ಗುರುವಾಣಿ 4: ಆಂಜನೇಯನ ವಿಶೇಷ ಪೂಜೆ ಶನಿವಾರದ ದಿನವೇ ಏಕೆ?

ಗುರುವಾಣಿ 4: ಆಂಜನೇಯನ ವಿಶೇಷ ಪೂಜೆ ಶನಿವಾರದ ದಿನವೇ ಏಕೆ?

 ಮನೋಜವಂ ಮಾರುತತುಲ್ಯವೇಗಂ 

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ |

ವಾತಾತ್ಮಜಂ ವಾನರಯೂಥಮುಖ್ಯಂ

ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||

Voice of RK -Guruvani

ಜ್ಞಾನ ಮತ್ತು ಗುಣಗಳ ಮಹಾಸಾಗರ ನಾಗಿರುವ ವಾಯುಪುತ್ರನ ಕೈಯಲ್ಲಿ ವಜ್ರಾಯುಧ ಹಾಗೂ ಕೇಸರಿ ಪತಾಕೆ. ವಜ್ರಾಯುಧ ಧಾರಣೆ ಈ ಪವನ ಸುತನ ಕಠಿಣತೆಯನ್ನು ಬಿಂಬಿಸಿದರೆ, ಕೈಯಲ್ಲಿರುವ ಧ್ವಜ ವಿಜಯದ ಸಂಕೇತ. ಆದ್ದರಿಂದಲೇ ಆಂಜನೇಯನನ್ನು ಸಂಕಟ ಮೋಚನ ಎಂದು ಸಂಬೋಧಿಸುತ್ತಾರೆ. ದುಃಖ ಮತ್ತು ಸಂಕಟದಲ್ಲಿರುವಾಗ ಈ ರಾಮ ದೂತನ ಸ್ಮರಣೆ ಮನಸ್ಸಿಗೆ ಶಾಂತಿಯನ್ನು ಮತ್ತು ಸಂಕಷ್ಟಕ್ಕೆ ಪರಿಹಾರವನ್ನು ನೀಡುತ್ತದೆ.

 ವೀರ ಆಂಜನೇಯ ಜನಪ್ರಿಯ ಹಿಂದೂ ದೇವತೆ ಆಗಿದ್ದರೂ, ಜೈನ ಮತ್ತು ಬೌದ್ಧ ಧರ್ಮ ಗ್ರಂಥಗಳಲ್ಲಿಯೂ ಆಂಜನೇಯನ ವ್ಯಕ್ತಿತ್ವದ ಉಲ್ಲೇಖವಿದೆ. ಉಪಖಂಡಗಳಾದ ಮಲೇಷಿಯಾ, ಇಂಡೋನೇಷ್ಯಾ, ಥಾಯ್ಲೆಂಡ್ ಮತ್ತು ಕಾಂಬೋಡಿಯ ದೇಶಗಳ ಪುರಾಣ ಕಥೆಗಳಲ್ಲಿ ಹನುಮಂತನ ಉಲ್ಲೇಖವಿರುವುದು ಒಂದು ವಿಶೇಷವೇ ಸರಿ. ಇದು ಪವನ ಪುತ್ರನ ಸರ್ವಲೋಕ ಸದ್ಗುಣ ಸಾಗರ ಗುಣವನ್ನು ಪ್ರತಿಬಿಂಬಿಸುತ್ತದೆ. ಎಲ್ಲ ಧರ್ಮಗಳಲ್ಲಿ ಈ ವಾಯುಪುತ್ರನನ್ನು ವೀರ, ಧೈರ್ಯಶಾಲಿ, ವಿದ್ವಾಂಸನೆಂದು ಬಿಂಬಿಸಲಾಗಿದೆ. ಇದನ್ನೇ ಸಂತ ತುಳಸಿದಾಸರು ಜ್ಞಾನ ಗುಣಗಳ ಸಾಗರ ನೆಂದು ವರ್ಣಿಸಿದ್ದಾರೆ.

ಅಲಂಕಾರ ಪ್ರಿಯನಾದ ಆಂಜನೇಯನನ್ನು ವಿಶೇಷವಾಗಿ ಮಂಗಳವಾರ ಮತ್ತು ಶನಿವಾರ ಪೂಜಿಸಿದರೆ ಎಲ್ಲವೂ  ಫಲಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಶನಿವಾರದಂದು ಆಂಜನೇಯನ ದರ್ಶನ ಸ್ಮರಣೆ ಹಾಗೂ ಪ್ರಾರ್ಥನೆಗೆ ವಿಶೇಷವಾದ ಮಹತ್ವವಿದೆ. ಒಂದು ಗ್ರಂಥ ಮೂಲದ ಪ್ರಕಾರ ಲಂಕಾಧೀಶ ನಾದ ರಾವಣ ಗ್ರಹಗಳನ್ನು ನಿಯಂತ್ರಿಸುವಷ್ಟು ಶಕ್ತಿಶಾಲಿಯಾಗಿದ್ದ.  ಹುಟ್ಟುವ ನವಜಾತ ಶಿಶು ಅಮರ ಮತ್ತು ಅಜೇಯನಾಗುತ್ತಾನೆ ಎಂಬ ನಂಬಿಕೆಯಿಂದ, ಆತನ ಪುತ್ರ ಮೇಘನಾದನ ಜನನದ ಸಮಯದಲ್ಲಿ ಎಲ್ಲ ಗ್ರಹಗಳನ್ನು ಅಪಹರಿಸಿ ಜ್ಯೋತಿಷ್ಯ ಶಾಸ್ತ್ರದ ಕುಂಡಲಿಯ ಹನ್ನೊಂದನೆ ಮನೆಯಲ್ಲಿ ಇರಿಸುತ್ತಾನೆ. ಇದರಿಂದ ನವಜಾತ ಶಿಶು ಅಮರ ಮತ್ತು ಅಜೇಯ ನಾಗುತ್ತಾನೆ ಎಂಬ ನಂಬಿಕೆ. ಆದರೆ ಶನಿ ಈ ಸ್ಥಾನದಿಂದ ಹೊರ ಹೋಗಲು ಪ್ರಯತ್ನಿಸಿದಾಗ ಕೋಪಗೊಂಡ ರಾವಣ ಶನಿಯನ್ನು ಶಿಕ್ಷಿಸುತ್ತಾನೆ. ಸಂಕಷ್ಟದಲ್ಲಿರುವ ಶನಿಯನ್ನು ಸಂಕಟ ಮೋಚನ ಆಂಜನೇಯ ರಕ್ಷಿಸುತ್ತಾನೆ.  ರಕ್ಷಿಸಲ್ಪಟ್ಟ ಶನಿ ಆಂಜನೇಯನಿಗೆ ವಿಶೇಷವಾದ ವರವನ್ನು ನೀಡುತ್ತಾನೆ. ಆದ್ದರಿಂದ ಯಾರು ಆಂಜನೇಯನನ್ನು ಶನಿವಾರ ವಿಶೇಷವಾಗಿ ಪೂಜಿಸುತ್ತಾರೋ ಅವರು ಶನಿಯ ದುಷ್ಪರಿಣಾಮಗಳಿಂದ ಮುಕ್ತರಾಗುತ್ತಾರೆ.

 ಆಂಜನೇಯ ಭಕ್ತರೇ, ಶುಭ್ರ ಮನಸ್ಸಿನಿಂದ ಭಕ್ತಿಯೆಂಬ ದೀಪದ ಹಣತೆಯನ್ನು ಪ್ರತಿ ಶನಿವಾರ ವಿಶೇಷವಾಗಿ ಶ್ರೀ ಆಂಜನೇಯ ಸ್ವಾಮಿಗೇ ಅರ್ಪಿಸೋಣ, ಹಾಗೂ ಈ ಜೀವನ ಪಥದಲ್ಲಿ ಮುಂದೆ ಮುಂದೆ ನಾವೆಲ್ಲರೂ ಸಾಗೋಣ.

|| ಓಂ ಆಂಜನೇಯಾಯ ನಮಃ||