ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

ಸ್ವಾಮಿವಿವೇಕಾನಂದರಜೀವನಚರಿತ್ರೆ

 

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ” …… ಇವು ಅತ್ಯಂತ ಜನಜನಿತವಾದ ಚೇತೋಹಾರಿ ನುಡಿ ಮುತ್ತುಗಳು. ಇದನ್ನು ಕೇಳಿದಾಕ್ಷಣ ಎಲ್ಲರ ಮನಸ್ಸಿನಲ್ಲೂ ಒಂದು ರೀತಿಯ ಉತ್ಸಾಹ, ಧೈರ್ಯ ಮೂಡಿಬರುತ್ತದೆ.ಅದರೊಟ್ಟಿಗೇ ಆ ಧೀಮಂತ ಮಹಾಪುರುಷನ ಚಿತ್ರವೂ ಮನಸ್ಸಿನ ಮುಂದೆ ಬಂದು ನಿಲ್ಲುತ್ತದೆ. ಈ ಮಾತುಗಳನ್ನು ಆಡಿದ ಆ ಮಾಹಾಪುರುಷ ಮತ್ತಾರೂ ಅಲ್ಲ, ಅವರೇ ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರವರು. ಈ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೆಯೇ. ಹೇಳಿದಷ್ಟೂ ಹೇಳಬೇಕೆನಿಸುವ, ಕೇಳಿದಷ್ಟೂ ಕೇಳಬೇಕೆನಿಸುವ ವ್ಯಕ್ತಿತ್ವ ಅವರದು.

ಸ್ವಾಮಿ ವಿವೇಕಾನಂದರು ಆಧುನಿಕ ಯುಗದ ಶ್ರೇಷ್ಠ ಸಂತ, ಚಿಂತಕರಲ್ಲಿ ಒಬ್ಬರು. 1893 ರಲ್ಲಿ ಶಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣದಿಂದಾಗಿ ಅವರು ಜಗದ್ ವಿಖ್ಯಾತರಾದದ್ದು ,ಇಡೀ ವಿಶ್ವಕ್ಕೇ ಹಿಂದೂ ಧರ್ಮದ ಪರಿಚಯ ಮಾಡಿದ್ದು ಈಗ ಇತಿಹಾಸ. ಅವರ ಹೆಸರು ಕೇಳಿದಾ ಕ್ಷಣ ಜನರಿಗೆ ಆ ಭಾಷಣದ ನೆನಪು ಮೂಡುತ್ತದೆ. ಅವರು ವಿದೇಶಕ್ಕೆ ಹೋಗದೇ ಇದ್ದಿದ್ದರೆ ಬಹುಶಃ ಜಗತ್ತಿಗೆ ಭಾರತದ ಕುರಿತ ಕಲ್ಪನೆ ಬೇರೆಯೇ ಇರುತ್ತಿತ್ತೇನೋ. ಹಿಂದೂ ಧರ್ಮದ ಕಂಪನ್ನು ಎಲ್ಲೆಡೆಯೂ ಹರಡಿ ಭಾರತದ ಘನತೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ. ಬುದ್ಧಿವಂತ ಹಾಗೂ ಮಹಾ ಮೇಧಾವಿಯಾಗಿದ್ದ ಅವರು ಒಳ್ಳೆಯ ವಾಗ್ಮಿಯೂ ಕೂಡ. ಅಷ್ಟೇ ಅಲ್ಲದೆ ಅವರಿಗೆ ದೇಶದ ಬಗ್ಗೆ ಅಪಾರ ಪ್ರೇಮವಿತ್ತು. ಅವರು ಒಬ್ಬ ಮಹಾನ್ ದೇಶ ಭಕ್ತರಾಗಿದ್ದರು. ಅವರು ನಿಜವಾದ ಅಭಿವೃದ್ಧಿ, ಜಾಗತಿಕ ಆಧ್ಯಾತ್ಮಿಕತೆ ಮತ್ತು ಜಗತ್ತಿನಲ್ಲಿ ಶಾಂತಿಯನ್ನು ಬಯಸಿದ್ದರು.

ಮನ ಮುಟ್ಟುವಂತೆ ಮಾತನಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಭವಿಷ್ಯದ ಬಗ್ಗೆ ಅವರು ಹೇಳುತ್ತಿದ್ದ ಮಾತುಗಳು ಕೇಳುವವರಿಗೆ ಸ್ಪೂರ್ತಿ ನೀಡಿ, ಮನಸ್ಸಿಗೆ ಮುದ ನೀಡುತ್ತಿದ್ದವು. ಭಗವಂತನ ಈ ಸೃಷ್ಟಿ ನಾಶವಾಗುವಂತಹುದಲ್ಲ. ಭವಿಷ್ಯದಲ್ಲಿ ಅದು ಇನ್ನೂ ಸುಂದರವಾಗುವಂತಹುದು. ಪ್ರತಿ ಒಬ್ಬರ ಹೃದಯದಲ್ಲೂ ಪ್ರೇಮ ಅನಾವರಣಗೊಳ್ಳುತ್ತದೆ ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದರು ಮತ್ತು ಅದು ಅವರ ಬಲವಾದ ನಂಬಿಕೆಯಾಗಿತ್ತು ಕೂಡ. ತಮ್ಮಲ್ಲಿದ್ದ ಎಲ್ಲವನ್ನೂ ಕೊಡುವಂತಹ ಪ್ರೇಮ ಅವರದಾಗಿತ್ತು. ಅವರನ್ನು ಸನ್ಯಾಸಿ ಯೋಧ ಎಂದೂ ಕರೆಯುತ್ತಿದ್ದರು. ತ್ಯಾಗ ಮತ್ತು ಸೇವೆ ಅವರ ಮಂತ್ರವಾಗಿತ್ತು. ಅವರು ಸನ್ಯಾಸಕ್ಕೆ ಹೊಸ ವ್ಯಾಖ್ಯನವನ್ನೇ ಬರೆದರು. ಅವರ ಪರಂಪರೆಯಲ್ಲಿ ನಂತರದಲ್ಲಿ ಬಂದ ಎಲ್ಲರ ಉದ್ದೇಶವೂ ಒಂದೇ ಆಗಿತ್ತು – ಅದು “ಜನರ ಸೇವೆ”. ಮನುಕುಲದ ಉನ್ನತಿಯೇ ಅವರು ಜಪಿಸುತ್ತಿದ್ದ ಮಂತ್ರವಾಗಿತ್ತು. ಒಮ್ಮೆ ಅವರನ್ನು ನಿಮ್ಮ ಕನಸೇನು ಎಂದು ಕೇಳಿದಾಗ ಅವರು ಹೀಗೆ ಹೇಳುತ್ತಾರೆ– “ ನನ್ನ ದೇಶ ಹಾಗೂ ನನ್ನ ಧರ್ಮ ಜಗತ್ತಿನ ಯಾವುದೇ ದೇಶ, ಯಾವುದೇ ಧರ್ಮಕ್ಕಿಂತ ಕಿಂಚಿತ್ತೂ ಕಡಿಮೆ ಇಲ್ಲ ಎಂದು ಸಾಬೀತು ಮಾಡುವುದು ನನ್ನ ಕನಸು. ಅದು ನನ್ನ ಗುರಿ ಕೂಡ”. ಇವರು ಜಾತಿ ಪದ್ಧತಿಯನ್ನು ಬಲವಾಗಿ ವಿರೋಧಿಸುತ್ತಿದ್ದರು. ಬಾಲ್ಯದಿಂದಲೂ ಇವರಿಗೆ ಸಾಧು, ಸಂತರ ಬಗ್ಗೆ ಅಪಾರ ಸೆಳೆತವಿತ್ತು. ಬೇರೆ ಬೇರೆ ದೇಶಗಳ ಧರ್ಮ, ಸಂಸ್ಕೃತಿಗಳನ್ನು ಅವರು ತುಂಬಾ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದರು. ಅವರಿಗೆ ಅಪಾರವಾದ ಭಾಷಾ ಪಾಂಡಿತ್ಯವಿತ್ತು. ಅವರು ಇಂಗ್ಲಿಷ್, ಉರ್ದು,ಹಿಂದಿ,ಅರೇಬಿಕ್,ಪರ್ಶಿಯನ್ ಮತ್ತು ಸಂಸ್ಕೃತ ಭಾಷೆಗಳನ್ನು ಕಲಿತಿದ್ದರು.

ಕಲ್ಕತ್ತಾದಲ್ಲಿ ಜನಿಸಿದ ನರೇನ್ ಸಾಧು,ಸಂತರನ್ನು ಭೇಟಿ ಮಾಡುತ್ತಿದ್ದ. ಆವನ ಪ್ರಶ್ನೆ ಒಂದೇ ಆಗಿತ್ತು– “ ನೀವು ದೇವರನ್ನು ಕಂಡಿದ್ದೀರಾ?” ಈ ಪ್ರಶ್ನೆ ಎಲ್ಲರನ್ನೂ ತಬ್ಬಿಬ್ಬು ಮಾಡುತ್ತಿತ್ತು. ಆ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹುಡುಕುತ್ತಾ ಆ ಬಾಲಕ – ಅವರ ಗುರುಗಳನ್ನು ಭೇಟಿಮಾಡಿದ್ದು, ಸ್ವಾಮಿ ವಿವೇಕಾನಂದರಾಗಿ ಜಗದ್ವಿಖ್ಯಾತರಾಗಿ ಪ್ರಪಂಚದ ಉದ್ದಗಲಕ್ಕೂ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸಿದ್ದು, ಎಲ್ಲವೂ ಅವಿಸ್ಮರಣೀಯ. ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿಯುವುದೆಂದರೆ ಸಮುದ್ರದ ಆಳಕ್ಕೆ ಇಳಿದಂತೆ. ಅವರನ್ನು ಸಂಪೂರ್ಣವಾಗೆ ಅರಿಯುವುದು ಕಷ್ಟ ಸಾಧ್ಯ. ಅವರ ಮಾತಿನಲ್ಲಿಯೇ ಹೆಳುವುದಾದರೆ – “ವಿವೇಕಾನಂದರನ್ನು ಅರಿಯಲು ಮತ್ತೊಬ್ಬ ವಿವೇಕಾನಂದರೇ ಹುಟ್ಟಿ ಬರಬೇಕು”. ಬಾಲ್ಯದಿಂದ ಕಡೆಯವರೆಗೆ ಅವರು ನಡೆದು ಬಂದ ಹಾದಿ, ಅವರ ಆ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾ ಅವರ ಬಗ್ಗೆ ತಿಳಿಯುವ ಒಂದು ಸಣ್ಣ ಪ್ರಯತ್ನ ಮಾಡೋಣ. ಅವರ ನೆನಪು ನಮ್ಮೆಲ್ಲರಿಗೂ ಸ್ಪೂರ್ತಿ ನೀಡಿ ಎಲ್ಲರಿಗೂ ಆಂತರ್ಯದ ಸತ್ಯ ದರ್ಶನವಾಗಲಿ ಎಂಬ ಹಾರೈಕೆ ನನ್ನದು.

ಈ ಲೇಖನಗಳ ಸರಮಾಲೆಯಲ್ಲಿ ಅವರನ್ನು,ಅವರ ತತ್ವ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ನಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನ ಮಾಡೋಣ. ಎಲ್ಲರಿಗೂ ಶುಭವಾಗಲಿ.