ದಶಾವತಾರಗಳು

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ

ವಿಶ್ವಧಾರಂ ಗಗನಸದ್ರಿಶಂ, ಮೇಘವರ್ಣಂ ಶುಭಾಂಗಂ

ಲಕ್ಷ್ಮಿಂಕಾತಂ ಕಮಲಾನಯನಂ, ಯೋಗಿಭಿರ್ಧ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ

 

ತ್ರಿಮೂರ್ತಿಗಳಲ್ಲಿ ಒಬ್ಬನಾದ ಲೋಕ ಪಾಲಕ, ಸೃಷ್ಟಿಯ ರಕ್ಷಕನಾದ ವಿಷ್ಣು ಪರಮಾತ್ಮನ ಸ್ಮರಣೆ ಮಾಡುತ್ತಾ ಆತನ ದಶಾವತಾರಗಳ ಬಗ್ಗೆ ತಿಳಿದುಕೊಳ್ಳೋಣ. ಈ ಅವತಾರಗಳ ಸಂಖ್ಯೆ ಬಗ್ಗೆ ಒಮ್ಮತವಿಲ್ಲ. ಕೆಲವರು ಬುದ್ಧನ ಅವತಾರವೂ ವಿಷ್ಣುವಿನ ಒಂದು ಅವತಾರ ಎಂದು ಹೇಳುತ್ತಾರೆ. ಆದರೆ ಅದನ್ನು ಪೂರ್ವ ಮೀಮಾಂಸಾಚಾರ್ಯರಾದ ಕುಮಾರಿಲ ಭಟ್ಟರು ಒಪ್ಪುವುದಿಲ್ಲ.ಇನ್ನು ಭಗವತ ಪುರಾಣದ ಪ್ರಕಾರ ವಿಷ್ಣುವಿನ ಅವತಾರಗಳು 24. ಅದರಲ್ಲಿ ಪ್ರಮುಖವಾದ ಹತ್ತು ಅವತಾರಗಳ ಬಗ್ಗೆ ಕಣ್ಣು ಹಾಯಿಸೋಣ. ದಶ ಎಂದರೆ ಹತ್ತು, ಹಾಗಾಗಿ ದಶಾವತಾರಗಳು ಎಂದರೆ ಹತ್ತು ಅವತಾರಗಳು ಎಂದಾಗುತ್ತದೆ.

ಮತ್ಸ್ಯಾವತಾರ

ಇದರಲ್ಲಿ ಮೊದಲನೆಯದು ಮತ್ಸ್ಯಾವತಾರ, ಮತ್ಸ್ಯ ಎಂದರೆ ಮೀನು ಎಂದು ಅರ್ಥ. ರಾಜ ವೈವಸ್ವತ (ಮನು) ತರ್ಪಣ (ನೀರು ಅರ್ಪಣೆ) ನೀಡುವಾಗ ತನ್ನ ಅಂಗೈಯಲ್ಲಿ ಒಂದು ಮೀನನ್ನು ಕಾಣುತ್ತಾನೆ. ಮನು ಆ ಮೀನನ್ನು ಅರಮನೆಗೆ ತೆಗೆದುಕೊಂಡು ಹೋಗಿ ಅದನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿದಾಗ ಅದು ಬೆಳೆಯುತ್ತಲೇ ಹೋಗುತ್ತದೆ ಆಗ ಅದನ್ನು ಸಾಗರಕ್ಕೆ ಬಿಡುತ್ತಾನ ಮನು ಮತ್ತು ಅದು ಸಾಮಾನ್ಯವಾದ ಮೀನಲ್ಲ ಎಂದು ಅರಿತ ಮನು ಸತ್ಯ ದರ್ಶನ ಮಾಡಿಸೆಂದು ಅದರ ಮುಂದೆ ಅರಿಕೆ ಮಾಡಿಕೊಳ್ಳುತ್ತಾನೆ. ಆಗ ವಿಷ್ಣು ಪ್ರತ್ಯಕ್ಷನಾಗಿ ಪ್ರಪಂಚಕ್ಕೆ ಬೆಂಕಿ ಮತ್ತು ಪ್ರವಾಹದಿಂದ ಮುಂದೆ ಉಂಟಾಗುವ ವಿನಾಶದ ಬಗ್ಗೆ ತಿಳಿಸುತ್ತಾನೆ ಮತ್ತು ಮನುವನ್ನು “ವಿಶ್ವದ ಎಲ್ಲಾ ಜೀವಿಗಳನ್ನು” ಒಟ್ಟುಗೂಡಿಸಿ ದೇವರಿಂದ ನಿರ್ಮಿತವಾದ ದೋಣಿಯಲ್ಲಿ ಸುರಕ್ಷಿತವಾಗಿಡಲು ಮನುವಿಗೆ ತಿಳಿಸುತ್ತಾನೆ. ಅದರಂತೆಯೇ ಆ ಮುಂದೆ ಪ್ರಪಂಚದಲ್ಲಿ ಪ್ರವಾಹ (ಪ್ರಳಯ) ಉಂಟಾಗುತ್ತದೆ, ಆಗ ವಿಷ್ಣು ಕೊಂಬಿನೊಂದಿಗೆ ದೊಡ್ಡ ಮೀನಿನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ, ಅದಕ್ಕೆ ಮನು ಸಕಲ ಜೀವ ಸಂಕುಲವಿರುವ ದೋಣಿಯನ್ನು ಕಟ್ಟುತ್ತಾನೆ. ಅದು ಅವರನ್ನು ಸುರಕ್ಷತೆಗೆ ಕರೆದೊಯ್ಯುತ್ತದೆ.

ಇನ್ನು ಎರಡನೆಯದು ಕೂರ್ಮಾವತಾರ. :

ಹಿಂದೆ ದೇವ ದಾನವರು ಸಮುದ್ರ ಮಂಥನದ ಕಾಲದಲ್ಲಿ ಕ್ಷೀರ ಸಾಗರವನ್ನು ಕಡೆಯಲು ಮಂದಾರ ಪರ್ವತವನ್ನು ಕಡಗೋಲನ್ನಾಗಿ ಮಾಡಿಕೊಂಡು ಮಥಿಸುವಾಗ ಮಂದಾರ ಪರ್ವತ ಕೆಳಗೆ ಆಧಾರವಿಲ್ಲದೆ ಕುಸಿಯಲಾರಂಭಿಸುತ್ತದೆ. .ಆ ಸಮಯದಲ್ಲಿ ವಿಷ್ಣು ಕೂರ್ಮಾವತಾರ ತಾಳಿ ಮಂಥನ ಸಫಲವಾಗಿ ದೇವತೆಗಳಿಗೆ ಅಮೃತ ದೊರಕಿಸಿ, ಅಮರತ್ವ ಪಡೆಯಲು ಕಾರಣನಾದ ಎಂದು ಪುರಾಣಗಳಲ್ಲಿ ಹೇಳಿದೆ.

ಇನ್ನುಮುಂದೆ ಬರುವುದು ವರಾಹ ಅವತಾರ. ಇದರಲ್ಲಿ ವಿಷ್ಣು ಅರ್ಧ ಹಂದಿ ಮತ್ತು ಅರ್ಧ ಮಾನವನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಹಿರಣ್ಯಾಕ್ಷ ಎಂಬ ರಕ್ಕಸ ಭೂಮಿಯನ್ನು ಸಾಗರದ ಅಡಿಯಲ್ಲಿ ಅಡಗಿಸಿರುತ್ತಾನೆ. ಭೂ ಮಾತೆಯ ಅಸ್ತಿತ್ವವೇ ಅಳಿಸಿ ಹೋಗುವ ಸಮಯದಲ್ಲಿ ವಿಷ್ಣು ವರಾಹಾವತಾರ ತಾಳಿ ತನ್ನ ದಂತಗಳ ಸಹಾಯದಿಂದ ಮುಳುಗಿದ್ದ ಆಕೆಯನ್ನು ಮೇಲಕ್ಕೆ ಎತ್ತಿದ ಎಂದು ಹೇಳಲಾಗುತ್ತದೆ.

ಇನ್ನು ನಾಲಕ್ಕನೆಯ ಅವತಾರ,ಅದುವೇ ನರಸಿಂಹಾವತಾರ: ಬಹುಶಃ ಈ ಅವತಾರದ ಬಗ್ಗೆ ಬಹಳಷ್ಟು ಮಂದಿಗೆ ತಿಳಿದೇ ಇರುತ್ತದೆ. ಇಲ್ಲಿ ಹೆಸರೇ ಸೂಚಿಸುವಂತೆ ವಿಷ್ಣು ಅರ್ಧ ಸಿಂಹ, ಅರ್ಧಮಾನವನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಆ ಸಮಯದಲ್ಲಿ ವಿಷ್ಣುವಿನ ಮಹಾದ್ವೇಷಿಯಾದ ಹಿರಣ್ಯಕಶ್ಯಪು ಎಂಬ ರಾಕ್ಷಸ ರಾಜನಿರುತ್ತಾನೆ.ಆತನ ಪುತ್ರ ಪ್ರಹ್ಲಾದನೋ ವಿಷ್ಣುವಿನ ಪರಮ ಭಕ್ತ. ಇದನ್ನು ಸಹಿಸದ ಹಿರಣ್ಯ ಕಶ್ಯಪು ಅವನಿಗೆ ಸತತವಾಗಿ ಹಿಂಸಿಸುತ್ತಿರುತ್ತಾನೆ.ಕಡೆಗೆ ತನ್ನ ಭಕ್ತನನ್ನು ಕಾಪಾಡಲಿಕ್ಕಾಗಿಯೇ ಭಗವಂತ ಈ ಅವತಾರ ತಾಳಿ ಕಂಬವನ್ನು ಸೀಳಿ ಬಂದು ಹಿರಣ್ಯಕಶ್ಯಪುವನ್ನು ಸಂಹರಿಸಿದ ಎಂದು ಹೇಳಲಾಗುತ್ತದೆ.

ಮುಂದಿನದು ವಾಮನ ಅವತಾರ:

ಇದರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ ಎಂದು ಭಾವಿಸುತ್ತೇನೆ. ಏಕೆಂದರೆ ನಾವು ಆಚರಿಸುವ ದೀಪಾವಳಿಗೂ ಇದಕ್ಕೂ ಸಂಬಂಧವಿದೆ.ಹಿಂದೆ ರಾಕ್ಷಸ ರಾಜನಾದ ಬಲಿ ಎಂಬ ಚಕ್ರವರ್ತಿ ಮೂರೂ ಲೋಕಗಳನ್ನು ವಶಪಡಿಸಿಕೊಂಡು ಆಳುತ್ತಿರುತ್ತಾನೆ. ಅವನು ಮಾಹಾದಾನಿಯೂ, ದೈವ ಭಕ್ತನೂ ಆಗಿರುತ್ತಾನೆ. ದೇವತೆಗಳಿಗೆ ಸಹಾಯ ಮಾಡಲೆಂದೇ ವಿಷ್ಣು ವಾಮನನ ಅವತಾರದಲ್ಲಿ ಬಂದು ತಾನು ಮೂರು ಪಾದಗಳಿಡುವಷ್ಟು ಜಾಗ ನೀಡುವಂತೆ ಕೇಳುತ್ತಾನೆ. ಅದಕ್ಕೆ ಒಪ್ಪಿದ ಬಲಿ ಚಕ್ರವರ್ತಿ ದಾನ ನೀಡಲು ಮುಂದಾಗುತ್ತನೆ. ಆ ವಾಮನನ ಒಂದು ಪಾದ ಇಡೀ ಭೂಮಿಯನ್ನು ಆಕ್ರಮಿಸಿದರೆ, ಎರಡನೆಯದು ಅಗಸವನ್ನು ಆಕ್ರಮಿಸುತ್ತದೆ. ಕಡೆಗೆ ಬಲಿ ಮೂರನೆಯ ಪಾದವನ್ನು ತನ್ನ ತಲೆಯ ಮೇಲೆ ಇರಿಸಲು ಹೇಳುತ್ತಾನೆ. ಆಗ ವಾಮನ ಬಲಿಯ ತಲೆಯ ಮೇಲೆ ಪಾದವಿರಿಸಿ ಆತನನ್ನು ಪಾತಾಳಕ್ಕೆ ತಳ್ಳುತ್ತಾನೆ. ರಾಕ್ಷಸನಾದರೂ ಸಾತ್ವಿಕತೆ ಮೆರೆದ ಬಲಿಯನ್ನು ಅಪರಾ ಏಕಾದಶಿಯಂದು ಪೂಜಿಸಲಾಗುತ್ತದೆ ಮತ್ತು ಅಂದು ವಾಮನ ಅವತಾರಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಈಗ ಮುಂದಿನ ಪರುಷುರಾಮನ ಅವತಾರದ ಬಗ್ಗೆ ತಿಳಿಯೋಣ :

ಇದರಲ್ಲಿ ಓರ್ವ ಬ್ರಾಹ್ಮಣ ಕ್ಷತ್ರಿಯನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ವಿಷ್ಣು ಪರಮಾತ್ಮ. ಪರಶುರಾಮನ ಕೈಯಲ್ಲಿ ಕೊಡಲಿಯನ್ನು ನಾವು ಕಾಣಬಹುದು. ಕ್ಷತ್ರಿಯರು ರಾಕ್ಷಸರಂತೆ ವರ್ತಿಸುತ್ತಿದ್ದ ಆ ಸಮಯದಲ್ಲಿ ಸಾಮಾನ್ಯ ಜನರನ್ನು ರಕ್ಷಿಸಲೆಂದೇ ವಿಷ್ಣು ಪರಶುರಾಮನ ಅವತಾರವೆತ್ತಿದ ಎಂದು ಹೇಳಲಾಗುತ್ತದೆ.

ಮುಂದಿನ ಅವತಾರ ರಾಮನ ಅವತಾರ:

ದಶರಥ ನಂದನ, ಕೌಸಲ್ಯಾ ಸುತ, ಸೀತಾ ವಲ್ಲಭ ರಘುವರ ಶ್ರೀ ರಾಮಚಂದ್ರನ ಬಗ್ಗೆ ಅರಿಯದರು ಯಾರು ಹೇಳಿ? ರಾಮಾಯಣಲ್ಲಿ ಶ್ರೀ ರಾಮ ರಾವಣನನ್ನು ಸಂಹರಿಸಿದ್ದು, ಅಷ್ಟೇ ಅಲ್ಲದೆ ಆರಂಭದಿಂದಲೂ ಧರ್ಮದ ರಕ್ಷಣೆಗಾಗಿ ದುಷ್ಟರನ್ನು ಶಿಕ್ಷಿಸಿ,ಶಿಷ್ಟರನ್ನು ಕಾಪಾಡುವುದನ್ನು ನಾವು ಕಾಣುತ್ತೇವೆ.

ಮುಂದಿನ ಅವತಾರವೇ ಬಲರಾಮನ ಅವತಾರ:

ಇದು ದ್ವಾಪರಯುಗದಲ್ಲಿ ಬರುವ ಶ್ರೀ ಕೃಷ್ಣನ ಸಹೋದರ ಬಲರಾಮ. ಈ ಅವತಾರದ ಬಗ್ಗೆಯೂ ಕೆಲವು ಭಿನ್ನಾಭಿಪ್ರಾಯಗಳಿವೆ. ಬಲರಾಮ ಆದಿಶೇಷನ ಅವತಾರ ಎನ್ನುವುದು ಕೆಲವರ ಅಭಿಪ್ರಾಯ. ಸಹೋದರರಾದ ಕೃಷ್ಣ ಮತ್ತು ಬಲರಾಮ ರಕ್ಕಸನಂತೆ ವರ್ತಿಸುತ್ತಿದ್ದ ಸೋದರ ಮಾವ ಕಂಸನ ಸಂಹಾರ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯವೇ.

ಕೃಷ್ಣನ ಅವತಾರ:

ಶ್ರೀ ಕೃಷ್ಣ ಪರಮಾತ್ಮನ ಲೀಲೆಗಳ ಬಗ್ಗೆ ತಿಳಿಯದವರು ಯಾರು ಹೇಳಿ?. ತಂತ್ರಗಾರಿಕೆ,ಕುತಂತ್ರಗಳು ಹೆಚ್ಚಾಗಿದ್ದ ಸಮಯದಲ್ಲಿ ಪಾಂಡವರ ಪರ ನಿಂತು ಅವರಿಗೆ ಸಹೆಗಾರನಾಗಿ,ದುರುಳ ಕೌರವರ ನಾಶವಾಗಿ ಧರ್ಮ ಉಳಿಯುವಂತೆ ಮಾಡುತ್ತಾನೆ ಕೃಷ್ಣ ಪರಮಾತ್ಮ.

ಕಲ್ಕಿ ಅವತಾರ:

ಇದು ಭಗವಾನ್ ವಿಷ್ಣುವಿನ ಹತ್ತನೆಯ ಮತ್ತು ಕೊನೆಯ ಅವತಾರವಾಗಿದೆ. ಶ್ರೀಮದ್ಭಾಗವತ ಮತ್ತು ಕಲ್ಕಿ ಪುರಾಣಗಳ ಪ್ರಕಾರ ಕಲಿಯುಗದ ಕೊನೆಯಲ್ಲಿ ಮತ್ತು ಸತ್ಯ ಯುಗದ ಆರಂಭದ ಮಧ್ಯೆ ಭಗವಂತ ಕಲ್ಕಿಯಾಗಿ ಅವತರಿಸುತ್ತಾನೆ ಎಂದು ಹೇಳಲಾಗಿದೆ. ಆತ ಕೈಯಲ್ಲಿ ಖಡ್ಗ ಹಿಡಿದು ಶೇತ ಅಶ್ವದ ಮೇಲೆ ಕಾಣಿಸಿಕೊಳ್ಳುತ್ತಾನೆ ಎಂಬ ವಿವರವೂ ಇದೆ.

.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ II

ಅಂದರೆ ಯಾವಾಗ ಧರ್ಮದ ಅವನತಿಯಾಗಿ ಅಧರ್ಮ ಹೆಚ್ಚುತ್ತದೋ ಆಗ ನಾನು ಅವತಾರವೆತ್ತುತ್ತೇನೆ. ಸಾಧು ಸಂತರ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ನಾನು ಅವತರಿಸುತ್ತೇನೆ ಎಂದು ಅರ್ಥೈಸುವ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಅವತಾರದ ಕುರಿತು ನುಡಿದಿರುವ ಈ ಸಾಲುಗಳೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ.