ಗುರುವಾಣಿ 35 : ಸುಂದರಕಾಂಡ ಅಧ್ಯಾಯ 28-29

ಗುರುವಾಣಿ 35 : ಸುಂದರಕಾಂಡ ಅಧ್ಯಾಯ 28-29

ಸೀತಾದೇವಿಗೆಗೋಚರಿಸಿದಶುಭಶಕುನ

|| ಓಂ ಆಂಜನೇಯಾಯ ನಮಃ ||

 

ಸಂಕಟಹರಣ, ಕೇಸರಿಪುತ್ರ, ಮುಖ್ಯಪ್ರಾಣ ಆಂಜನೇಯನಿಗೆ ನಮಿಸುತ್ತಾ, ವಾನರ ವೀರನ ಶಕ್ತಿ,ಶೌರ್ಯವನ್ನು ವಿವರಿಸುವ ಸುಂದರಕಾಂಡದೊಂದಿಗೆ ಮುಂದುವರೆಯೋಣ. ಬನ್ನಿ ವಾರದ ಗುರುವಾಣಿಗೆ. ಶ್ರೀ ರಾಮನಿಂದ ಅಗಲಿ, ವಿರಹ ಪೀಡಿತಳಾಗಿದ್ದ ಸೀತಾದೇವಿಯು ರಾವಣನ ಕಠೋರ ವಚನಗಳನ್ನು ಸ್ಮರಿಸಿಕೊಂಡು/ನೆನೆದು ದುಃಖ ಮತ್ತು ಭಯಭೀತಳಾಗಿದ್ದಳು. ದಿನ ಕಳೆದಂತೆ ರಾವಣನು ವಿಧಿಸಿದ ಎರಡು ತಿಂಗಳುಗಳ ಗಡುವು ಮುಗಿಯುವ ದಿನ ಹತ್ತಿರ    ಬರುತ್ತಿತ್ತು. ಲಂಕಾಧೀಶನಿಗೆ ತನ್ನ ಮನಸ್ಸು ಮತ್ತು ದೇಹವನ್ನು ಕೊಡುವ ಬದಲು ನನ್ನ ಜೀವವನ್ನೇ ನಾನು ಕೊಡಲು ಸಿದ್ಧ ಎನ್ನುವ ಭಾವನೆಯಲ್ಲಿದಳು ಸೀತಾದೇವಿ. ಮಹಾ ಸಮುದ್ರದಲ್ಲಿ ಸಿಲುಕಿದ ನಾವೆಯಂತೆ ಸೀತಾದೇವಿ ಆಪತ್ತಿನಲ್ಲಿ ಸಿಲುಕಿದ್ದಳು. ಕ್ಷಣ ಕ್ಷಣಕ್ಕೂ ಶ್ರೀ ರಾಮನನ್ನೇ ಸ್ಮರಿಸುತ್ತಿದ್ದಳು. ಸತ್ಯವ್ರತನೆ, ದೀರ್ಘ ಬಾಹುವೆ, ಪೂರ್ಣ ಚಂದ್ರನಂತೆ ಮುಖವುಳ್ಳವನೆ ನಿನ್ನ ಭಾರ್ಯೆಯನ್ನು ರಾಕ್ಷಸರು ಹಿಂಸಿಸುತ್ತಿರುವುದನ್ನು ನೀನು ಅರಿಯೆಯಾ? ನಿನ್ನ ದರ್ಶನ ಭಾಗ್ಯವು ಕಣ್ಣುಗಳಿಗೆ ಲಭಿಸೀತು ಎಂಬ ಆಸೆಯಿಂದ ರಾಕ್ಷಸರು ಕೊಡುತ್ತಿರುವ ಈ ಎಲ್ಲಾ ಕಷ್ಟ ಪರಂಪರೆಯನ್ನು ಸಹಿಸುತ್ತಿದ್ದೇನೆ. ನಿಯಮಪೂರ್ವಕವಾಗಿ ಧರ್ಮವನ್ನು ಆಚರಿಸುತ್ತಿದ್ದೇನೆ. ಆದರೆ ಆಚರಣೆಗಳೆಲ್ಲಾ ನಿರರ್ಥಕವಾಗುತ್ತಿವೆ. ಪುನಃ ನಿನ್ನನ್ನು ಸೇರುವನೆಂಬ ಆಸೆ ಈಗ ನನ್ನಲ್ಲಿ ಉಳಿದಿಲ್ಲ. ಅಲ್ಪ ಭಾಗ್ಯಳಾದ ನಾನು ವಿಷ ಪ್ರಾಶನದಿಂದಲೋ, ಹರಿತವಾದ ಶಸ್ತ್ರದಿಂದಲೋ ಜೀವವನ್ನು ತ್ಯಜಿಸುತ್ತೇನೆ. ಸೀತಾದೇವಿಯು ಹೀಗೆ ವಿಧ ವಿಧ ರೀತಿಯಿಂದ ವಿಲಪಿಸುತ್ತಾ, *** ವೃಕ್ಷವನ್ನು ಸಮೀಪಿಸಿದಳು. ಅತಿಯಾದ ದುಃಖದಿಂದ ನೊಂದಿದ್ದ ಆಕೆ ತನ್ನ ನೀಳವಾದ ತಲೆಗೂದಲನ್ನು ಹಿಡಿದುಕೊಂಡು ಕೇಶಪಾಶದಿಂದಲೇ ಜೀವ ತ್ಯಾಗಕ್ಕೆ ಮುಂದಾದಳು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರಾಣತ್ಯಾಗಕ್ಕಾಗಿ ಸಿದ್ದಳಾದ ಆಕೆಗೆ ಅನೇಕ ಶುಭ ಶಕುನಗಳು ಕಾಣಿಸಿಕೊಂಡವು. ದೈರ್ಯವನ್ನು ತುಂಬುವಂತಹ ಸತ್ಫಲದಾಯಕವಾದ ಶ್ರೀ ರಾಮನ ಆಗಮನವನ್ನು ಸೂಚಿಸುವಂತಹ ಶುಭ ಶಕುನವಾಯಿತು. ಕಡು ಬಿಸಿಲಿನಿಂದ/ಭಯಂಕರ ಬಿಸಿಲಿನಿಂದ ಒಣಗಿಹೋದ ಬೀಜ ಮಳೆ ಬಿದ್ದಾಗ ಮೊಳಕೆಯೊಡೆದು ಮೇಲಕ್ಕೆ ಬರುವಂತೆ ಸೀತಾ ದೇವಿಯ ಮುಖ ಗ್ರಹಣದಿಂದ ವಿಮೋಚನೆ ಹೊಂದಿದ ಚಂದ್ರನಂತೆ ಪ್ರಕಾಶಿಸುತ್ತಿತ್ತು. ಶೋಕವು ದೂರವಾಗಿ ಮನಸ್ಸು ಹರ್ಷದಿಂದ ತುಂಬಿತು. ಹರ್ಷದಿಂದ ಕೂಡಿದ ಆ ವೈದೇಹಿಯ ಮುಖವು ಹುಣ್ಣಿಮೆಯ ಚಂದ್ರನಂತೆ ಕಂಗೊಳಿಸುತ್ತಿತ್ತು.

|| ಓಂ ಆಂಜನೇಯಾಯ ನಮಃ ||