Guruvani | ಗುರುವಾಣಿ 27 | ಸುಂದರಕಾಂಡ ಅಧ್ಯಾಯ 19 :

Guruvani | ಗುರುವಾಣಿ 27 | ಸುಂದರಕಾಂಡ ಅಧ್ಯಾಯ 19 :

ಅಶೋಕವನದಲ್ಲಿ ಆಂಜನೇಯ ಕಂಡ ಸೀತಾದೇವಿ

||ಓಂ ಆಂಜನೇಯಾಯ ನಮಃ||

 

ದಶಕಂಠ ರಾವಣ ಆಶೋಕವನ ತಲುಪಿದ ವಿಚಾರದ ಬಗ್ಗೆ ಹಿಂದಿನ ವಾರ ನಾವೆಲ್ಲರೂ ಕೇಳಿದ್ದೇವೆ. ಮದಗಜದಂತೆ ಮುನ್ನುಗ್ಗಿ ಬರುತ್ತಿರುವ ರಾವಣನನ್ನು ನೋಡಿದ ಸೀತಾ ದೇವಿ ದುಃಖ, ಭಯ ಮತ್ತು ಚಿಂತೆಗಳಿಂದ ಕೂಡಿ ಗ್ರಹಣ ಹಿಡಿದ ಹುಣ್ಣಿಮೆಯ ಚಂದ್ರನಂತೆ ಕಾಂತಿಹೀನಳಾದಳು. ಆಂಜನೇಯ ಭಕ್ತರೇ ಮಾರುತಿ ಕಂಡ ವೈದೇಹಿಯ ಸ್ಥಿತಿಯ ವರ್ಣನೆಯೇ ಈ ವಾರದ ಗುರುವಾಣಿ. ಮಹಾಬಲಶಾಲಿ, ಅಪ್ರತಿಮ ವೀರ ಲಂಕಾಧೀಶ ರಾವಣನ ದೇಹ ಗಾಂಭೀರ್ಯ ಮತ್ತು ಕಾಮ, ಮದ, ದರ್ಪಗಳಿಂದ ಕೂಡಿದ ಕಣ್ಣನ್ನು ನೋಡಿದ ವೈದೇಹಿ ಬಿರುಗಾಳಿಗೆ ಸಿಕ್ಕ ಬಾಳೆಯ ಮರದಂತೆ ನಡುಗತೊಡಗಿದಳು. ಆಕೆ ಮಹಾಸಮುದ್ರದಲ್ಲಿ ಮುಳುಗಿ ಹೋಗುತ್ತಿರುವ ನೌಕೆಯಂತೆ ಶೋಕ ಸಾಗರದಲ್ಲಿ ಮುಳುಗಿದ್ದಳು. ಆಕೆ ಧೂಮಕೇತುವಿನಿಂದ ಪೀಡಿಸಲ್ಪಟ್ಟ ರೋಹಿಣಿಯಂತೆ ಕಂಡಳು. ಸೀತೆಯ ಸ್ಥಿತಿಯು ನಷ್ಟವಾಗಿ ಹೋದ ಆದಾಯದಂತೆ, ಆಚರಿಸದಿರುವ ಆಜ್ಞೆಯಂತೆ ಮತ್ತು ಪೂಜಾ ದ್ರವ್ಯಗಳನ್ನು ಅಪಹರಿಸಿದಾಗ ಭಂಗವಾದ ಪೂಜೆಯಂತೆ ಇತ್ತು. ಆನೆಯು ತನ್ನ ಸೊಂಡಲಿನಿಂದ ಕಿತ್ತು ಹಾಕಿದ ಕಮಲ ಮತ್ತು ಕಮಲದ ಬಳ್ಳಿಗಳು, ಅದರಲ್ಲಿದ್ದ ಜಲಪಕ್ಷಿಗಳು ಭಯಪಟ್ಟು ಹಾರಿಹೋಗಿ ಶೋಭಾಹೀನವಾದ ಪದ್ಮಸರೋವರದಂತೆ ವ್ಯಾಕುಲ ಚಿತ್ತಳಾದ ಸೀತಾದೇವಿ ಕಾಣುತ್ತಿದ್ದಳು ಸುಕುಮಾರಿ, ಸುಂದಾರಾಂಗಿ, ರೂಪ ಸಂಪನ್ನೆಯಾದ ಸೀತಾ ದೇವಿ ಬಾಡಿ ಹೋದ ತಾವರೆಯ ಬಳ್ಳಿಯಂತೆ ಕಾಣುತ್ತಿದ್ದಳು. ಉಪವಾಸದಿಂದಲೂ, ಶೋಕದಿಂದಲೂ, ಚಿಂತೆಯಿಂದಲೂ, ಭಯದಿಂದಲೂ ಬಳಲಿದ ಆಕೆ ಕೇವಲ ವಾಯ ಸೇವನೆಯಿಂದ ಜೀವ ಹಿಡಿದು, ಸದಾ    ಶ್ರೀ ರಾಮಚಂದ್ರನನ್ನೇ ಸ್ಮರಿಸುತ್ತಾ ದಿನ ಕಳೆಯುತ್ತಿದ್ದಳು. ತಪಸ್ವಿನಿ, ದುಃಖಿತೆ ಹಾಗೂ ದೀನಳಾಗಿದ್ದ    ಆ ದೇವಿಯನ್ನು ಸಾಗರೋತ್ತಕ ಚಿರಂಜೀವಿ ವಾನರವೀರ ಆಂಜನೇಯ ಕಂಡನು. ಆಂಜನೇಯ ಉಪಾಸಕರೆ ಇದು ಈ ವಾರದ ಗುರುವಾಣಿ.

|| ಓಂ ಆಂಜನೇಯಾಯ ನಮಃ ||