ಶ್ರೀ ಶ್ರೀಧರ ಸ್ವಾಮೀ ಮಹಾರಾಜರ ಬಾಲ್ಯದ ಜೀವನ

|| ಜಯದೇವ ಜಯದೇವ ||

 

ವರದಪುರದ ಮಹಾ ಯೋಗಿ ದತ್ತಾತ್ರೇಯ ಅವತಾರಿ ಭಗವಾನ್ ಶ್ರೀ ಶ್ರೀಧರ ಸ್ವಾಮೀ ಮಹಾರಾಜರು ಈಗಿನ ಗುಲ್ಬರ್ಗ ಜಿಲ್ಲೆಯ ಲಾಡ ಚಿಂಚೋಣಿಯಲ್ಲಿ ಶ್ರೀ ನಾರಾಯಣ ರಾಯರು ಮತ್ತು ಕಮಲಾ ಮಾಯಿ ದಂಪತಿಗಳಿಗೆ ಜನಿಸಿದರು ಬಾಲ್ಯದಲ್ಲಿಯೇ ಶ್ರೀಧರರ ಮನಸ್ಸಿನ ಮೇಲೆ ಸನಾತನ ಧರ್ಮದ ಪ್ರಭಾವ ಗಾಢವಾಗಿ ಬೀರಿತ್ತು. ರಾಮ ಭಜನೆ ದತ್ತ ಜಯಂತಿ ಹರಿಕಥೆ ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವುದು ಶ್ರೀಧರರ ದಿನಚರಿ ಆಗಿತ್ತು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಶ್ರೀಧರರ ವಿಧಾಭ್ಯಾಸದಲ್ಲಿ ಹಲವು ತೊಂದರೆಗಳು ಉಂಟಾದವು. ಇದಕ್ಕೆ ಸಾಲದೆಂಬಂತೆ ಮನೆಗೆ ಅಧಾರ ಸ್ಥಂಬವಾಗಿದ್ದ ಅಣ್ಣ ತ್ರಯಂಬಕ ಕಾಯಿಲೆಯಿಂದ ಸ್ವರ್ಗಸ್ಥರಾದರು. ಇದಾದ ನಂತರ ಸ್ವಲ್ಪ ಕಾಲದಲ್ಲಿಯೇ ತಾಯಿ ಕಮಲಾ ಬಾಯಿ ಕೂಡ ಇಹಲೋಕದ ಯಾತ್ರೆಯನ್ನು ಮುಗಿಸಿದರು. ತಂದೆ ತಾಯಿ ಅಣ್ಣ ಅಕ್ಕ ಯಾರೂ ಇಲ್ಲದೆ 12 ವರ್ಷದ ಬಾಲಕ ಶ್ರೀಧರರು ಒಬ್ಬಂಟಿಯಾದರು. ಈ ಕಷ್ಟಗಳಿಂದ ಜ್ಞಾನ ತೇಜಸ್ವಿಯಾದ ಶ್ರೀಧರರ ಉತ್ಶಾಹ ಕುಂದಲಿಲ್ಲ, ಬದಲಿಗೆ ವಿಧ್ಯಾಭ್ಯಾಸ ಮುಂದುವರೆಸಬೇಕೆಂಬ ಅವರ ತವಕ ಇಮ್ಮಡಿಸಿತು. ಅತಿ ಚತುರನಾಗಿದ್ದ ಬಾಲಕ ಶ್ರೀಧರ ತನ್ನ ಗುರುಗಳ ಹಾಗು ಸಹಪಾಟಿಗಳ ಅಪಾರ ಪ್ರೀತಿ ಗಳಿಸಿದ. ಬಾಲಕ ಶ್ರೀಧರನ ಅಪಾರ ಜ್ಞಾನಕ್ಕೆ ಕೆಲವೊಮ್ಮೆ ಗುರುಗಳೇ ಬೆರಗಾಗುತ್ತಿದ್ದರು. ಬಾಲ್ಯದಿಂದಲೇ ಮೈಗೂಡಿಸಿಕೊಂಡಿದ್ದ ಜಪ, ತಪ, ಭಜನೆ, ಸತ್ಸಂಗ ಹಾಗು ಧಾರ್ಮಿಕ ಜಯಂತಿಗಳಲ್ಲಿ ಆಸಕ್ತಿ ಬಲವಾಯಿತು. ಅಧ್ಯಾತ್ಮ ಶಿಖರವನ್ನೇರುವ ಕನಸು ಹೊತ್ತು ವೇದಾಂತದ ಮಹತ್ವವನ್ನು ತಿಳಿದರು. ಶಂಕರಚಾರ್ಯರ ಅದ್ವೈತ ವೇದಾಂತ ಶ್ರೀಧರರ ಮೆಲೆ ಅಗಾಧವಾದ ಪ್ರಭಾವ ಬೀರಿತು. ಭಗವದ್ಗೀತೆಯನ್ನು ಕಂಠ ಪಾಠ ಮಾಡಿದರು. ಸಾಹಿತ್ಯ ವೇದಾಂತದ ಪಾರಂಗತನಾಗಿ ಅದನ್ನು ಪ್ರಚಾರ ಮಾಡಲು ದೃಢ ಸಂಕಲ್ಪ ಮಾಡಿದರು. ಒಬ್ಬಂಟಿಯಾದ ಶ್ರೀಧರರು ವಿಧ್ಯಾಭ್ಯಾಸವನ್ನು ಮುಂದುವರೆಸುವ ಸಲುವಾಗಿ ಪುನಃ ಅನಾಥ ವಿದ್ಯಾ ಗೃಹದಲ್ಲಿ ಪ್ರವೇಶವನ್ನು ಪಡೆದು ಅಲ್ಲಿಯೇ ವಿಧ್ಯಾಬ್ಯಾಸವನ್ನು ಮುಂದುವರೆಸಿದರು. ಬಾಲ್ಯದಲ್ಲಿಯೇ ಜ್ಞಾನ ಮತ್ತು ಜಪ ತಪಗಳೆಲ್ಲ ಒಲಿದಿದ್ದ ಶ್ರೀಧರರಿಗೆ ಇದರ ಮೇಲೆ ಮೋಹ ಜಾಸ್ತಿ ಆಯಿತು. ಒಂದು ದಿನ ತರಗತಿಯ ಉಪಾಧ್ಯಾಯರು ನಿಮ್ಮ ಜೀವನದ ಗುರಿ ಮತ್ತು ಆಸೆ ಏನೆಂಬುದನ್ನು ಎಲ್ಲಾ ಮಕ್ಕಳಿಗೂ ಬರೆದು ಕೊಡುವಂತೆ ಕೇಳಿದರು. ಶ್ರೀಧರರು ಬರೆದು ಕೊಟ್ಟ ಕಾಗದದಲ್ಲಿ ಹೀಗಿತ್ತು; ಪರಮಾತ್ಮನ ಸಂಪೂರ್ಣ ಕೃಪೆಯನ್ನು ಪಡೆಯುವುದು ಮತ್ತು ಜನತಾ ಸೇವೆಯನ್ನು ಮಾಡುವುದು ನನ್ನ ಜೀವನದ ಗುರಿ. ಸನಾತನ ವೈದ್ಯಕೀಯ ಸಂಸ್ಕೃತಿಯೆ ಜಗತ್ತಿನಲ್ಲಿ ಶ್ರೇಷ್ಠವಾದುದು. ಧರ್ಮ. ನೀತಿ, ದೇಶಭಕ್ತಿ ಮತ್ತು ತತ್ವಜ್ಞಾನ ಇವುಗಳ ಅರಿವನ್ನು ಜನರಲ್ಲಿ ಮೂಡಿಸುವುದೇ ನನ್ನ ಜೀವನದ ಮಹಾ ಗುರಿ’. ಬಾಲ್ಯದ ಈ ಮಹಾಗುರಿಯೇ ಜೀವನದ ಭದ್ರ ಬುನಾದಿಯಾಯಿತು.

|| ಜಯದೇವ ಜಯದೇವ ||