ಗುರುವಾಣಿ 33 : ಸುಂದರಕಾಂಡ ಅಧ್ಯಾಯ 25-26

ಗುರುವಾಣಿ 33 : ಸುಂದರಕಾಂಡ ಅಧ್ಯಾಯ 25-26

ಸೀತಾದೇವಿಯಜೀವತ್ಯಾಗದಬಯಕೆ

|| ಓಂ ಆಂಜನೇಯಾಯ ನಮಃ ||

 

ಮುಖ್ಯಪ್ರಾಣ ಆಂಜನೇಯನನ್ನು ಸ್ಮರಿಸುತ್ತಾ ವಾರದ ಗುರುವಾಣಿಯನ್ನು ಕೇಳೋಣ. ರಾಕ್ಷಸ ಸ್ತ್ರೀಯರ ಕರ್ಣಕಠೋರ ಮಾತುಗಳಿಂದ ಭಯಗೊಂಡ ಸೀತಾದೇವಿ ಶಾಂತಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅರಣ್ಯದಲ್ಲಿ ಗುಂಪಿನಿಂದ ತಪ್ಪಿಸಿಕೊಂಡು ತೋಳಗಳ ಮಧ್ಯದಲ್ಲಿ ಸಿಕ್ಕಿ ಪೀಡಿಸಲ್ಪಟ್ಟ ಜಿಂಕೆಯ ಮರಿಯಂತೆ ಜಾನಕಿ ಕಾಣುತ್ತಿದ್ದಳು. ಬಿರುಗಾಳಿಯ ಹೊಡೆತಕ್ಕೆ ಸಿಕ್ಕ ಬಾಳೆಯಮರದಂತೆ ಸೀತಾದೇವಿ ನೆಲದ ಮೇಲೆ ಕುಸಿದು ಬಿದ್ದಿದ್ದಳು. ರಾಕ್ಷಸ ಸ್ತ್ರೀಯರ ಒಂದೊಂದು ಮಾತೂ ಹರಿತವಾದ ಶೂಲದಂತೆ ಆಕೆಯನ್ನು ಚುಚ್ಚುತ್ತಿದ್ದವು. ಕೆಲವೊಮ್ಮೆ ಉನ್ಮತ್ತಳಂತೆ, ಮತ್ತೊಮ್ಮೆ ಮತ್ತೇರಿದವಳಂತೆ, ಮಗದೊಮ್ಮೆ ಚಿತ್ತ ಭ್ರಮೆಗೊಂಡವಳಂತೆ ಶೋಕಿಸುತ್ತಿದ್ದಳು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಯೋಧ್ಯಾ ಪುರುಷ ಶ್ರೀ ರಾಮನನ್ನು ನೆನೆದು ಜಾನಕಿಯು ತನ್ನ ವಿಷಯಗಳನ್ನು ಹೊರ ಹಾಕಿದಳು. ನನ್ನ ಪತಿಯಾದ ಶ್ರೀ ರಾಮನು ಸಿಂಹದಂತೆ ಮಹಾಪರಾಕ್ರಮ ಶಾಲಿಯು, ಗಂಬೀರ ನಡೆಯುಳ್ಳವನು ಹಾಗೂ ಕೃತಜ್ಞನು. ಆತನನ್ನು ದರ್ಶಿಸುವವರೇ ಧನ್ಯರು. ನನಗೇಕೆ ಪರಿಸ್ಥಿತಿ,ನಾನು ಪೂರ್ವ ಜನ್ಮದಲ್ಲಿ ಎಂತದೋ ಮಹಾ ಪಾಪವನ್ನು ಮಾಡಿರಬೇಕು. ಜೀವಕ್ಕೆ ಜೀವಿಸುವ ಹಕ್ಕಿಲ್ಲ. ನಾನಿನ್ನು ಶ್ರೀ ರಾಮನನ್ನು ಸೇರಲಾರೆ. ರಾಕ್ಷಸ ಸ್ತ್ರೀಯರು ನನ್ನ ಶರೀರವನ್ನು ತುಂಡು ತುಂಡು ಮಾಡಿ ತಿಂದರೂ ನನಗೆ ಅದು ಸಮ್ಮತವೇ. ಶರೀರ ತ್ಯಾಗಕ್ಕಾಗಿ ನಾನು ಸಿದ್ಧ. ಅಲ್ಪ ಸುಖಕ್ಕಾಗಿ ನಾನೆಂದೂ ರಾವಣನನ್ನು ಸೇರಲಾರೆ. ವಿಶ್ವ ವಿಖ್ಯಾತನು, ಧ್ಯಾನಿಯು, ಸದಾಚಾರಿಯು ಹಾಗೂ ಪರಮ ದಯಾಳುವು ಆದ ಶ್ರೀ ರಘುನಾಥನಿಗೆ ನನ್ನ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಇದು ನನ್ನ ದುರದೃಷ್ಟ. ದಂಡಕಾರಣ್ಯದಲ್ಲಿ 14 ಸಾವಿರ ರಾಕ್ಷಸರನ್ನು ಧ್ವಂಸ ಮಾಡಿದ ಪರಾಕ್ರಮಿಗೆ ಲಂಕಾಧೀಶ್ವರ ಸರಿಸಾಟಿಯೇ ಅಲ್ಲ. ನಾನಿಲ್ಲಿರುವ ವಿಷಯವೇನಾದರು ರಾಘವನಿಗೆ ತಿಳಿದರೆ, ಅವನು ಬಿಡುವ ನಿಶಿತವಾದ ಬಾಣವು ಲಂಕಾ ಪಟ್ಟಣವನ್ನು ಕ್ಷಣಮಾತ್ರದಲ್ಲಿ ಅಂಧಕಾರಮಯವಾಗಿಸುತ್ತದೆ. ಜಗನ್ನಾಥನಾದ ಶ್ರೀ ರಾಮನ ಪತ್ನಿಯಾಗಿದ್ದರೂ ಸಹ ನಾನು ದುರವಸ್ಥೆಗೆ ಗುರಿಯಾಗಲು ಕಾರಣವೇನು? ನನ್ನಲ್ಲಿ ಯಾವ ಸದ್ಗುಣವೂ ಇಲ್ಲವೇ, ನನ್ನ ಸೌಭಾಗ್ಯವೆಲ್ಲವು ನಾಶವಾಯಿತೆ? ಶೂರ ಸಹೋದರರಾದ ರಾಮ ಲಕ್ಷ್ಮಣರನ್ನು ದುರ್ಮಾರ್ಗಿಯಾದ ರಾವಣ ಸಂಹರಿಸಿಬಿಟ್ಟನೆ? ಎಂಬ ಮುಂತಾದ ಪ್ರಶ್ನೆಗಳಿಂದ ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಅತ್ಯಂತ ದುರ್ಭಾಗ್ಯಳಾದ ನನಗೆ ಜೀವ ತ್ಯಾಗವಲ್ಲದೆ ಬೇರೆ ದಾರಿಯಿಲ್ಲ. ಹೀಗೆ ರಾಕ್ಷಸ ಸ್ತ್ರೀಯರ ಮಧ್ಯದಲ್ಲಿ ಒಬ್ಬಂಟಿಗಳಾದ ಆ ಜಾನಕಿ ತನ್ನ ಅಸಹಾಯಕತೆಯನ್ನು ಹೊರ ಹಾಕಿದಳು.

|| ಓಂ ಆಂಜನೇಯಾಯ ನಮಃ ||