ಜೀವನದ ಉದ್ದೇಶ

ಜೀವನದ ಉದ್ದೇಶ

 

ಜಗತ್ತಿನ ಚಲನ ಶಕ್ತಿಯಾದ ಈ ಪ್ರಕೃತಿಮಾತೆಗೆ ಎರಡು ರೂಪಗಳಿವೆ. ಮೊದಲನೆಯದು ಭಕ್ತಿ, ಶ್ರದ್ಧೆಗಳ ದ್ಯೋತಕವಾದ ಸಾತ್ವಿಕ ರೂಪ. ಇನ್ನೊಂದು ಅರಿಷಡ್ವರ್ಗಗಳನ್ನು ಪ್ರಚೋದಿಸುವ ಅಸುರ ರೂಪ. ವ್ಯಕ್ತಿಯು ಯಾವ ಗುಣಕ್ಕೆ ಪ್ರಾಮುಖ್ಯತೆ ಕೊಡುತ್ತಾನೆ ಎಂಬುದರ ಮೇಲೆ ಅವನ ಸಾಧನೆ ನಿರ್ಧಾರವಾಗುತ್ತದೆ. ನಿಮಗೆ ಹಿಮಾಲಯವನ್ನು ಕಾಣುವ ಹಾಗೂ ಏರುವ ಹಂಬಲವಿದ್ದರೆ, ಅದಕ್ಕೆ ಭಕ್ತಿ ಮತ್ತು ಶ್ರದ್ಧೆಗಳಿಂದ ಕೂಡಿದ ದೃಢಸಂಕಲ್ಪ ಹಾಗೂ ಪೂರ್ಣ ತಯಾರಿ ಬೇಕಾಗುತ್ತದೆ. ಉನ್ನತವಾದುದನ್ನು ಸಾಧಿಸಲು ನಿಖರವಾದ ಗುರಿ ಇರಬೇಕು, ಮುಂದೆ ಇಡುವ ಪ್ರತಿಯೊಂದು ಹೆಜ್ಜೆಯ ಔಚಿತ್ಯದ ಅರಿವು ಇರಬೇಕು. ಗುರಿ ಇಲ್ಲದ ಬದುಕು ದೇಗುಲದಲ್ಲಿ ದೇವರನ್ನು ಕಾಣಲು ಹೋಗಿ ಹೊರಗಿರುವ ಶಿಲಾಬಾಲಕೆಯನ್ನು ನೋಡುತ್ತಾ ಹೊರಾಂಗಣದಲ್ಲೇ ಉಳಿದು ಬಿಟ್ಟಂತೆ ಆಗುತ್ತದೆ. ಇಂತ ವ್ಯಕ್ತಿಗಳು ಕ್ಷಣಕಾಲದ ಸುಖ, ಸಂತೋಷ, ಭಯ, ನೋವು, ಮೋಹ ಮುಂತಾದ ಲೌಕಿಕ ಅವಸ್ಥೆಗಳ ಬಲೆಯಲ್ಲಿ ಬಿದ್ದು ಒದ್ದಾಡುತ್ತಾರೆ. ಆದ್ದರಿಂದ ಜೀವನದಲ್ಲಿ ಉನ್ನತ ಮತ್ತು ನಿಖರ ಉದ್ದೇಶಗಳನ್ನು ಇಟ್ಟುಕೊಂಡರೆ ಕ್ಷಣಕಾಲದ ಮೋಹದ ಬಲೆಗೆ ಬೀಳದೆ ಸರ್ವಶ್ರೇಷ್ಠವಾದ ಪರಮ ಪಥದಲ್ಲಿ ನಡೆದು ಜೀವನದ ಗುರಿಯನ್ನು ತಲುಪಲು ಸಾಧ್ಯ. ಎಲ್ಲರಿಗೂ ಶುಭವಾಗಲಿ.