ಗುರುವಾಣಿ 32 : ಸುಂದರಕಾಂಡ ಅಧ್ಯಾಯ 24

ಗುರುವಾಣಿ 32 : ಸುಂದರಕಾಂಡ ಅಧ್ಯಾಯ 24

ಸೀತಾದೇವಿಯ ಮನವೊಲಿಕೆಗೆ ಮುಂದುವರಿದ ಪ್ರಯತ್ನ

|| ಓಂ ಆಂಜನೇಯಾಯ ನಮಃ ||

 

ರಾಕ್ಷಸ ಸ್ತ್ರೀಯರು ಸೀತಾ ದೇವಿಯ ಮನವೊಲಿಸುವ ಪ್ರಯತ್ನವನ್ನು ಮುಂದುವರೆಸಿದರು. ದಶಕಂಠನನ್ನು ಹಾಡಿ ಹೊಗಳಿದರೂ, ಲಂಕೇಶ್ವರನ ಶೌರ್ಯ,ಸಾಮರ್ಥ್ಯವನ್ನು ಮನವರಿಕೆ ಮಾಡಿಕೊಟ್ಟರೂ ಸಹ ಜಾನಕಿ ಒಪ್ಪದ ಕಾರಣ ರಾಕ್ಷಸ ಸ್ತ್ರೀಯರು ಅಪ್ರಿಯವಾದ ಮಾತುಗಳನ್ನು ಆಡತೊಡಗಿದರು. ಸೀತಾ ದೇವಿಯ ಮುಂದೆ ಶ್ರೀ ರಾಮನನ್ನು ರಾಜಭ್ರಷ್ಟ, ಅಪ್ರಯೋಜಕ, ಶಕ್ತಿಹೀನ ಮುಂತಾದ ಅಪ್ರಿಯ ವಚನಗಳಿಂದ ಸಂಬೋಧಿಸತೊಡಗಿದರು. ಕಮಲಲೋಚನೆಯಾದ ಸೀತಾದೆವಿಯು ರಾಕ್ಷಸಿಯರ ಕರ್ಣ ಕರ್ಕಶವಾದ ಮಾತುಗಳನ್ನು ಕೇಳಿ ಕಣ್ಣೀರನ್ನು ತುಂಬಿಕೊಂಡು ಹೀಗೆಂದಳು, ನಿಮ್ಮ ಅಪ್ರಿಯ ಮಾತುಗಳು ಲೋಕ ಮರ್ಯಾದೆಗೆ ವಿರುದ್ದವು ಹಾಗೂ ಪಾಪಯುಕ್ತವೂ ಆಗಿವೆ. ನೀವಲ್ಲರೂ ಸೇರಿ ನನ್ನ ಈ ಜೀವವನ್ನು ಪಡೆದರೂ ಸರಿ, ಆದರೆ ಮಾನವ ಕಾಂತೆಯಾದ ನಾನು ರಾಕ್ಷಸನ ಪತ್ನಿಯಾಗಲಾರೆ. ಶ್ರೀ ರಾಮಚಂದ್ರ ರಾಜ್ಯಹೀನ ಹಾಗೂ ಶಕ್ತಿಹೀನನಾಗಿದ್ದರೂ ಸಹ ಅವನೇ ನನ್ನ ಪತಿ. ನಾನು ಸದಾ ಕಾಲ ಶ್ರೀ ರಾಮ ಪ್ರಭುವಿನಲ್ಲಿಯೇ ಅನುರುಕ್ತರಾಗಿರುವವಳು. ಅರುಂಧತಿ ವಸಿಷ್ಟರನ್ನು, ರೋಹಿಣಿಯು ಚಂದ್ರನನ್ನು, ಸಾವಿತ್ರಿಯು ಸತ್ಯವಂತನನ್ನು, ದಮಯಂತಿಯು ನಳನನ್ನು, ಶ್ರೀಮತಿಯು ಕಪಿಲ ಮಹರ್ಷಿಯನ್ನು ಅನುಸರಿಸುವಂತೆ ನಾನು ರಘುಕುಲ ತಿಲಕನಾದ ಶ್ರೀ ರಾಮನನನ್ನೇ ಅನುಸರಿಸಿಕೊಂಡಿರುತ್ತೇನೆ ಎಂದ ಅವಳ ಈ ಮಾತುಗಳನ್ನು ಕೇಳಿದ ರಾಕ್ಷಸ ಸ್ತ್ರೀಯರು ಕೋಪಿಷ್ಠರಾಗಿ ಆಕೆಯನ್ನು ಹೆದರಿಸಲಾರಂಭಿಸಿದರು/ಭಯಪಡಿಸಲಾರಂಭಿಸಿದರು. ದೇವತೆಗಳ ಒಡೆಯನಾದ ಇಂದ್ರನಂತೆ, ಪರಾಕ್ರಮಿಯೂ, ರೂಪವಂತನೂ, ಎಲ್ಲಾ ರಾಕ್ಷಸರಿಗೆ ರಾಜನಾದ ರಾವಣನನ್ನು ಆಶ್ರಯಿಸಿ, ದಿವ್ಯಾಭರಣಗಳಿಂದ ಅಲಂಕೃತಳಾಗಿ, ಮೂರು ಲೋಕಗಳಿಗೆ ಒಡತಿಯಾಗು. ನೀನೀಗ ರಾವಣನ ರಾಜ್ಯದಲ್ಲಿ ಬಂಧಿತಳಾಗಿರುವೆ, ದೇವೇಂದ್ರನು ಕೂಡ ನಿನ್ನನ್ನು ರಕ್ಷಿಸಲು ಸಮರ್ಥನಲ್ಲ, ನೀನು ನಮ್ಮ ಮಾತನ್ನು ಕೇಳದಿದ್ದರೆ ನಿನ್ನ ಎದೆಯನ್ನು ಸೀಳಿ ನಿನ್ನನ್ನು ತಿಂದು ಹಾಕುತ್ತೇವೆ. ಚಂಡೋದರಿ ಎಂಬ ರಾಕ್ಷಸಿ ಮಹಾಶೂಲವನ್ನು ಎತ್ತಿಕೊಂಡು ಸೀತೆಯನ್ನು ಮತ್ತಷ್ಟು ಹೆದರಿಸಿದಳು/ಭಯಪಡಿಸಿದಳು. ವಿಕಾರ ರೂಪಿಣಿಯರಾದ ರಾಕ್ಷಸಿಯರು ದೇವಕನ್ಯೆಯಾದ ಸೀತಾದೇವಿಯನ್ನು ಭಯಗೊಳಿಸುತ್ತಿರುವಾಗ ಸೀತೆಯು ದೈರ್ಯವನ್ನು ಕಳೆದುಕೊಂಡು ಅಳತೊಡಗಿದಳು. ಇದು ಸುಂದರಕಾಂಡದ 24ನೆ ಅಧ್ಯಾಯದ ಸಂಕ್ಷಿಪ್ತ ವಿವರಣೆ.

|| ಓಂ ಆಂಜನೇಯಾಯ ನಮಃ ||