ಗುರುವಾಣಿ 36 : ಸುಂದರಕಾಂಡ ಅಧ್ಯಾಯ 30

ಗುರುವಾಣಿ 36 : ಸುಂದರಕಾಂಡ ಅಧ್ಯಾಯ 30

ಸೀತಾದೇವಿಯನ್ನು ಮಾತನಾಡಿಸಲು ಹನುಮಂತನ ವಿವೇಚನೆ

|| ಓಂ ಆಂಜನೇಯಾಯ ನಮಃ ||

 

ಸೀತಾ ದೇವಿಯ ಅಪಹರಣ, ರಾವಣನಿಂದ ಆಕೆಯ ಮನವೊಲಿಸುವ ಪ್ರಯತ್ನ, ರಾಕ್ಷಸಿಯರು ಸೀತೆಗೆ ಸೃಷ್ಟಿಸಿದ ಭಯದ ವಾತಾವರಣ ಮತ್ತು ಕಷ್ಟ ಪರಂಪರೆ, ಇದಕ್ಕೆಲ್ಲವೂ ಸೀತೆ ನೀಡಿದ ಸಮರ್ಥ ಉತ್ತರ. ಇವೆಲ್ಲವನ್ನೂ ತನಕ ನಾವೆಲ್ಲರೂ ಕೇಳಿದ್ದೇವೆ. ಇಂದಿನ ಗುರುವಾಣಿ ಸುಂದರಕಾಂಡದ 30ನೇಯ ಅಧ್ಯಾಯ. ಸೀತಾ ದೇವಿಯನ್ನು ಮಾತನಾಡಿಸಲು ಹನುಮಂತ ಮಾಡಿದ ವಿವೇಚನೆಯ ಪ್ರಯತ್ನದ ಬಗ್ಗೆ ಬನ್ನಿ ಮುಂದೆ ತಿಳಿಯೋಣ. ಆಶೋಕವನದ ವೃಕ್ಷದಲ್ಲಿ ಅಡಗಿ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದ ವಾನರ ವೀರ, ಸೀತಾ ದೇವಿಯನ್ನು ಮುಖತಃ ಬೇಟಿಯಾಗುವ ಹಾಗೂ ಆಕೆಯೊಡನೆ ಮಾತನಾಡುವ ಬಗ್ಗೆ ಚಿಂತನೆ ನಡೆಸಿದ. ಶತ್ರುವನ್ನು ಗೆಲ್ಲಲು ಶತ್ರುವಿನ ಬಲಾಬಲಗಳನ್ನು ತಿಳಿಯುವುದು ಅವಶ್ಯಕ. ಹಿನ್ನೆಲೆಯಲ್ಲಿ ಲಂಕಾರಾಜ್ಯವನ್ನು ಆಳುವ ಅದರ ಅಧಿಪತಿ ರಾವಣನ ಪ್ರಭಾವವನ್ನು, ಆತನ ಧೋರಣೆಯನ್ನು, ರಾಜ್ಯವನ್ನು ಕಾಯುತ್ತಿರುವ ರಾಕ್ಷಸ ರಾಕ್ಷಸಿಯರ ಬಗ್ಗೆಯೂ ಸಮಗ್ರವಾಗಿ ಅರಿತ. ದುಃಖಗಳಿಗೆ ಕೊನೆಯೇ ಕಾಣದೆ ಜೀವವೇ ಬೇಡವೆಂದು ತೀರ್ಮಾನಿಸಿ, ಆತ್ಮಹತ್ಯೆಗೆ ಮುಂದಾದ ಅತೀವ ದುಃಖದಿಂದ ಕೂಡಿದ ಸೀತೆಯನ್ನು ಸಂತೈಸಲು ಉಪಾಯವನ್ನು ಹುಡುಕತೊಡಗಿದ. ರಾಕ್ಷಸಿಯರ ಮನಸ್ಸು ಬೇರೆಡೆಗೆ ಹೋದಾಗ ಸೂಕ್ಷ್ಮ ರೂಪವನ್ನು ಧರಿಸಿ ಸಹಜ ಮಾನವನಂತೆ ಸೀತಾದೇವಿಯನ್ನು ಮಾತನಾಡಿಸುವ ಪ್ರಯತ್ನಕ್ಕೆ ಚಿಂತನೆ ನಡೆಸಿದ. ಪ್ರಯತ್ನದಲ್ಲಿ ಸ್ವಲ್ಪ ಏರುಪೇರಾದರೂ. ಜೀವಕ್ಕೆ ಆಪತ್ತು ಖಂಡಿತ. ಭಯಂಕರ ರಾಕ್ಷಸರು ಖಡ್ಗ ಶೂಲಗಳಿಂದ ನನ್ನೊಡನೆ ಹೋರಾಡಲೂಬಹುದು, ನನಗೊಪ್ಪಿಸಿದ ಸೀತಾನ್ವೇಷಣೆಯ ಕಾರ್ಯಕ್ಕೆ ಭಂಗವಾಗಬಹುದು. ಸಮುದ್ರದಿಂದ ಸುತ್ತುವರೆದಿರುವ ಸ್ಥಳಕ್ಕೆ ಬರಲು ಸಮರ್ಥನಾದ ಬೇರೊಬ್ಬನನ್ನು ನಾ ಕಾಣಲಾರೆ. ಸಮುದ್ರಲಂಘನ ವ್ಯರ್ಥವಾಗದಂತೆ ತನಗೊಪ್ಪಿಸಿದ ಕಾರ್ಯವನ್ನು ಈಡೇರಿಸುವ ಬಗ್ಗೆ ಗಾಡವಾಗಿ ಈ ರೀತಿಯ ಆಲೋಚನೆಯಲ್ಲಿ ತೊಡಗುತ್ತಾನೆ. ರಘುವಂಶದಲ್ಲಿ ಶ್ರೇಷ್ಠನಾದ ಪರಮಾತ್ಮ ಸ್ವರೂಪನಾದ ಶ್ರೀ ರಾಮನಿಗೆ ಸಂಬಂಧಿಸಿದ ಶುಭಕರವು, ಧರ್ಮಯುಕ್ತವು ಆದ ಸಮಸ್ತ ವಿಷಯವನ್ನು ವಿವರಿಸುತ್ತೇನೆ. ಶ್ರೀ ರಾಮನ ಗುಣ ಕೀರ್ತನೆಯೊಂದಿಗೆ ಶುಭ ಶಕುನಗಳನ್ನು ಕಂಡ ಆಕೆಗೆ ವಿಶ್ವಾಸವನ್ನು ತುಂಬುವ ಹಾಗೂ ಮನಶಾಂತಿಯನ್ನು ದೊರಕಿಸುವ ಪ್ರಯತ್ನ ನಡೆಸುತ್ತೇನೆ. ಹೀಗೆಂದು ಯೋಚಿಸಿದ ವಾನರ ವೀರ ಹನುಮಂತ ಸೀತಾ ದೇವಿಯನ್ನು ನೋಡುತ್ತಾ ಸುಮಧುರವಾದ, ಕರ್ಣಾನಂದಕರವಾದ ರಾಮನ ಮಹಿಮೆಯನ್ನ ಹಾಡತೊಡಗಿದ.

ಆಂಜನೇಯ ಭಕ್ತರೆ, ಹನುಮಂತ ಹಾಡಿದ ಅಯೋಧ್ಯ ಮರ್ಯಾದ ಪುರುಷ ಶ್ರೀ ರಾಮನ ಮಹಿಮೆಯನ್ನು ಮುಂದಿನ ವಾರ ಕೇಳೋಣ.

|| ಓಂ ಆಂಜನೇಯಾಯ ನಮಃ ||