರು ಊಹಿಸಲೂ ಸಾಧ್ಯವಾಗದ ಮಹಾಸಾಗರವನ್ನೇ ಲಂಘಿಸಿ ತ್ರಿಕೂಟ ಪರ್ವತದ ಶಿಖರದಲ್ಲಿರುವ ಲಂಕಾನಗರವನ್ನು ನೋಡುತ್ತಾನೆ. ಆ ಪರ್ವತದ ಮೇಲೆ ನಿಂತು ಕೇಸರಿನಂದನ ವನಗಳನ್ನು ಹಾಗೂ ಉಪವನಗಳನ್ನು ಕಾಣುತ್ತಾನೆ. ವಿವಿಧ ಬಗೆಯ ಮರ ಗಿಡಗಳಿಂದ ಕೂಡಿದ ಇದು ಸಸ್ಯ ಕಾಶಿಯಂತೆ ಕಂಗೊಳಿಸುತ್ತಿರುತ್ತದೆ, ತುಂಬಿದ ಸರೋವರದಲ್ಲಿ ಹಂಸ ಪಕ್ಷಿಗಳು ಮತ್ತು ಕಮಲಗಳು ರಾರಾಜಿಸುತ್ತಿರುತ್ತವೆ. ಸರ್ವ ಋತುಗಳಲ್ಲಿಯೂ ಫಲ ನೀಡುವ ಸಸ್ಯರಾಶಿಯು ವನಗಳನ್ನು ರಮ್ಯಮಯವಾಗಿಸಿರುತ್ತದೆ, ಇದಕ್ಕೂ ಸ್ವಲ್ಪ ದೂರದಲ್ಲಿ ಕಂದಕಗಳಿಂದ ಸುತ್ತುವರಿಯಲ್ಪಟ್ಟ ರಾವಣನಿಂದ ಪೋಷಿತವಾದ ಲಂಕಾಪಟ್ಟಣ ಆತನಿಗೆ ಕಾಣಿಸುತ್ತದೆ. ಸೀತೆಯನ್ನು ಅಪಹರಿಸಿದ ರಾವಣನಿಗೆ ಆಕೆಯನ್ನು ಹುಡುಕುತ್ತಾ ಶ್ರೀ ರಾಮ ಬರುತ್ತಾನೆಂಬ ಭಯವಿದ್ದ ಕಾರಣ ಪಟ್ಟಣದ ಸುತ್ತ ರಾಕ್ಷಸರನ್ನು ಕಾಯಲು ನಿಯೋಜಿಸಿದ್ದ. ಹಾಗೆ ರಾವಣನಿಂದ ನಿಯುಕ್ತರಾದ ರಾಕ್ಷಸರು ಭಯಂಕರ ಆಯುಧಗಳನ್ನು ಹಿಡಿದು ತಿರುಗಾಡುತಿದ್ದರು. ದೊಡ್ಡ ದೊಡ್ಡ ಸೌಧಗಳಿಂದ ಕೂಡಿದ್ದ ಲಂಕಾಪಟ್ಟಣದ ವಿಶಾಲವಾದ ರಾಜಬೀದಿಗಳಲ್ಲಿ ಧ್ವಜಗಳು ಹಾರಾಡುತಿದ್ದವು. ಲಂಕೆಯು ಸ್ವರ್ಗದ ಅಮರಾವತಿಯಂತೆ ಕಾಣುತಿತ್ತು. ವಿಷ ಸರ್ಪಗಳು ಗುಹೆಯನ್ನು ರಕ್ಷಿಸುವಂತೆ ಭಯಂಕರ ರಾಕ್ಷಸರು ಲಂಕಾಪಟ್ಟಣವನ್ನು ರಕ್ಷಿಸುತಿದ್ದರು. ಬಲಾಢ್ಯನಾದ ಹನುಮಂತನು ಬಲಿಷ್ಟರಾದ ರಾಕ್ಷಸರ ಕಣ್ಣು ತಪ್ಪಿಸಲು ಸೂಕ್ಷ್ಮ ರೂಪವನ್ನು ಧರಿಸುತ್ತಾನೆ. ರಾಕ್ಷಸರಿಂದ ತುಂಬಿದ್ದ ಈ ಲಂಕೆಯಲ್ಲಿ ವಾಯು ಕೂಡಾ ರಾಕ್ಷಸರಿಗೆ ತಿಳಿಯದಂತೆ ಚಲಿಸಲು ಸಾದ್ಯವಿರಲಿಲ್ಲ. ವೀರನಾದ ಕಪಿಶ್ರೇಷ್ಠ ಸೀತಾಮಾತೆಯೆನ್ನು ಕಾಣುವ ದೃಷ್ಟಿಯಿಂದ ಸೂರ್ಯಾಸ್ತದ ನಂತರ ತನ್ನ ದೇಹವನ್ನು ಕಿರಿದಾಗಿಸಿಕೊಂಡು ಲಂಕಾಪಟ್ಟಣವನ್ನು ಪ್ರವೇಶಿಸಿಸುತ್ತಾನೆ. ಸುವರ್ಣ, ವಜ್ರ ಹಾಗೂ ಸ್ಪಟಿಕ ಮಣಿಗಳಿಂದ ಕಂಗೊಳಿಸುತಿದ್ದ ಬೀದಿ ಭವನಗಳು ಊಹೆಗೂ ನಿಲುಕದಂತಿರುತ್ತವೆ. ನಕ್ಷತ್ರದ ಸಮೂಹಗಳೊಂದಿಗೆ ಹುಟ್ಟಿ ಅವುಗಳ ಮಧ್ಯ ವಿರಾಜಿಸುತಿದ್ದ ಚಂದ್ರ ಕೂಡಾ ಈ ವಾಯುಕುಮಾರನಿಗೆಗೆ ಸಹಾಯ ಮಾಡುವ ದೃಷ್ಟಿಯಿಂದ ಎಲ್ಲೆಡೆಯೂ ಬೆಳಕು ಚೆಲ್ಲಿದ್ದ.. ಈ ರೀತಿಯಾಗಿ ಲಂಕೆಯನ್ನು ವರ್ಣಿಸಲಾಗಿದೆ.

||ಓಂಆಂಜನೇಯಾಯನಮಃ||