ಬ್ರಹ್ಮಾಂಡ ಪಾಲಕ ಶ್ರೀ ವಿಷ್ಣು

ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ |

ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀ ||

 

. ಭಗವಂತನ ಆದೇಶವಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎಂದು ಭಗವದ್ಗೀತೆಯಲ್ಲಿ ಹೇಳಿದೆ. ನಾನು ಕೇವಲ ನಿಮಿತ್ತ ಮಾತ್ರ, ಆತನ ಆದೇಶದಂತೆಯೇ ಕೆಲಸ ಸಾಗುತ್ತಿದೆ ಎಂಬ ಅರಿವನ್ನು ಇಟ್ಟುಕೊಂಡೇ ಹೆಜ್ಜೆ ಇಡುತ್ತಿದ್ದೇನೆ.ಪದಗಳು ಸರಾಗವಾಗಿ ಹರಿದು ಲೇಖನಗಳು ಸುಂದರವಾಗಿ ಮೂಡಲಿ ಎಂದು ಆಶಿಸುತ್ತಾ ಭಗವಂತನ ಮಂತ್ರ ಜಪಿಸುತ್ತಾ ಪ್ರಾರಂಭ ಮಾಡುತ್ತಿದ್ದೇನೆ.ಹೊಸ ಕೆಲಸದ ಆರಂಭದಲ್ಲಿ ಹೇಗೆ ಮಂತ್ರಗಳಿಂದ ಗಣೇಶನನ್ನು ಪೂಜಿಸಲಾಗುತ್ತದೆಯೋ ಹಾಗೆಯೇ ಶುಭ ಸಂದರ್ಭಗಳಲ್ಲಿ, ಶುಭ ಕಾರ್ಯದಲ್ಲಿ, ಶುಭ ಪಲವನ್ನು ಪಡೆಯಲು ಪಠಿಸುವ ವಿಷ್ಣು ಮಂಗಳಂ ಮಂತ್ರ ಜಪಿಸುತ್ತಾ ಬ್ರಹ್ಮಾಂಡ ಪಾಲಕ, ಬ್ರಹ್ಮಾಂಡ ರಕ್ಷಕನನ್ನು ಸ್ಮರಿಸುತ್ತಾ, ಭಗವಂತನ ಕುರಿತ ಸರಣಿ ಲೇಖನಗಳ ಮೊದಲ ಈ ಲೇಖನವನ್ನು ಆರಂಭಿಸುತ್ತಿದ್ದೇನೆ.
ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವನ್ನು ವಿಶ್ವರೂಪಿ” ನಾರಾಯಣ ಎಂದೂ ಕರೆಯುತ್ತಾರೆ ಹಿಂದೂ ಧರ್ಮದ ಪ್ರಕಾರ ಆತ ಸಕಲ ಲೋಕಗಳ ಪಾಲಕ, ಬ್ರಹ್ಮಾಂಡ ಪಾಲಕ. ಪುರಾಣಗಳು ವಿಶ್ವರಕ್ಷಕ, ವಿಶ್ವದ ಚೈತನ್ಯ ಎಂದು ವರ್ಣಿಸುವ ಈತನನ್ನು ಭಕ್ತರು ಹಲವಾರು ಹೆಸರುಗಳಿಂದ ಸ್ಮರಿಸುತ್ತಾರೆ. ಭಕ್ತರು ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಯುತ ,ಶ್ರೀನಿವಾಸ, ಗೋವಿಂದ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ. ವಿಷ್ಣು ಆರಾಧಕರನ್ನು ವೈಷ್ಣವರೆಂದು ಕರೆಯುತ್ತಾರೆ. ವೈಷ್ಣವರ ಆರಾಧ್ಯ ದೈವವೇ ವಿಷ್ಣು. ಧರ್ಮ ಸಂಸ್ಥಾಪನೆಗಾಗಿ ಭಗವಂತ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದ ಎಂದು ಪುರಾಣಗಳು ಹೇಳುತ್ತವೆ. ಭೂಲೋಕದಲ್ಲಿ ಪಾಪದ ಕೊಡ ತುಂಬಿದಾಗ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಲು ವಿಷ್ಣು ಅವತಾರಗಳನ್ನು ತಳೆದು ಭಕ್ತರನ್ನು ಸಂರಕ್ಷಿಸುವನೆಂಬ ನಂಬಿಕೆಯಿದೆ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃI ಅಭ್ಯುತ್ಥಾನ ಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ II

ಯಾವಾಗ ಧರ್ಮ ಕುಸಿದು ಅಧರ್ಮವು ವೃದ್ಧಿಯಾಗುತ್ತದೋ, ಆಗ ಭಗವಂತ ಅವತಾರವೆತ್ತುತ್ತಾನೆ ಎಂದು ಈ ಮೇಲಿನ ಸಾಲುಗಳು ಹೇಳುತ್ತವೆ.

ವಿಷ್ಣು “ವಿಶ್” ಎಂಬ ಪದದಿಂದ ಬಂದಿದೆ.”ವಿಶ್”ಎಂದರೆ ವ್ಯಾಪಿಸುವುದು ಎಂದರ್ಥ. ವಿಷ್ಣು ಎಂದರೆ ಸರ್ವವ್ಯಾಪಿ. . ವಿಷ್ಣು ಪುರಾಣದಲ್ಲಿ ಆ ಸರ್ವವ್ಯಾಪಿ ಭಗವಂತನ ಅನಂತ, ಅಮೋಘ,ಅಗಮ್ಯ, ಅಗಾಧ ಶಕ್ತಿ, ವೈಭವಗಳ ಅಭೂತಪೂರ್ವ ವರ್ಣನೆ ಇದೆ. ಭಗವಂತ ವಿಷ್ಣುವಿನ ವಿರಾಟ ಸ್ವರೂಪ ಅನಂತವಾದದ್ದು, ಅದಕ್ಕೆ ಅಂತ್ಯ ಎಂಬುದೇ ಇಲ್ಲ.

ಶಿವ ಕೈಲಾಸವಾಸಿಯಾದರೆ, ವಿಷ್ಣು ವೈಕುಂಠವಾಸಿ. ಜಯ,ವಿಜಯರು ಈತನ ದ್ವಾರಪಾಲಕರು. ಚತುರ್ಭುಜನಾದ ಈತ ಒಂದು ಕೈಯಲ್ಲಿ ಶಂಖ, ಒಂದು ಕೈಯಲ್ಲಿ ಚಕ್ರ, ಒಂದು ಕೈಯಲ್ಲಿ ಗದೆ ಮತ್ತು ಒಂದು ಕೈಯಲ್ಲಿ ಕಮಲವನ್ನು ಹಿಡಿದಿರುವುದನ್ನು ಕಾಣಬಹುದು. ಈತನ ಶಂಖವನ್ನು ಪಾಂಚಜನ್ಯವೆಂದೂ, ಚಕ್ರವನ್ನು ಸುದರ್ಶನ ಚಕ್ರವೆಂದೂ ಕರೆಯಲಾಗುತ್ತದೆ. ಈತನ ಧನುಸ್ಸು ಸಾರಂಗ ಹಾಗೂ ಕಂಠಾಭರಣವನ್ನು ವೈಜಯಂತಿ ಎಂದು ಕರೆಯಲಾಗುತ್ತದೆ. ಈತನ ವಾಹನ ಗರುಡ. ಆದಿಶೇಷನ ಮೇಲೆ ಯೋಗನಿದ್ರಾ ಸ್ಥಿತಿಯಲ್ಲಿ ಪವಡಿಸಿರುವ, ಪಾದದ ಬಳಿ ಮಹಾಲಕ್ಷ್ಮಿ ಕುಳಿತಿರುವ ಚಿತ್ರವನ್ನು ಸರ್ವೇ ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮ, ವಿಷ್ಣುವಿನ ನಾಭಿಯಿಂದ ಜನಿಸಿದ ಎಂದು ಹೇಳಲಾಗುತ್ತದೆ. ನಂತರ ವಿಷ್ಣು ಅವನಿಗೆ ಸೃಷ್ಟಿಯ ಜವಾಬ್ದಾರಿಯನ್ನು ನೀಡಿದ ಎಂದು ಪುರಾಣಗಳು ಹೇಳುತ್ತವೆ.

ಮಹರ್ಷಿ ವೇದವ್ಯಾಸರಿಂದ ವಿಷ್ಣು ಪುರಾಣ ವಿರಚಿತವಾಗಿದೆ. ವೈಷ್ಣವ ಸಂಪ್ರದಾಯವನ್ನು ಅನುಸರಿಸುವವರಿಗೆ ಅದು ಅತ್ಯಂತ ಮಹತ್ವವಾದ ಹಾಗೂ ಪವಿತ್ರವಾದ ಗ್ರಂಥ.ಇದನ್ನು ಪುರಾಣ ರತ್ನವೆಂದೂ ಕರೆಯುತ್ತಾರೆ. ಅಷ್ಟಾದಶ ಪುರಾಣಗಳಲ್ಲಿ ಇದನ್ನು ಪ್ರಾಥಮಿಕ ಪುರಾಣ ಎಂದು ಹೇಳಬಹುದು. ಇದರಲ್ಲಿ ಅಖಂಡ ಬ್ರಹ್ಮಾಂಡದ ನಿರ್ಮಾಣ ಹಾಗೂ ವಿನಾಶಗಳ ಸಂಪೂರ್ಣ ಮಾಹಿತಿ ಇದೆ.ಅಷ್ಟೇ ಅಲ್ಲದೆ ಇದರಲ್ಲಿ ವಿಷ್ಣು ತನ್ನ ಭಕ್ತರನ್ನು ಉದ್ಧರಿಸಿದ ಸಾವಿರಾರು ಕಥೆಗಳಿವೆ.

ಅವುಗಳಲ್ಲಿ ಹಿಂದೂ ಪುರಾಣದಲ್ಲಿ ಬರುವ ಕ್ಷೀರ ಸಾಗರದ ಮಂಥನ ತುಂಬಾ ವಿಶೇಷವಾಗಿದೆ. ಇದರಲ್ಲಿ ದೇವತೆಗಳು ಹೇಗೆ ಅಮರರಾದರು ಮತ್ತು ಅಸುರರನ್ನು ಹೇಗೆ ಸೋಲಿಸಿದರು ಎನ್ನುವುದರ ವಿವರಣೆ ಇದೆ. ಇದರಲ್ಲಿ ವಿಷ್ಣು, ಮಂಥನಕ್ಕೆ ಅಸುರರ ಮನವೊಲಿಸಿದ್ದು, ನಂತರ ಮೋಹಿನಿಯಾಗಿ ಅಮೃತ ಕೇವಲ ದೇವತೆಗಳಿಗೆ ಸಿಗುವಂತೆ ಮಾಡಿದ್ದು ತುಂಬಾ ಕುತೂಹಲಕಾರಿಯಾಗಿದೆ. ಮಹಾಲಕ್ಷ್ಮಿ ಉದಿಸಿದ್ದು ಕೂಡ ಆ ಮಂಥನದಿಂದಲೇ. ಅದೇ ಮಂಥನದಿಂದ ಹೊರಬಂದ ಹಾಲಾಹಲವನ್ನು ಈಶ್ವರ ಕುಡಿದು ನೀಲಕಂಠನಾದದ್ದು, ವಿಷಕಂಠನಾದದ್ದು ಬಹುಶಃ ನಿಮಗೆಲ್ಲರಿಗೂ ತಿಳಿದಿರಬೇಕು. ದುಷ್ಟರನ್ನು ಶಿಕ್ಷಿಸಿ ಸಜ್ಜನರನ್ನು ಕಾಪಾಡಿದ ಭಗವಂತ ವಿಷ್ಣುವನ್ನು ಸ್ಮರಿಸುತ್ತಾ, ಈ ಜೊತೆಗೂಡಿದ ಪಯಣದಲ್ಲಿ ಒಟ್ಟಿಗೆ ಸಾಗುತ್ತಾ, ಆತನ ಅವತಾರಗಳನ್ನು, ಆತನ ಮಹಿಮೆಯನ್ನು ಅರಿಯುವ ಪ್ರಯತ್ನ ಮಾಡೋಣ. ಈ ನಮ್ಮೆಲ್ಲರ ಮೇಲೆ ಆ ಭಗವಂತನ ಅನುಗ್ರಹವಿರಲಿ, ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ, ಸರ್ವರಿಗೂ ಶುಭವಾಗಲಿ ಎಂದು ಆಶಿಸುತ್ತಾ ……

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ II ಎನ್ನುವ ಕನಕದಾಸರ ಸಾಲುಗಳೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ. ವಂದನೆಗಳು.