Guruvani | ಗುರುವಾಣಿ 31| ಸುಂದರಕಾಂಡ ಅಧ್ಯಾಯ 23 :

Guruvani | ಗುರುವಾಣಿ 31| ಸುಂದರಕಾಂಡ ಅಧ್ಯಾಯ 23 :

ರಾಕ್ಷಸ ಸ್ತ್ರೀಯರಿಂದ ಸೀತಾಮಾತೆಯ ಮನವರಿಕೆಯ ಪ್ರಯತ್ನ

||ಓಂ ಆಂಜನೇಯಾಯ ನಮಃ||

 

ಸೀತೆಯನ್ನು ಮನವೊಲಿಸಲು ಹಾಗೂ ವಶಮಾಡಿಕೊಳ್ಳಲು ಪಟ್ಟ ಪ್ರಯತ್ನ ಮತ್ತು ರಾಕ್ಷಸ ಸ್ತ್ರೀಯರಿಗೆ ಲಂಕಾಧೀಶ್ವರ ನೀಡಿದ ಆಜ್ಞೆಯ ಕುರಿತು ಹಿಂದಿನ ಗುರುವಾಣಿಯಲ್ಲಿ ನಾವೆಲ್ಲರೂ ಕೇಳಿದ್ದೇವೆ. ಬನ್ನಿ ಗುರುವಾಣಿಯಲ್ಲಿ ಅಲ್ಲಿನ ರಾಕ್ಷಸ ಸ್ತ್ರೀಯರು ಸೀತೆಯನ್ನು ಮನವೊಲಿಸಲು ಪಟ್ಟ ಪ್ರಯತ್ನದ ಬಗ್ಗೆ ಕೇಳೋಣ.

ರಾವಣನು ಆಶೋಕ ವನದಿಂದ ಹೊರಟ ನಂತರ ಭಯಂಕರ ಆಕೃತಿಯ ರಾಕ್ಷಸ ಸ್ತ್ರೀಯರು ಸೀತೆಯನ್ನು ಸಮೀಪಿಸಿದರು. ಸೀತೆಯನ್ನು ಮನವೊಲಿಸಲು ರಾಕ್ಷಸ ಸ್ತ್ರೀಯರು ದಶಕಂಠ ರಾವಣನನ್ನು ಹಾಡಿ ಹೊಗಳಿ, ರಾವಣನ ಶ್ರೇಷ್ಠತೆಯನ್ನು ಸೀತೆಗೆ ಮನವರಿಕೆ ಮಾಡಿದರು. ಸುಪ್ರಸಿದ್ಧನಾದ ವಿಶ್ರವಸುವಿನ ಮಗನಾದ ರಾವಣನು, ಅರಿನೀರ ಭಯಂಕರನು ಹಾಗೂ ರಾಕ್ಷಸರೆಲ್ಲರ ಮಹಾ ಪ್ರಭುವೂ ಆಗಿದ್ದಾನೆ. ರಾವಣನು ದೇವೇಂದ್ರನ ಸಹಿತ ಮುವತ್ತ ಮೂರು ಕೋಟಿ ದೇವತೆಗಳನ್ನು ತನ್ನ ಅತುಲ ಪರಾಕ್ರಮಗಳಿಂದ ಜಯಸಿರುವವನು. ಮಹಾ ಪರಾಕ್ರಮಿ ಯುದ್ಧದಲ್ಲಿ ಎಂದೂ ಬೆನ್ನು ತೋರದಿರುವವನು. ಮಹಾಬಲಶಾಲಿಯೂ ಹಾಗೂ ಮಹಾವೀರವಂತನು ಆದ ಲಂಕೇಶ್ವರನ **** ಆಗಲು ನೀನೇಕೆ ಅಪೇಕ್ಷಿಸುವುದಿಲ್ಲ. ಸಕಲ ಶ್ರೇಷ್ಠ ನಾರಿಯರಲ್ಲಿಯೇ ಶ್ರೇಷ್ಠಳಾದ ಮತ್ತು ಮಹಾಭಾಗ್ಯಶಾಲಿನಿಯಾದ ಮಂಡೋದರಿಯನ್ನೇ ಪರಿತ್ಯಜಿಸಿ ಮಹಾಬಲನಾದ ರಾವಣನು ನಿನ್ನನ್ನು ಪಡೆಯಲು ಅಪೇಕ್ಷಿಸಿದ್ದಾನೆ. ಮಂಡೋದರಿಯಂತೆ ಸಾವಿರಾರು ಕಾಂತೆಯರು ರಾವಣನ ಅಂತಃಪುರದಲ್ಲಿದ್ದಾರೆ. ಅಂತಹ ಕಾಂತೆಯರನ್ನು ಕಡೆಗಣಿಸಿ ಲಂಕಾದೀಶ ನಿನ್ನನ್ನು ಸೇರಲು ಬಯಸಿದ್ದಾನೆ. ವಿಕಟ ಎಂಬ ಮತ್ತೋರ್ವ ರಾಕ್ಷಸಿ ರಾವಣನ ಗುಣಗಾನವನ್ನು ಮುಂದುವರೆಸಿದಳು. ಲಂಕೇಶ್ವರ ಸಮರಾಂಗಣದಲ್ಲಿ ದೇವತೆಗಳನ್ನು, ನಾಗರನ್ನು ಹಾಗೂ ಗಂಧರ್ವರನ್ನು ಹಲವು ಬಾರಿ ಪರಾಭವಗೊಳಿಸಿದವನು. ರಾವಣನಿಗೆ ಭಯಪಟ್ಟು ಸೂರ್ಯನು ಕೂಡಾ ರಾವಣನ ಮೇಲೆ ತೀಕ್ಷ್ಣವಾದ ಕಿರಣಗಳನ್ನು ಪಸರಿಸುವುದಿಲ್ಲ. ರಾವಣನ ಶ್ರೇಷ್ಠತೆ ಹಾಗೂ ಪರಾಕ್ರಮಕ್ಕೆ ವೃಕ್ಷಗಳು ಕೂಡ ಆತನ ಬಯಕೆಯಂತೆಯೇ ಫಲ ಕೊಡುತ್ತವೆ ಮೇಘಗಳು ಮಳೆ/ಜಲವನ್ನು ಸುರಿಸುತ್ತವೆ. ಎಲೈ ಬಾಮಿನಿಯೇ, ಇಂತಹ ಪರಾಕ್ರಮಿಯಾದ ರಾವಣನು ಪ್ರಣಯ ಬಿಕ್ಷೆಯನ್ನು ಬೇಡುತ್ತಾ ನಿನ್ನ ಬಳಿಗೆ ಬಂದಿರುವನು. ಸರ್ವ ಸಂವೃದ್ಧಿಯನ್ನು ಹೊಂದಿರುವ ಮಹಾತ್ಮನ *** ನಿನಗೇನೂ ಅಡ್ಡಿ, ನೀನೇಕೆ ಮನಸ್ಸು ಮಾಡುತ್ತಿಲ್ಲ? ಹೀಗೆ ಅಲ್ಲಿಯ ರಾಕ್ಷಸ ಸ್ತ್ರೀಯರು ಲಂಕಾಧೀಶನ ಶ್ರೇಷ್ಠತೆ ಮತ್ತು ಪರಾಕ್ರಮದ ಬಗ್ಗೆ ಮಂದಸ್ಮಿತೆಯಾದ ಸೀತಾದೇವಿಗೆ ಮನವರಿಕೆ ಮಾಡಿದರು. ಈ ರಾಕ್ಷಸ ಸ್ತ್ರೀಯರ ಮುಂದುವರೆದ ಪ್ರಯತ್ನ ಮತ್ತು ಅದಕ್ಕೆ ಸೀತಾ ದೇವಿಯ ಪ್ರತಿಕ್ರಿಯೆಯನ್ನು ಮುಂದಿನ ಗುರುವಾಣಿಯಲ್ಲಿ    ನಾವೆಲ್ಲರೂ ಕೇಳೋಣ.

|| ಓಂ ಆಂಜನೇಯಾಯ ನಮಃ ||