ಗುರುವಾಣಿ 7 | ಪಂಚಮುಖಿ ಆಂಜನೇಯನ ಮಹಿಮೆ

ಗುರುವಾಣಿ 7 | ಪಂಚಮುಖಿ ಆಂಜನೇಯನ ಮಹಿಮೆ

 ಮನೋಜವಂ ಮಾರುತತುಲ್ಯವೇಗಂ 

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ |

ವಾತಾತ್ಮಜಂ ವಾನರಯೂಥಮುಖ್ಯಂ

ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||

Voice of RK

ವಾನರ ಸೇನೆಯ ಜೊತೆಗೂಡಿ
ಸಮುದ್ರದಲ್ಲಿ ಸೇತುವೆಯನ್ನು ನಿರ್ಮಿಸಿ ದಶಕಂಠ ರಾವಣ ಮತ್ತು ಆತನ ಸೈನ್ಯವನ್ನು ಧ್ವಂಸ ಮಾಡಿ ಸೀತಾ ಮಾತೆಯನ್ನು ಬಂಧನದಿಂದ ಮುಕ್ತಗೊಳಿಸಿ, ಮಹಾಭಾರತ ಯುದ್ಧದಲ್ಲಿ ಅರ್ಜುನನ ಧ್ವಜ ಭೇರಿ ಮೊಳಗಿಸಿ ಪಾಂಡವರಿಗೆ ಜಯ ದೊರಕಿಸಿಕೊಟ್ಟ ಆಂಜನೇಯ ಹಿರಿಮೆ ಮೂರು ಲೋಕಕ್ಕೇ ತಿಳಿದ ವಿಷಯ. ಹಾಗಾಗಿ ಈ ವಜ್ರಕಾಯನ ದೇವಾಲಯಗಳು ಅಸಂಖ್ಯಾತ ಸಂಖ್ಯೆಯಲ್ಲಿವೆ.
 ಏಕಮುಖಿ ಆಂಜನೇಯನ ಆರಾಧನೆ ಸರ್ವೇಸಾಮಾನ್ಯವಾಗಿ ಕಂಡರೂ, ಪಂಚಮುಖಿ ಆಂಜನೇಯನ ಆರಾಧನೆ ಅತಿ ಶ್ರೇಷ್ಠ ಹಾಗೂ ವಿಶಿಷ್ಟವಾದದ್ದು.
ಪಂಚಮುಖಿ ಆಂಜನೇಯನ ವಿಶೇಷತೆಯನ್ನು ಅರಿಯುವ ಚಿಕ್ಕ ಪ್ರಯತ್ನವೇ ಇಂದಿನ ಗುರುವಾಣಿ. ಸಂಸ್ಕೃತದಲ್ಲಿ ಪಂಚ ಎಂದು ಕರೆಯಲ್ಪಡುವ ಸಂಖ್ಯೆ ಹಿಂದೂ ಧರ್ಮದ ವಿವಿಧ ಸಿದ್ಧಾಂತಗಳಲ್ಲಿ ವಿಶಿಷ್ಟ ಮಹತ್ವವನ್ನು ಹೊಂದಿದೆ.
 ತತ್ವಶಾಸ್ತ್ರ, ಧರ್ಮಶಾಸ್ತ್ರ, ಆಧ್ಯಾತ್ಮಿಕ, ಆಯುರ್ವೇದ, ಜ್ಯೋತಿಷ್ಯ ಇತ್ಯಾದಿ ಕ್ಷೇತ್ರಗಳಲ್ಲಿ ವಿವಿಧ ಪರಿಕಲ್ಪನೆಗಳೊಂದಿಗೆ ಸಂಖ್ಯೆ ಐದನ್ನು ಬಳಸಲಾಗುತ್ತದೆ. ಪಂಚಾಂಗ, ಪಂಚ ಮಹಾಭೂತಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಕೋಶಗಳು, ಪಂಚ ಮಹಾಯಜ್ಞ, ಪಂಚ ಪಾಂಡವರು, ಪಂಚಗವ್ಯ ಇತ್ಯಾದಿಗಳು ಹಿಂದೂ ಧರ್ಮದಲ್ಲಿ ವಿಶೇಷತೆಯನ್ನು ಹೊಂದಿವೆ. ಹಾಗೆಯೇ ಪಂಚಮುಖಿ ಆಂಜನೇಯನ ಆರಾಧನೆ ಕೂಡ ಒಂದು ವಿಶೇಷವೇ ಸರಿ.
 ಪಂಚಮುಖ ಆಂಜನೇಯನ ವಿರಾಟ ರೂಪವಾಗಿದ್ದು, ಪೂರ್ವದಲ್ಲಿಯ ವಾನರ ಮುಖ, ಕಾಮ, ಕ್ರೋಧ, ಮದ, ಮೋಹ, ಮತ್ಸರ ಎಂಬ ಶತ್ರುಗಳನ್ನು ಸಂಹರಿಸಿದರೆ , ದಕ್ಷಿಣದಲ್ಲಿಯ ನರಸಿಂಹ ಮುಖ. ಭಯ ಬಾಧೆಗಳನ್ನು ನಿವಾರಿಸುತ್ತದೆ. ಪಶ್ಚಿಮದ ಗರುಡ ಮುಖ ರೋಗ ಮತ್ತು ನಕಾರ ಪ್ರಭಾವಗಳನ್ನು ತಡೆಯುತ್ತದೆ. ಉತ್ತರದ ವರಾಹ ಮುಖ ಸಂಪತ್ತು ಮತ್ತು ಸಮೃದ್ಧಿಯನ್ನು ಕೊಡುತ್ತದೆ ಹಾಗೂ ಊರ್ಧ್ವ ದ ಹಯಗ್ರೀವ ಮುಖ ವಿದ್ಯೆ ಮತ್ತು ಧ್ಯಾನದ ಸಂಕೇತ.
ಒಂದು ಗ್ರಂಥ ಮೂಲದ ಪ್ರಕಾರ ಪಾತಾಳ ಲೋಕದ ದೊರೆ ಹಾಗೂ ರಾವಣನ ಸಹೋದರ ಅಹಿರಾವಣ ವಿಭೀಷಣನ ವೇಷ ಧರಿಸಿ ರಾಮ ಮತ್ತು ಲಕ್ಷ್ಮಣರನ್ನು  ಅಪಹರಿಸಿ ಪಾತಾಳ ಲೋಕದಲ್ಲಿ ಬಂಧಿಸುತ್ತಾನೆ. ಪಾತಾಳ ಲೋಕದಲ್ಲಿ ಬಂಧಿಯಾಗಿರುವ ರಾಮ ಲಕ್ಷ್ಮಣರನ್ನು ರಕ್ಷಿಸಲು ವಿರಾಂಜನೇಯ ಪಂಚಮುಖಿ ವಿರಾಟ್ ಟ ರೂಪ ಧರಿಸಿ ರಾಕ್ಷಸರನ್ನು ಸಂಹರಿಸಿ, ರಾಮ ಲಕ್ಷ್ಮಣರಿಗೆ ಬಿಡುಗಡೆಯ ದಾರಿಯನ್ನು ತೋರಿಸುತ್ತಾನೆ.
 ತನ್ನ ಪಂಚ ಮುಖಗಳಿಂದ ವಿರಾಟ ರೂಪವನ್ನು ತೋರಿದ ಆಂಜನೇಯನನ್ನು ನಾವೆಲ್ಲರೂ ಭಕ್ತಿಯಿಂದ ಆರಾಧಿಸಿ ಅಜ್ಞಾನ, ನಕಾರಾತ್ಮಕತೆ, ಮಾನಸಿಕ ಅಶಾಂತಿಯಿಂದ ಮುಕ್ತಿ ಪಡೆದು, ಈ ಜೀವನ ಪಥದಲ್ಲಿ ಮುಂದೆ ಮುಂದೆ ಸಾಗೋಣ. 

||ಓಂ ಆಂಜನೇಯ ನಮಃ||