Guruvani | ಗುರುವಾಣಿ 25| ಸುಂದರಕಾಂಡ ಅಧ್ಯಾಯ 15-16 :

Guruvani | ಗುರುವಾಣಿ 25| ಸುಂದರಕಾಂಡ ಅಧ್ಯಾಯ 15-16 :

ಅಶೋಕವನದಲ್ಲಿ ಸೀತಾದೇವಿಯನ್ನು ಕಂಡಿದ್ದು (ಮುಂದುವರಿದ ಭಾಗ)

||ಓಂ ಆಂಜನೇಯಾಯ ನಮಃ||

 

ವಿಶಾಲನೇತ್ರೆಯೂ ಹಾಗೂ ಲಕ್ಷ್ಮೀದೇವಿಯಂತೆ ಲೋಕಮನೋಹರಳಾದ ಸೀತಾದೇವಿಯನ್ನು ಆಶೋಕವನದಲ್ಲಿ ಮನೋಜವತ್ಸಲ, ವಾನರಶ್ರೇಷ್ಠ ಹನುಮಂತ ನೋಡಿದನು. ಆಂಜನೇಯ ಭಕ್ತರೆ ಈ ಗುರುವಾಣಿಯಲ್ಲಿ ಮುಖಿಪ್ರಾಣ ಕಂಡ ಸೀತಾದೇವಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ. ಧರ್ಮಶೀಲನೂ, ಮಹಾತ್ಮನೂ ಆದ ಮಿಥಿಲಾಧಿಪತಿ ಜನಕಮಹಾರಾಜನು ಯಜ್ಞ ನಿಮಿತ್ತವಾಗಿ ಭೂಮಿಯನ್ನು ಉಳುತ್ತಿರುವಾಗ ಪದ್ಮಪರಾಗದಂತೆ ಶುಭಕರ ಗಳಿಗೆಯಲ್ಲಿ ಉದಿಸಿದ ಜನಕನ ಮಗಳೂ, ಮಹಾಪತಿವ್ರತೆಯೂ ಆದ ಸೀತೆ ಇವಳೇ ಆಗಿದ್ದಾಳೆ. ಸಾಧ್ವಿಯಾದ ಇವಳು ಪತಿಯ ಮೇಲಿನ ಅಪಾರ ಪ್ರೇಮದಿಂದ    ಸಕಲ ವಿಧವಾದ ರಾಜಭೋಗಗಳನ್ನು ಪರಿತ್ಯಜಿಸಿ, ವನವಾಸದ ಕಷ್ಟಗಳನ್ನು ಲೆಕ್ಕಿಸದೆ ಪತಿಯೊಂದಿಗೆ ಅರಣ್ಯಕ್ಕೆ ಬಂದವಳು. ಎಲ್ಲಾ ಸುಖ ಸಂಪತ್ತುಗಳನ್ನು ಪರಿತ್ಯಜಿಸಿ ಬಂದು ಜನರಿಂದ ದೂರವಾದ ಇವಳು, ಶ್ರೀ ರಾಮನ ಬರುವಿಕೆಯನ್ನೇ ನಿರೀಕ್ಷಿಸುತ್ತಾ ಆತನಲ್ಲಿಯೇ ಚಿತ್ತವಿರಿಸಿ ಶ್ರೀ ರಾಮಚಂದ್ರನನ್ನೇ ಎದುರು ನೋಡುತ್ತಿದ್ದಾಳೆ. ಆಭರಣಗಳಿಂದ ಶೋಭಿಸಬೇಕಾದ ಇವಳು, ಪತಿಯಿಲ್ಲದೆ ನಿರಾಭರಣಳಾಗಿದ್ದಾಳೆ. ಕಪ್ಪಾದ ಕೇಶರಾಶಿ,ತಾವರೆಯಂತಹ ಕಣ್ಣುಗಳುಳ್ಳ ಇವಳು ರಾಕ್ಷಸಿಯರ ಮಧ್ಯದಲ್ಲಿ ದುಃಖದಿಂದ ಕುಳಿತಿದ್ದಾಳೆ. ಹಿಮಪಾತಕ್ಕೆ ಸಿಲುಕಿ ನಲುಗಿ ಹೋದ ಹೂ ಬಳ್ಳಿಯ ಹಾಗೆ ನಿಸ್ತೇಜಳಾದ ಜಾನಕಿಯು, ಸಹಚರದಿಂದ ಅಗಲಿದ ಹೆಣ್ಣು ಚಕ್ರವಾಕದಂತೆ ದೈನ್ಯಾವಸ್ಥೆಯಲ್ಲಿ ಇದ್ದಾಳೆ. ಅತಿಯಾದ ಭಾರದಿಂದ ನೀರಿನಲ್ಲಿ ಮುಳುಗಿ ಹೋಗುತ್ತಿರುವ ನಾವೆಯಂತೆ ಶೋಕತಪ್ತಳಾದ, ಆ ಚಂದ್ರಮುಖಿ ಸೀತಾದೇವಿಯನ್ನು    ವಿಚಿತ್ರ ದೇಹಾಕೃತಿಯ    ರಾಕ್ಷಸಿಯರು ಸುತ್ತುವರಿದಿದ್ದಾರೆ. ಕೆಲವು ರಾಕ್ಷಸಿಯರಿಗೆ ಒಂದೇ ಕಣ್ಣು, ಒಂದೇ ಕಿವಿ, ವಿಕಾರವಾದ ಮುಖವಿದ್ದರೆ, ಅವರಲ್ಲಿ ಕೆಲವರಿಗೆ ಹಂದಿ, ಸಿಂಹ, ಆನೆಯಂತಹ ಮುಖಗಳಿದ್ದವು. ಆನೆಯಂತಹ ಕಾಲುಗಳು, ನೀಳವಾದ ಮೂಗು, ಕೆಲವರಿಗೆ ಅಳತೆಗೂ ಮೀರಿದ ಹಣೆ ಕುತ್ತಿಗೆಗಳಿದ್ದವು. ಇಂತಹ ವಿಕಾರವಾದ ರಾಕ್ಷಸಿಯರ ಮಧ್ಯದಲ್ಲಿ ಶೋಕ ಸಂತೃಪ್ತಳೂ, ಕಾಂತಿಹೀನಳೂ, ಗ್ರಹಣದಿಂದ ತೇಜಸ್ಸನ್ನು ಕಳೆದುಕೊಂಡ ಹುಣ್ಣಿಮೆ ಚಂದ್ರನಂತೆ ಸೀತಾಮಾತೆ ಕಂಡಳು. ಜಾನಕಿಯ ಪರಿಸ್ಥಿತಿ ಅತಿ ಶೋಚನೀಯವಾಗಿದ್ದರೂ ಸೀತಾಮಾತೆಯನ್ನು ಕಂಡ ಮಾರುತಿಗೆ ಅತೀವ ಆನಂದವಾಯಿತು. ಮಹಾಪರಾಕ್ರಮಿಯಾದ ಆಂಜನೇಯನು ಮನಸ್ಸಿನಲ್ಲಿಯೇ ದಶರಥಪುತ್ರನಾದ ಶ್ರೀ ರಾಮಚಂದ್ರನಿಗೆ ವಂದಿಸಿ, ಸೀತಾ ದರ್ಶನದಿಂದ ಸಂತುಷ್ಟನಾಗಿ ಅತಿ ಜಾಗರೂಕತೆಯಿಂದ ದೇಹದ ಆಕಾರವನ್ನು ಬದಲಿಸಿಕೊಂಡು, ಆಶೋಕ ವನದ ವೃಕ್ಷದಲ್ಲಿ ಅಡಗಿ ಕುಳಿತನು. ಮಾರುತಿ ಭಕ್ತರೆ ಇದು ಈ ವಾರದ ಗುರುವಾಣಿ.

|| ಓಂ ಆಂಜನೇಯಾಯ ನಮಃ ||