ಗುರುವಾಣಿ 40 : ಸುಂದರಕಾಂಡ ಅಧ್ಯಾಯ 35

ಹನುಮಂತನಿಂದ ರಾಮನ ರೂಪಗುಣ ವರ್ಣನೆ

|| ಓಂ ಆಂಜನೇಯಾಯ ನಮಃ ||

 

ವಾನರ ಶ್ರೇಷ್ಠನಾದ ಹನುಮಂತನಿಂದ ಶ್ರೀರಾಮನ ಕಥೆಯನ್ನು ಕೇಳಿದ ಬಳಿಕ ವೈದೇಹಿಗೆ,ಹನುಮಂತನ ಮೇಲೆ ವಿಶ್ವಾಸ ಮೂಡುತ್ತದೆ ಆದರೂ ಸಹ, ಈ ವಾನರ ರೂಪಿ ನಿಜವಾಗಿಯೂ ರಾಮ ದೂತನೇ ಅಥವಾ ರಾವಣನೇ ವೇಷ ಬದಲಿಸಿ ಪುನಃ ಮೋಸಗೊಳಿಸಲು ಬಂದಿರುವನೆ, ಎಂಬ ಸಂಶಯದಿಂದ ಆ ವಾನರ ವೀರನಿಗೆ ಆಕೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಸೀತಾದೇವಿಯ ಪ್ರಶ್ನೆಗಳು, ಹಾಗೂ ಅದಕ್ಕೆ ವಾನರ ನೀಡಿದ ಉತ್ತರಗಳನ್ನು ಈ ಗುರುವಾಣಿಯಲ್ಲಿ ಕೇಳೋಣ.. ಎಲೈವಾನರೋತ್ತಮನೆ ,ನಿನಗೆ ಹೇಗೆ ಶ್ರೀರಾಮಲಕ್ಷ್ಮಣರ ಪರಿಚಯವಾಯಿತು? ನರ ವಾನರರ ಸಮಾಗಮ ಹೇಗೆ ಸಾಧ್ಯವಾಯಿತು ?

ಶ್ರೀರಾಮ ಲಕ್ಷ್ಮಣರು ರೂಪವಂತರೆ?ಅವರ ರೂಪ ಲಕ್ಷಣಗಳು ಹೇಗಿವೆ? ನನ್ನ ಈ ಎಲ್ಲಾ ಪ್ರಶ್ನೆಗಳಿಗೆ ನೀನು ಸಮರ್ಪಕವಾದ ಉತ್ತರವನ್ನು ಕೊಟ್ಟರೆ, ನೀನು ರಾಮದೂತನೇ ಎಂದು ಪೂರ್ಣ ವಿಶ್ವಾಸ ನನಗೆ ಬರಬಹುದು. ಹಾಗಾಗಿ ಎಲ್ಲವನ್ನೂ ಹೇಳು ಎಂದು ಹೇಳುತ್ತಾಳೆ. ಜಾನಕಿಯ ಸಂಶಯದ ಪ್ರಶ್ನೆಗಳಿಗೆ ಕೇಸರಿಪುತ್ರ ಈ ರೀತಿಯಾಗಿ ಉತ್ತರಿಸುತ್ತಾನೆ

ಎಲೈಜನಕ ನಂದಿನಿಯೇ, ಶ್ರೀರಾಮನು ಕಮಲಪತ್ರದಂತೆ ಕಣ್ಣುಗಳುಳ್ಳವನು, ತನ್ನ ನಿರುಪಮ ಕಾಂತಿಯಿಂದ ಸಮಸ್ತ ಜೀವಿಗಳಿಗೆ ಆನಂದವನ್ನು ಕೊಡುವವನು, ರೂಪ ಸಂಪನ್ನನು ಹಾಗೂ ಸಜ್ಜನನು, ಸಹನೆಯಲ್ಲಿ ಭೂದೇವಿಯಂತೆಯು, ಭುದ್ಧಿಯಲ್ಲಿ ಬೃಹಸ್ಪತಿಯಂತೆಯು, ಯಶಸ್ಸಿನಲ್ಲಿ ದೇವೇಂದ್ರನಿಗೆ ಸಮಾನನು ಹಾಗೂ ಧರ್ಮರಕ್ಷಕನೂ ಆಗಿರುವನು. ಇಷ್ಟೇ ಅಲ್ಲದೆ ಆತ ರಾಜವಿದ್ಯಾ ಕುಶಲನು ,ಬ್ರಾಹ್ಮಣರನ್ನು ಆಧರಿಸುವವನು, ಸರ್ವವೇದಾಪಾರಂಗತನು, ಶಿಕ್ಷಾವ್ಯಾಕರಣಾದಿ ವೇದಾಂಗಗಳಲ್ಲಿ ನಿಷ್ಣಾತನು , ಮಹಾಭಾವು, ಶಂಕದಂತೆ ಕುತ್ತಿಗೆ ಉಳ್ಳವನು , ದುಂಧುಭಿಯ ಧ್ವನಿಯಂತೆ ಗಂಭೀರವಾದ ಕಂಠ ಸ್ವರವನ್ನು ಹಾಗೂ ಮೇಘಶ್ಯಾಮನಂತೆ ಶೋಭಿತನೂ ಆಗಿರುವನು. ಶ್ರೀರಾಮನ ಮುಖ ,ಕಣ್ಣು , ಬಾಯಿ , ನಾಲಿಗೆ ,ತುಟಿ , ದವಡೆ , ಸ್ಥನ,ಉಗುರು. ಕೈಕಾಲು ಈ ಎಲ್ಲಾ 10 ಅವಯವಗಳೆಲ್ಲಾ ಪದ್ಮದ ಆಕಾರದಲ್ಲಿವೆ.

ಅವನ ಯಶಸ್ಸು ,ತೇಜಸ್ಸು , ಮತ್ತು ಸಂಪತ್ತು ಇವು ಮೂರು ವಿಸ್ತಾರವಾದವು. ಶ್ರೀರಾಮನು ಸಕಲ ಐಶ್ವರ್ಯಸಂಪನ್ನನು, ಧರ್ಮಾಚರಣೆಯಲ್ಲಿ ನಿರತನು , ಧರ್ಮಮಾರ್ಗದಲ್ಲಿಯೇ ಧನ ಗಳಿಸಿ ,ಸತ್ಪಾತ್ರರಿಗೆ ದಾನ ಮಾಡುವವನು ಹಾಗೂ ಎಲ್ಲರೊಡನೆ ಮಾತನಾಡುವವನು ಆಗಿರುವನು. ಶ್ರೀರಾಮನ ಸಹೋದರನಾದ ಲಕ್ಷ್ಮಣ ರೂಪ ಗುಣಗಳಲ್ಲಿ ಶ್ರೀ ರಾಮನನ್ನೇ ಹೋಲುತ್ತಾನೆ. ಸಾಟಿ ಇಲ್ಲದ ಪರಾಕ್ರಮಶಾಲಿಯೂ ,ಶ್ರೀರಾಮ ಮೇಘಶ್ಯಾಮನಾದರೆ, ಲಕ್ಷ್ಮಣ ಬಂಗಾರ ವರ್ಣದವನೂ ಆಗಿರುತ್ತಾನೆ. ಆ ಪುರುಷರಿಬ್ಬರೂ ನಿನ್ನನ್ನು ನೋಡಬೇಕೆಂದು ಪ್ರತಿದಿನವೂ ಕಾಯುತ್ತಿದ್ದಾರೆ. ಈ ರೀತಿಯಾಗಿ ಮುಖ್ಯಪ್ರಾಣ ಆಂಜನೇಯ ಸೀತಾದೇವಿಯ ಸಂಶಯವನ್ನು ನಿವಾರಿಸಲು ರಾಮಲಕ್ಷ್ಮಣರ ರೂಪಲಕ್ಷಣಗಳನ್ನು ವಿವರಿಸಿದನು.

|| ಓಂ ಆಂಜನೇಯಾಯ ನಮಃ ||