ಗುರುವಾಣಿ 9: ರಾಮ ಹನುಮರ ಮಿಲನ

ಗುರುವಾಣಿ 9: ರಾಮ ಹನುಮರ ಮಿಲನ 

Voice of RK


ಇಂದ್ರಿಯಗಳ ಒಡೆಯ, ತಪಸ್ವಿಗಳಲ್ಲಿ ಅತಿ ಶ್ರೇಷ್ಠ ಅಷ್ಟಸಿದ್ಧಿ ಮತ್ತು ನವ ನಿಧಿಗಳನ್ನು ಕೊಡುವಾತ,ಮೂರುಲೋಕಗಳಲ್ಲಿಯೂ ಪ್ರಸಿದ್ಧ, ಮಹಿರಾವಣ ಮರ್ಧನ, ಅಂಜನಾ ಗರ್ಭಸಂಭೂತ/ಪುತ್ರ ಈ ವಾನರವೀರ ಹಾಗೂ ಅಯೋಧ್ಯಾನಗರಿಯ ಆದರ್ಶಪುರುಷ ಸೀತಾವಲ್ಲಭ ಶ್ರೀರಾಮರ ಪ್ರಥಮ ಭೇಟಿಯ ಬಗ್ಗೆ ತಿಳಿಯುವ/ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನವೇ ಇಂದಿನ ಗುರುವಾಣಿ.

 ರಾಮ ಮತ್ತು ಹನುಮರ ಪ್ರಥಮ ಭೇಟಿಯ ಬಗ್ಗೆ ಗ್ರಂಥಗಳಲ್ಲಿ ವಿಭಿನ್ನ ಉಲ್ಲೇಖಗಳಿದ್ದು, ಒಂದು ಮೂಲದ ಪ್ರಕಾರ ಲಂಕಾಧಿಪತಿ ದಶಕಂಠ ರಾವಣ ಸೀತಾಮಾತೆಯನ್ನು ಅಪಹರಿಸಿದ ನಂತರ ರಾಮ ಲಕ್ಷ್ಮಣರು ಸೀತಾಮಾತೆಯನ್ನು ಅರಸುತ್ತಾ/ಹುಡುಕುತ್ತಾ ದಕ್ಷಿಣದ ಕಡೆಗೆ ಸಾಗುತ್ತಾರೆ 

ಅವರ ಅನ್ವೇಷಣೆ/ಹುಡುಕಾಟ ಅವರನ್ನು ಸುಗ್ರೀವ ಮತ್ತು ಅವನ ಮಂತ್ರಿಗಳಿದ್ದ ಪಂಪಾ ಸರೋವರದ ಬಳಿಯ ಋಷ್ಯಮೂಕ ಪರ್ವತಕ್ಕೆ ಕರೆ ತರುತ್ತದೆ. ಇದು ನಮ್ಮ ಕರ್ನಾಟಕದ ಹಂಪಿಯ ಬಳಿ ಇದೆ. 

ಈ ಪರ್ವತದ ಬಳಿ ಸುತ್ತಾಡುತ್ತಿರುವ/ಅಲೆದಾಡುತ್ತಿರುವ ಈ ಸಹೋದರರನ್ನು ವಾನರ ರಾಜನಾದ ಸುಗ್ರೀವ ದೂರದಿಂದಲೇ ಅನುಮಾನದಿಂದ ಗಮನಿಸುತ್ತಾನೆ.

ತನ್ನನ್ನು ಕೊಲ್ಲಲು ವಾಲಿಯೇ ಇಬ್ಬರು ಶಕ್ತಿಶಾಲಿ ಪುರುಷರನ್ನು ಕಳುಹಿಸಿರಬೇಕೆಂದು ಭಾವಿಸುತ್ತಾನೆ.

 ಸುಗ್ರೀವನ ಆಜ್ಞೆಯಂತೆ ಈ ಅಪರಿಚಿತ ಶಕ್ತಿಶಾಲಿ ಪುರುಷರು ಯಾರೆಂದು ತಿಳಿಯಲು ಹನುಮಂತ ಬ್ರಾಹ್ಮಣವೇಷದಲ್ಲಿ ಇವರನ್ನು ಭೇಟಿಯಾಗಿ ಇವರಿಬ್ಬರ ಉದ್ದೇಶವೇನೆಂದು ತಿಳಿಯುತ್ತಾನೆ.

ಸದ್ಗುಣಶೀಲ ಮತ್ತು ದೈವಿಕ/ದೇವಾಂಶ ಸಂಭೂತ ನಾದ ಈತ, ರಾಮಲಕ್ಷ್ಮಣರಿಗೆ ತನ್ನನ್ನು ಅತ್ಯಂತ ವಿನಯದಿಂದ ಪರಿಚಯಿಸಿಕೊಳ್ಳುತ್ತಾನೆ.

 ಈ ಕಪಿಶ್ರೇಷ್ಠನ ಮಾತಿನ ಜಾಣ್ಮೆಗೆ ರಾಮಲಕ್ಷ್ಮಣರು ಮಾರುಹೋಗುತ್ತಾರೆ. ಆಗ ಈ ದಶರಥಪುತ್ರರು ತಾವು ಬಂದ ಕಾರಣವೇನೆಂದು ಹನುಮಂತನಿಗೆ ತಿಳಿಸುತ್ತಾರೆ. ವಿಷಯಯನ್ನು ಅತ್ಯಂತ ಚಾತುರ್ಯದಿಂದ ಗ್ರಹಿಸಿದ ಹನುಮಂತ ರಾಮನ ಕಾಲಿಗೆ ಬಿದ್ದು, ಈ ಸಹೋದರರನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನಿರುವಲ್ಲಿಗೆ ಕೊಂಡೊಯ್ಯುತ್ತಾನೆ ಮತ್ತು ಸುಗ್ರೀವನಿಗೆ ರಾಮಲಕ್ಷ್ಮಣರನ್ನು ಪರಿಚಯಿಸುತ್ತಾನೆ. ಇದುವೇ ರಾಮ ಹನುಮರ ಪ್ರಥಮ ಮಿಲನದ ವೃತ್ತಾಂತ. ಈ ಅಪರೂಪದ ಮಿಲನದ ನಂತರ ಏನಾಯಿತು ಎನ್ನುವ ವಿಷಯ  ತಮಗೆಲ್ಲರಿಗೂ ತಿಳಿದಿದೆ.. ಈ ಭಕ್ತವತ್ಸಲ. ರಘುಪತಿ ದಾಸನನ್ನು ನಾವೆಲ್ಲರೂ ಮತ್ತೆಮತ್ತೆ ಸ್ಮರಿಸೋಣ.

||ಓಂ ಆಂಜನೇಯಾಯ ನಮಃ||