Guruvani | ಗುರುವಾಣಿ 29 | ಸುಂದರಕಾಂಡ ಅಧ್ಯಾಯ 21:

Guruvani | ಗುರುವಾಣಿ 29 | ಸುಂದರಕಾಂಡ ಅಧ್ಯಾಯ 21:

ಸೀತಾದೇವಿ ಯಿಂದ ರಾವಣನಿಗೆ ಹಿತ ವಾಕ್ಯ

||ಓಂ ಆಂಜನೇಯಾಯ ನಮಃ||

 

ಸೀತೆಯ ಮನಸ್ಸನ್ನು ಗೆಲ್ಲಲು ರಾವಣನು ಮಾಡಿದ ಪ್ರಯತ್ನಗಳ ಬಗ್ಗೆ ನಾವೆಲ್ಲರೂ ಹಿಂದಿನ ವಾರ ತಿಳಿದುಕೊಂಡಿದ್ದೇವೆ. ರಾಕ್ಷಸರ ರಾಜನಾದ ರಾವಣನ ಮಾತು ಕೇಳಿ ದುಃಖಿತಳಾದ ಸೀತಾ ದೇವಿ ದೀನ ಸ್ವರದಲ್ಲಿ ರಾವಣನಿಗೆ ಹೀಗೆಂದಳು, ಎಲೈ ರಾವಣೇಶ್ವರ ನಿನ್ನ ಮನಸ್ಸಿನಲ್ಲಿ ನನ್ನ ಮೇಲಿರುವ ಆಸೆಯನ್ನು ತೊಲಗಿಸಿಬಿಡು. ನೀನು ನನ್ನನ್ನು ಬಯಸುವುದು ಯುಕ್ತವಲ್ಲ. ನಾನು ಪುಣ್ಯ/ಒಳ್ಳೆಯ ಕುಲಕ್ಕೆ ಸೇರಿದವಳು. ಶ್ರೀ ರಾಮನಂತೆ ಏಕ ಪತ್ನೀವ್ರತಸ್ಥರಾದ ಸತ್ಪುರುಷರ ಧರ್ಮವನ್ನು ತಿಳಿದುಕೊಂಡು ಅವರು ಆಚರಿಸುವಂತೆ ನೀನೂ ಆಚರಿಸು. ನೀನು ಮಾಡುತ್ತಿರುವ ಪ್ರಣಯ ಪ್ರಲಾಪಗಳು ವ್ಯರ್ಥವಾದವು. ಸತ್ಪುರಷರ ಉಪದೇಶಗಳನ್ನು ಗ್ರಹಿಸದಿರುವ ಅನೀತಿವಂತನಾದ ರಾಜನನ್ನು ಪಡೆದ ಸಮೃದ್ಧ ದೇಶ ನಗರಗಳು ನಾಶವಾಗುತ್ತವೆ.ರತ್ನಗಳ ರಾಶಿಯಿಂದ ಸಮ್ರುದ್ಧವಾಗಿರುವ ಈ ಲಂಕೆಯು ನಿನ್ನಂತ ಅನೀತಿ ರಾಜನಿಂದ ನಶಿಸಿಹೋಗುತ್ತದೆ. ರಾವಣೇಶ್ವರ, ಅನೀತಿಯಿಂದ ನನ್ನನ್ನು ಗೆಲ್ಲುವುದು ದೂರದ ಮಾತು. ರಘುಕುಲ ಒಡೆಯ ಶ್ರೀ ರಾಮನಿಗೆ ಮಾತ್ರವೇ ನಾನು ಯೋಗ್ಯಳಾದವಳು. ಶ್ರೀ ರಾಮಚಂದ್ರನು ಸರ್ವ ಧರ್ಮವನ್ನು ತಿಳಿದವನು ಹಾಗೂ ಶರಣಾಗತ ವತ್ಸಲನು. ನಿನಗೆ ಬದುಕುವ ಇಚ್ಛೆ ಇದ್ದರೆ ಆತನ ಸ್ನೇಹವನ್ನು ಬೆಳೆಸಿಕೊ. ಇಂದ್ರನು ಪ್ರಯೋಗಿಸಿದ ವಜ್ರಾಯುಧ ನಿನ್ನನ್ನು ಕೊಲ್ಲದೆ ಇರಬಹುದು, ಆದರೆ ಜಗತ್ಪತಿಯಾದ ರಾಘವನು ಕೋಪಗೊಂಡರೆ ನಿನ್ನ ಜೀವಕ್ಕೆ ನೀನೆ ಹೊಣೆ ಹೊತ್ತಂತೆ. ಸಿಂಹ ಸದೃಶ್ಯ ಪರಕ್ರಮಿಗಳಾದ ರಾಮ ಲಕ್ಷ್ಮಣರನ್ನು ಎದುರಿಸುವುದು ನಿನಗೆ ಅಸಾಧ್ಯದ ಮಾತು,ನಿನ್ನನ್ನು ವಿನಾಶ ಕಾಲ ಸಮೀಪಿಸಿದೆ. ಅರಣ್ಯದಲ್ಲಿ ಹೆಣ್ಣಾನೆಯನ್ನು ಗಜರಾಜನೊಂದಿಗೆ ಸೇರಿಸುವಂತೆ ಪತಿವಂಚಿತಳಾದ ನನ್ನನ್ನು ಶ್ರೀ ರಾಮನೊಡನೆ ಸೇರಿಸಿಬಿಡು, ನಿನಗೆ ಶ್ರೇಯಸ್ಸು ದೊರೆಯುತ್ತದೆ. ಹೀಗೆ ಸೀತಾ ದೇವಿ ಲಂಕಾಧೀಶ್ವರ ರಾವಣನಿಗೆ ಹಿತವಾಕ್ಯಗಳನ್ನು ಹೇಳಿದಳು.

|| ಓಂ ಆಂಜನೇಯಾಯ ನಮಃ ||