Guruvani | ಗುರುವಾಣಿ 28| ಸುಂದರಕಾಂಡ ಅಧ್ಯಾಯ 20:

Guruvani | ಗುರುವಾಣಿ 28| ಸುಂದರಕಾಂಡ ಅಧ್ಯಾಯ 20:

ಸೀತೆಯ ಮನಗೆಲ್ಲಲು ರಾವಣನ ಪ್ರಯತ್ನ

||ಓಂ ಆಂಜನೇಯಾಯ ನಮಃ||

 

ವಿಶಾಲಾಕ್ಷಿಯೂ, ತಪಸ್ವಿಣಿಯೂ, ದುಖದಿಂದ ದೀನಳಾಗಿದ್ದ ಸೀತಾ ದೇವಿಯ ಬಳಿ ರಾವಣನು ಹಸನ್ಮುಖನಾಗಿ, ಚಿಹ್ನೆಗಳಿಂದ ಮತ್ತು ಮಧುರವಾದ ವಚನಗಳಿಂದ ತನ್ನ ಮನೋಭಾವವನ್ನು ವ್ಯಕ್ತಪಡಿಸತೊಡಗಿದನು. ಅತೀವ ಭಯಬೀತಿಯಿಂದ ನಡುಗುತ್ತಿದ್ದ ಸೀತೆಯನ್ನು ರಾವಣನು ಬಹುವಾಗಿ ಹೊಗಳುವ ಮೂಲಕ ಆಕೆಯ ಮನ ಗೆಲ್ಲುವ ಶತಪ್ರಯತ್ನ ನಡೆಸಿದನು. ಎಲೈ ಮೈಥಿಲಿ ಭಯಪಡಬೇಡ, ನನ್ನಲ್ಲಿ ವಿಶ್ವಾಸವಿಟ್ಟು ನಿಶ್ಚಿತ ಬುದ್ದಿಯಿಂದ ನನ್ನನ್ನು ಪ್ರೀತಿಸು. ನೀನು ವಿಷ್ಣುಪ್ರಿಯೆ, ಆದ್ದರಿಂದ ನಾನು ನಿನ್ನನ್ನು ಮುಟ್ಟಲಾರೆನು. ಮನದಲ್ಲಿ ಚಿಂತೆ ತುಂಬಿಕೊಂಡು ಬರಿಯ ನೆಲದ ಮೇಲೆ ಮಲಗುವುದು, ಮಲಿನವಾದ ವಸ್ತ್ರ ಧರಿಸುವುದು ಮತ್ತು ಈ ನಿರಂತರವಾದ ವನವಾಸ ನಿನಗೆ ಖಂಡಿತ ಉಚಿತವಲ್ಲ. ನೀನು ಸ್ತ್ರೀಯರಲ್ಲಿಯೇ ರತ್ನ ಪ್ರಾಯಳು, ಛತ್ರ, ಚಾಮರ, ಚಂದನ ಮತ್ತು ದಿವ್ಯಾಭರಣಗಳಿಂದ ವಂಚಿತಳಾದವಳು. ರೂಪ, ಯವ್ವನ ಶಾಲಿನಿಯಾದ ನಿನ್ನನ್ನು,ನಿನ್ನ ರೂಪವನ್ನು ಆ ಬ್ರಹ್ಮ ದೇವನೇ ಸೃಷ್ಟಿಸಿದ್ದಾನೆ. ಹೇಗೆ ವೇಗವಾಗಿ ಹರಿಯುವ ನದಿಯ ನೀರು ಹಿಂದಿರುಗಿ ಬರಲಾರದೋ,ಹಾಗೆಯೇ ನಿನ್ನ ರೂಪ ಮತ್ತು ಯವ್ವನ ಕೂಡ. ಎಲೈ ಚಂದ್ರ ಮುಖಿಯೇ ನಾನು ನಿನ್ನ ಶತ್ರುವಲ್ಲ, ನಾನು ಶತ್ರುಗಳನ್ನು ಜಯಿಸಿ ಅನೇಕ ಲೋಕಗಳಿಂದ ಹೇರಳವಾದ ಅನರ್ಘ ರತ್ನಾಭರಣಗಳನ್ನು ತಂದಿರುವೆನು. ಅವೆಲ್ಲವೂ ನಿನಗೇ, ಈ ಲಂಕಾ ರಾಜ್ಯವನ್ನೂ ಸಹಾ ನಿನಗೇ ಸಮರ್ಪಿಸಿಬಿಡುವೆ. ಈ ಭೂಮಂಡಲದಲ್ಲಿ ಖಂಡಿವಾಗಿ ನನ್ನನ್ನು ಎದುರಿಸಿ ನಿಲ್ಲುವ ಸಾಮರ್ಥ್ಯವಿರುವವರು ಯಾರೂ ಇಲ್ಲ.ನೀನು ಏನನ್ನು ಬಯಸಿದರೂ ತಂದುಕೊಡುವೆ, ಇಡಿ ಭೂಮಂಡಲವನ್ನೇ ನಿನ್ನ ಅಂಗೈ ಮೇಲಿಡುವ, ಎಲೈ ಮಂಗಳ ಪ್ರಿಯೆ, ನಾರು ಮಡಿ ಉಟ್ಟು, ಎಲ್ಲವನ್ನೂ ಕಳೆದುಕೊಂಡು ಅಡವಿ ಪಾಲಗಿರುವ ಆ ರಾಮನಿಂದ ನಿನಗೇನೂ ಪ್ರಯೋಜನ., ನನ್ನ ಸ್ವಾಧೀನದಲ್ಲಿರುವ ನಿನ್ನನ್ನು ರಾಮ ಖಂಡಿತವಾಗಿಯೂ ಮರಳಿ ಪಡೆದುಕೊಳ್ಳಲಾರನು. ಗರುಡ ಪಕ್ಷಿಯು ಹಾವನ್ನು ಅಪಹರಿಸುವಂತೆ ನಾನು ನಿನ್ನ ಮನಸ್ಸನ್ನು ಅಪಹರಿಸಿದ್ದೇನೆ. ನನ್ನ ಅಂತಃಪುರದಲ್ಲಿ ಸಕಲ ಸಂಪನ್ನ ಸದ್ಗುಣವುಳ್ಳ ಅನೇಕ ಸ್ತ್ರೀಯರಿದ್ದಾರೆ. ಅವರೆಲ್ಲರ ಮೇಲೂ ನಿನ್ನದೇ ಪರಮಾಧಿಕಾರ. ಕುಬೇರನನ್ನು ಜಯಿಸಿ ನಾನು ತಂದಿರುವ ರತ್ನಗಳನ್ನೂ, ಧನರಾಶಿಗಳನ್ನೂ ಮತ್ತು ಮೂರು ಲೋಕದ ಸಂಪತ್ತನ್ನೂ ಅನುಭವಿಸುತ್ತಾ ಈ ಅಂತಃಪುರದಲ್ಲಿ ಸುಖವಾಗಿರು. ಹೀಗೆ ಲಂಕಾಧೀಶ ರಾವಣನು ಸೀತೆಯ ಮನಸ್ಸನ್ನು ಗೆಲ್ಲುವ ಪ್ರಯತ್ನ ನಡೆಸಿದ. ಈ ದಶಕಂಠನ ಪ್ರಯತ್ನದ ಈ ಮಾತುಗಳಿಗೆ ಸೀತೆಯ ಉತ್ತರವೇನೆಂಬುದನ್ನ ನಾವೆಲ್ಲರೂ ಮುಂದಿನ ಗುರುವಾಣಿಯಲ್ಲಿ ಕೇಳೋಣ.

|| ಓಂ ಆಂಜನೇಯಾಯ ನಮಃ ||