ಹನುಮಾನ ಚಾಲೀಸಾ: ದೋಹಾ – 1

ಹನುಮಾನ ಚಾಲೀಸಾ: ದೋಹಾ – 1

 

ವಾಕ್ ವಿಶಾರದನಾದ ಹನುಮಂತನು ಸೀತಾದೇವಿ ತನ್ನೊಡನೆ ಸ

. ಹನುಮಾನ್ ಚಾಲೀಸಾ ಅತ್ಯಂತ ಜನಪ್ರಿಯವಾದ ಸ್ತ್ರೋತ್ರವಾಗಿದೆ. ಇದನ್ನು ಸಂತ ತುಳಸಿದಾಸರು 16ನೆಯ ಶತಮಾನದಲ್ಲಿ ಅಂದರೆ ಸುಮಾರು 400 ವರ್ಷಗಳ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಪ್ರಚಲಿತವಾಗಿದ್ದ ಅವಧಿ ಭಾಷೆಯಲ್ಲಿ ರಚಿಸಿದರು ಎಂದು ಹೇಳಲಾಗುತ್ತದೆ. ಚಾಲೀಸಾ ಎನ್ನುವ ಈ ಪದ ಚಾಲೀಸ್ ಎಂಬ ಹಿಂದಿ ಪದದಿಂದ ಬಂದಿದೆ. ಚಾಲಿಸ್ ಎಂದರೆ ನಲವತ್ತು ಎಂದು ಅರ್ಥ. ಹನುಮಾನ್ ಚಾಲೀಸಾದಲ್ಲಿ ಮೊದಲ ಎರಡು ಮತ್ತು ಕೊನೆಯ ಒಂದು ದ್ವಿಪದಿಗಳನ್ನು ಬಿಟ್ಟು ಒಟ್ಟು 40 ಪದ್ಯ ಚರಣಗಳಿವೆ. ಈ ಕಾರಣದಿಂದಾಗಿಯೇ ‘ಚಾಲಿಸಾ’ ಎಂಬ ಹೆಸರು ಬಂದಿದೆ. ಅಂತ್ಯ ಪ್ರಾಸವುಳ್ಳ 2 ಚರಣಗಳ ಪದ್ಯವನ್ನು ದ್ವಿಪದಿ ಎಂದೂ,ಅಂತ್ಯ ಪ್ರಾಸವುಳ್ಳ 4 ಚರಣಗಳ ಪದ್ಯವನ್ನು ಚೌಪದಿ ಎಂದೂ ಕರೆಯುತ್ತಾರೆ. ಚೌಪದಿಯನ್ನು ಚತುಷ್ಟದಿ ಎಂದೂ ಕರೆಯುತ್ತಾರೆ. ಪವನ ಕುಮಾರ ಚಿರಂಜೀವಿ ಎಂದು ವೇದಶಾಸ್ತ್ರಗಳು ತಿಳಿಸುತ್ತವೆ.

ಸಂತ ತುಳಸೀದಾಸರು ಭಗವಂತನ ಕುರಿತು ಬರೆದಿರುವ ಈ ಪವಿತ್ರವಾದ ಸಾಲುಗಳು ಜನ ಸಾಮಾನ್ಯರ ಮೆಚ್ಚಿನ ಸ್ತುತಿಗೀತೆಯಾಗಿದೆ. ಇಂದಿನ ನಗರದ ಒತ್ತಡದ ಬದುಕಿನ ನಡುವೆಯೂ, ಜನರು ಇದನ್ನು ಪಠಿಸುವುದನ್ನು ಕಾಣುತ್ತೇವೆ. ಅದರೊಂದಿಗೆ ಅವರ ಮೊಗದಲ್ಲಿ ಮೂಡುವ ಒಂದು ನಿರಾಳ ಭಾವವೂ ನಮ್ಮ ಕಣ್ಣಿಗೆ ಗೋಚರಿಸುತ್ತದೆ. ಅಚ್ಚರಿಯ ಸಂಗತಿ ಎಂದರೆ ಯಾವುದೇ ಗುರುಗಳ ಅಥವಾ ಯಾರದೋ ಮಾತಿಗೆ ಕಟ್ಟು ಬಿದ್ದು ಇದನ್ನು ಜನ ಪಠಿಸುವುದಿಲ್ಲ. ತುಂಬು ಮನಸ್ಸಿನಿಂದ, ಸ್ವಇಚ್ಛೆಯಿಂದ ಜನ ಇದನ್ನು ಮನನ ಮಾಡುವುದು ವಿಶೇಷವೇ ಹೌದು. ಬನ್ನಿ ಆ ಪವಿತ್ರ ಸಾಲುಗಳನ್ನು ನಾವುಗಳೂ ಪಠಿಸೋಣ, ಅರ್ಥ ಮಾಡಿಕೊಳ್ಳೋಣ.

ದೋಹಾ – 1 ಮನವೊಂದು ದೇಗುಲ
ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥

ಮೊದಲ ಎರಡು ದ್ವಿಪದಿಗಳನ್ನು ಒಂದು ರೀತಿಯಲ್ಲಿ ಪರಿಚಯಿಸುವ ದ್ವಿಪದಿಗಳೆಂದು ಹೇಳಬಹುದು. ಅದರಲ್ಲಿ ಮೊದಲನೆಯ ದ್ವಿಪದಿಯನ್ನು ನೋಡೋಣ– “ನಮ್ಮ ಮನಸ್ಸೇ ಕನ್ನಡಿ. ಆ ನಮ್ಮ ಮನಸ್ಸನ್ನು ಧೂಳು ಆವರಿಸಿದೆ.ಮಲಿನವಾಗಿರುವ ಅದರಿಂದ ಪ್ರತಿಫಲಿಸುತ್ತಿರುವ ಜಗದ ಚಿತ್ರಣ ವಿರೂಪಗೊಂಡಿದೆ. ಅದೇ ನಿಜವೆಂಬ ಭ್ರಮೆಯಲ್ಲಿ ನಾವೆಲ್ಲ ಇದ್ದೇವೆ. ನನ್ನ ಗುರುಗಳ ಪಾದ ಕಮಲದ ಧೂಳಿನಿಂದ ನನ್ನ ಮನದ ಕನ್ನಡಿಯನ್ನು ಶುಚಿಗೊಳಿಸುತ್ತೇನೆ” ಎಂದು ಕವಿ ಹೇಳುತ್ತಾನೆ. ಭೌತಿಕ ಪ್ರಪಂಚದಲ್ಲಿ ಹೇಗೆ ಮರಳು, ಇಟ್ಟಿಗೆ ಮುಂತಾದವುಗಳನ್ನು ಬಳಸಿ ಗುಡಿ ಕಟ್ಟುತ್ತಾರೋ, ಹಾಗೆಯೇ ಇಲ್ಲಿ ಕವಿ ಪದಗಳಿಂದ ಮನದ ದೇಗುಲ ಕಟ್ಟುವ ಕೆಲಸ ಮಾಡಿದ್ದಾರೆ. ಮನವೆಂಬ ದೇಗುಲದಲ್ಲಿ ತಮ್ಮ ಪ್ರೀತಿಯ ಆರಾಧ್ಯ ದೈವದ ಸ್ಥಾಪನೆಯೂ ಆಗುತ್ತದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಫಲ ಕರುಣಿಸುವ, ತಮ್ಮ ಇಷ್ಟಾರ್ಥಗಳನ್ನು ಕರುಣಿಸುವ ರಘುಕುಲ ತಿಲಕ ರಾಜಶ್ರೇಷ್ಠ ಮಹಾಪ್ರಭು ಶ್ರೀ ರಾಮನ ಮಹಿಮೆಯನ್ನು ಸ್ಮರಿಸುತ್ತೇನೆ, ಕೊಂಡಾಡುತ್ತೇನೆ,ಆತನ ಧ್ಯಾನದಲ್ಲಿ ತಲ್ಲೀನನಾಗುತ್ತೇನೆ ಎಂದು ಸಂತ ಕವಿಯ ಈ ಸಾಲುಗಳು ಹೇಳುತ್ತವೆ.

ಶ್ರೀ ಗುರುವಿನ ಪಾದಕಮಲಗಳ ಧೂಳಿನಿಂದ ನನ್ನ ಮನದ ದರ್ಪಣವನ್ನ ಶುಚಿಗೊಳಿಸಿ, ಹೊಳೆವಂತೆ ಮಾಡಿ, ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನೀಡುವ ಶ್ರೀ ರಘುರಾಮನ ಪವಿತ್ರ ಚರಿತ್ರೆಯನ್ನು ಬಣ್ಣಿಸುವೆನು” ಎಂದು ಸಂಕ್ಷಿಪ್ತವಾಗಿ ಹೇಳುತ್ತವೆ ಈ ಚರಣಗಳು.

ಈ ಸಾಲುಗಳನ್ನು ಮನನ ಮಾಡುವ ಭಕ್ತರ ಮನದಲ್ಲೂ ಒಂದು ಅನಿರ್ವಚನೀಯ ಭಾವ ಮೂಡುತ್ತದೆ. ಮನಸ್ಸು ಶಾಂತವಾಗುತ್ತದೆ. ಹೊರಪ್ರಪಂಚದ ಪ್ರಚೋದನೆಗಳಿಂದ ದೂರವಾಗಿ,ಏಕಾಗ್ರ ಚಿತ್ತದಿಂದ ಭಗವಂತನನ್ನು ಪ್ರಾರ್ಥಿಸಲು ಸಾಧ್ಯವಾಗುತ್ತದೆ. ಮನಸ್ಸಿನ ಮೇಲೆ ಹಿಡಿತ ಸಾಧಿಸಿ ಆಧ್ಯಾತ್ಮದ ಹಾದಿಯತ್ತ ಹೆಜ್ಜೆ ಹಾಕಲು ಸಹಾಯವಾಗುತ್ತದೆ.ನೆಮ್ಮದಿ ನಮ್ಮನ್ನು ಅರಸಿ ಬರುತ್ತದೆ. ಬನ್ನಿ ನಾವೆಲ್ಲರೂ ಮನವನ್ನು ಶುಚಿ ಮಾಡಿ ಹೊಳೆಯುವಂತೆ ಮಾಡೋಣ, ನಮ್ಮ ಆಂತರ್ಯದ ಕೋಣೆಯ ದೇಗುಲದಲ್ಲಿರುವ ದೇವರನ್ನು ಭಜಿಸಿ ಕೃತಾರ್ಥರಾಗೋಣ. ಶುಭವಾಗಲಿ

|| ಓಂ ಆಂಜನೇಯಾಯ ನಮಃ ||