ಗುರುವಾಣಿ45 :ಸುಂದರಕಾಂಡಅಧ್ಯಾಯ 40-41

ವಾನರವೀರರ ಪರಾಕ್ರಮದ ಕುರಿತು ಹನುಮಂತ ಮಾಡಿದ ವರ್ಣನೆ

|| ಓಂ ಆಂಜನೇಯಾಯ ನಮಃ ||

 

ಕೇಸರಿಪುತ್ರ ಹನುಮಂತ ವಾನರ ವೀರರ ಪರಾಕ್ರಮವನ್ನು ಸೀತಾ ಮಾತೆಗೆ ವಿವರಿಸಿ ಅಪೂರ್ವ ಚೂಡ ಮಣಿಯನ್ನು ಸ್ವೀಕರಿಸಿ ರಾಜಸುತೆ ಸೀತಾ ದೇವಿಯ ಅಭಿಪ್ರಾಯವನ್ನು ಸಂಪೂರ್ಣವಾಗಿ ಅರಿತ ಮೇಲೆ ಇನ್ನು ತನ್ನ ಕಾರ್ಯ ಸ್ವಲ್ಪವೇ ಉಳಿದಿರುವುದೆಂದು ತಿಳಿದ ಆ ವಾನೋರೋತ್ತಮನು ಸಂತಸಗೊಂಡು ಸೀತಾ ಮಾತೆಯಿದ್ದ ಪ್ರದೇಶದಿಂದ ಸ್ವಲ್ಪ ದೂರ ಹೋಗಿ ಗಾಢ ಆಲೋಚನೆಯಲ್ಲಿ ತೊಡಗಿದನು. ಸೀತಾ ದೇವಿಯನ್ನು ನೋಡುವ ಒಂದು ಕೆಲಸ ಮುಗಿಯಿತಾದರೂ ರಾವಣನ ಬಲಾಬಲಗಳನ್ನು ಪರೀಕ್ಷಿಸದೆ ನಾನು ಹಿಂತಿರುಗಿದರೆ ನಾನು ಬಂದ ಕಾರ್ಯ ಅಪೂರ್ಣವೇ ಸರಿ. ಸಾಮ, ದಾನ, ಭೇದ ಮತ್ತು ದಂಡೋಪಾಯಗಳಲ್ಲಿ ರಾಕ್ಷಸರ ವಿಷಯದಲ್ಲಿ ದಂಡೋಪಾಯವೇ ಸಮಂಜಸವಾದದ್ದು ಯುದ್ದ ಶೂರರಾದ ಹಲವು ರಾಕ್ಷಸರ ಜೊತೆ ಯುದ್ದಕ್ಕಿಳಿದರೆ ರಾವಣನ ಸೈನ್ಯದ ಬಲಾಬಲ ತಿಳಿಯುತ್ತದೆ. ಶತ್ರು ಬಲವನ್ನು ಚೆನ್ನಾಗಿ ಅರಿತರೆ ಸೀತಾದೇವಿಯ ವಿಮೋಚನೆ ಸುಲಭವಾಗಬಹುದು. ಆದ್ದರಿಂದ ಅಶೋಕವನವನ್ನು ದ್ವಂಸ ಮಾಡಿದರೆ ಆ ವಾರ್ತೆಯನ್ನು ಕೇಳಿದ ರಾವಣ ಮಹಾಗಜಗಳಿರುವ ದೊಡ್ಡ ಸೈನ್ಯವನ್ನು ಕಳುಹಿಸಬಹುದು. ರಾವಣನ ಸೈನ್ಯವನ್ನು ಸಂಹರಿಸಿ ಸುಗ್ರೀವನ ಬಳಿ ಹೋದರೆ ಆಗ ಒಡೆಯನ ಆಜ್ಞೆಯನ್ನು ಪೂರ್ಣಗೊಳಿಸಿದಂತಾಗುತ್ತದೆ. ಇದಾದ ನಂತರ ಪರಾಕ್ರಮಿ ಹನುಮ ಅತಿವೇಗದಿಂದ ಆ ಅಶೋಕ ವನದಲ್ಲಿದ್ದ ಗಿಡ ಮರಗಳನ್ನು ಬಿರುಗಾಳಿಯಂತೆ ಒಂದೊಂದಾಗಿ ಉರುಳಿಸ ತೊಡಗಿದನು. ಆ ವನದಲ್ಲಿದ್ದ ವೃಕ್ಷಗಳೆಲ್ಲ ನೆಲಸಮವಾದವು. ಜಲಾಶಯಗಳು ಒಡೆದು ಹೋದವು. ಆ ವನದಲ್ಲಿದ್ದ ವಿಧ ವಿಧದ ಪಕ್ಷಿಗಳು ವಿಕೃತ ಧ್ವನಿ ಮಾಡಿ ಅರಚುತಿದ್ದವು. ಅಧಾರಸ್ತಂಭಗಳಂತಿದ್ದ ವೃಕ್ಷಗಳು ನೆಲ ಸಮವಾದಾಗ ಅವುಗಳನ್ನು ತಬ್ಬಿ ಹಬ್ಬಿದ್ದ ಬಳ್ಳಿಗಳಿಗೆ ಆಶ್ರಯ ಇಲ್ಲವಾಯಿತು. ಆ ವನದಲ್ಲಿದ್ದ ಮಹಾ ಸರ್ಪಗಳು, ಹುಲಿಗಳು ಇತರ ಮೃಗಗಳು ಹೆದರಿ ಭಯದಿಂದ ವಿಕಾರವಾಗಿ ಶಬ್ದ ಮಾಡುತಿದ್ದವು. ಸುಂದರವಾಗಿದ್ದ ಆಶೋಕವನವು ಸಂಪೂರ್ಣವಾಗಿ ತನ್ನ ಸೌಂದರ್ಯವನ್ನು ಕಳೆದುಕೊಂಡು ಶೋಕ ವನವಾಯಿತು. ಹೀಗೆ ಕಪೀಶ್ವರನು ಬಲಶಾಲಿಯಾದ ರಾವಣನ ಮನಸ್ಸಿಗೆ ನೋವನ್ನುಂಟು ಮಾಡಲು ವನವನ್ನೇ ನಾಶ ಮಾಡಿದನು. ನಂತರ ರಾಕ್ಷಸರೊಡನೆ ಯುದ್ಧ ಮಾಡುವ ಬಯಕೆಯಿಂದ ಆಶೋಕ ವನದ ಹೊರಬಾಗಿಲಿಗೆ ಬಂದು ಶತ್ರುಗಳ ಬರುವಿಕೆಗಾಗಿ ಎದುರು ನೋಡತೊಡಗಿದನು.

|| ಓಂ ಆಂಜನೇಯಾಯ ನಮಃ ||