Guruvani |ಗುರುವಾಣಿ 26| ಸುಂದರಕಾಂಡ ಅಧ್ಯಾಯ18

Guruvani |ಗುರುವಾಣಿ 26| ಸುಂದರಕಾಂಡ ಅಧ್ಯಾಯ18

ಅಶೋಕವನಕ್ಕೆ ರಾವಣನ ಆಗಮನ

||ಓಂ ಆಂಜನೇಯಾಯ ನಮಃ||

 

ಆಶೋಕವನಕ್ಕೆ ರಾವಣನ ಆಗಮನ. ಲಂಕಾಧೀಶ್ವರನಿಂದ ಅಪಹರಿಸಲ್ಪಟ್ಟ ಸೀತಾದೇವಿಯನ್ನು ವಾನರಶ್ರೇಷ್ಠ ಆಂಜನೇಯ ಆಶೋಕವನದಲ್ಲಿ ಕಾಣುತ್ತಾನೆ. ಕಮಲಲೋಚನೆ ಸೀತಾದೇವಿಯನ್ನು ನೋಡಿದ ಹನುಮಂತನ ನೇತ್ರಗಳಿಂದ ಆನಂದಾಶ್ರುಗಳು ಹರಿಯಲಾರಂಭಿಸುತ್ತವೆ. ಭಕ್ತರೇ, ಸುಂದರಕಾಂಡದ ಹದಿನೆಂಟನೆ ಅಧ್ಯಾಯದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ವಜ್ರ, ವೈಡೂರ್ಯದ ಆಭರಣಗಳಿಂದ ನಯನ ಮನೋಹರವಾಗಿ ಸಿಂಗರಿಸಿಕೊಂಡು ಕಾಂತಿಯಿಂದ ರಾರಾಜಿಸುತ್ತಾ ಲಂಕಾಧೀಶ್ವರ ರಾವಣನು, ಬಗೆ ಬಗೆಯ ವೃಕ್ಷಗಳಿಂದ ಕೂಡಿ, ಸರೋವರಗಳಿಂದ ಅಲಂಕೃತವಾಗಿ, ನಾನಾ ವಿಧದ ಪುಷ್ಪಗಳಿಂದ ಶೋಭಿಸುತ್ತಿದ್ದ, ಮದಿಸಿದ ಪಕ್ಷಿಗಳ    ಕಲರವದಿಂದ ತುಂಬಿದ್ದ ಆಶೋಕವನಕ್ಕೆ ಆಗಮಿಸಿದ. ದೇವ, ಗಂಧರ್ವ ಕಾಂತೆಯರು ಮಹೇಂದ್ರನನ್ನು ಅನುಸರಿಸಿ ಹೋಗುವಂತೆ, ನೂರಾರು ಮಂದಿ ಅಂತಃಪುರದ ನಾರಿಯರು ರಾವಣನನ್ನು ಅನುಸರಿಸುತ್ತಿದ್ದರು. ಆ ನಾರಿಯರ ಕೈಗಳಲ್ಲಿ ಸುವರ್ಣದ ದೀವಟಿಕೆ, ಬೀಸಣಿಕೆ, ಚಾಮರಗಳಿದ್ದವು. ಇನ್ನು ಕೆಲವರು ಸುವರ್ಣದ ಕಳಸಗಳಲ್ಲಿ ನೀರನ್ನು ತುಂಬಿಕೊಂಡು ಸ್ವಾಗತಿಸುತ್ತಿದ್ದರೆ ಮತ್ತೆ ಕೆಲವರು ರಜತದ ಕಡುಗಗಳಿಂದ ರಾವಣನನ್ನು ಅಶೋಕವನಕ್ಕೆ ಬರಮಾಡಿಕೊಳ್ಳುತ್ತಿದ್ದರು. ಮಹಾ ಬಲಶಾಲಿಯಾದ ರಾವಣನು ಕಾಮಾಂಧನಾಗಿ, ಮಂದಬುದ್ದಿಯಿಂದ ಸೀತೆಯ ಮೇಲಿನ ಆಸಕ್ತಿಯಿಂದ ಮದವೇರಿದ ಆನೆಯಂತೆ ಮುನ್ನಡೆಯುತ್ತಿದ್ದನು. ಸುವರ್ಣಮಯವಾದ ದೀವಟಿಕೆಯ ಬೆಳಕಿನಲ್ಲಿ ರಾವಣನು ಅತ್ಯಂತ ಪ್ರಕಾಶಮಾನವಾಗಿ ಕಾಣುತ್ತಿದ್ದನು. ಕಾಮ, ಮದ, ದರ್ಪಗಳಿಂದ ಕೂಡಿದ್ದ ವಿಶಾಲವಾದ ಕಣ್ಣುಗಳು ಕೆಂಪಾಗಿ ಕಂಗೊಳಿಸುತ್ತಿದ್ದವು. ಶ್ರೇಷ್ಠವಾದ ಶುಭ್ರ ವಸ್ತ್ರ ರಾವಣನ ಮೆರಗನ್ನು ಮತ್ತಷ್ಟು ಹೆಚ್ಚಿಸಿತ್ತು. ಮಹಬಾಹುವೂ, ಮಹಾಬಲಶಾಲಿಯೂ, ರಾಕ್ಷಸರ ಅಧಿಪತಿಯೂ ಆದ ಲಂಕಾಧೀಶ್ವರ ರಾವಣನನ್ನು, ಮಹಾತೇಜಸ್ವಿಯಾದ ಹನುಮಂತ ಗಿಡಮರಗಳ ಮರೆಯಲ್ಲಿ ನಿಂತು ದೂರದಿಂದಲೇ ಕಂಡನು.

|| ಓಂ ಆಂಜನೇಯಾಯ ನಮಃ ||