ಗುರುವಾಣಿ 50 : ಸುಂದರಕಾಂಡಅಧ್ಯಾಯ 46

ಹನುಮಂತನಿಂದ ರಾವಣನ ಸೇನಾಪತಿಗಳ ಸಂಹಾರ

|| ಓಂ ಆಂಜನೇಯಾಯ ನಮಃ ||

 

ಮುಖ್ಯಪ್ರಾಣ ಆಂಜನೇಯನನ್ನು ಮನಸಾರೆ ಸ್ಮರಿಸುತ್ತಾ ರಾವಣನ ಸೇನಾಪತಿಯ ಸಂಹಾರದ ವಿಷಯವನ್ನು ಈ ಗುರುವಾಣಿಯಲ್ಲಿ ತಿಳಿಯೋಣ. ವಾನರವೀರನು ಸೈನ್ಯಸಮೇತ ಅಮಾತ್ಯಪುತ್ರರನ್ನು ಸಂಹರಿಸಿದನೆಂದು ಹಿಂದಿನ ಗುರುವಾಣಿಯಲ್ಲಿ ತಿಳಿದಿದ್ದೇವೆ. ಆ ಅಮಾತ್ಯಪುತ್ರರ ಸಂಹಾರದ ವಾರ್ತೆಯನ್ನು ಕೇಳಿದ ರಾವಣನು ಕೊಂಚ ಭಯಭೀತನಾದನು. ಮಹಾವೀರರೂ ಹಾಗೂ ಮಹಾನೀತಿಕೋವಿದರೂ ಆದ ಆತನ ಐದು ಮಂದಿ ಸೇನಾನಾಯಕರನ್ನು ಕರೆಸಿ ಇಂತೆಂದನು. ‘ಎಲೈ ಸೇನಾಪತಿಗಳೇ ನೀವುಗಳೆಲ್ಲರೂ ರಥ, ಗಜ, ತುರಗ, ಪದಾತಿಗಳುಳ್ಳ ಮಹಾಸೈನ್ಯದೊಂದಿಗೆ ಹೋಗಿ ಆ ಕಾಡುಕಪಿಯನ್ನು ಬಂಧಿಸಿರಿ. ಆತನ ಯುದ್ಧ ಸಾಮರ್ಥ್ಯವನ್ನು ನೋಡಿದಾಗ ಆತ ಸಾಮಾನ್ಯ ಕಪಿಯೆನಿಸುವುದಿಲ್ಲ. ಆತನು ಮಹಾಬಲವುಳ್ಳ ಪರಾಕ್ರಮಿಯಾದ ವಿಚಿತ್ರ ಪ್ರಾಣಿಯಂತೆ ತೋರುತ್ತಾನೆ. ದೇವಾನುದೇವತೆಗಳೇ ಇಂತಹ ಮಹಾಪ್ರಾಣಿಯನ್ನು ಸೃಷ್ಟಿಸಿ ನನ್ನ ವಿನಾಶಕ್ಕಾಗಿ ಕಳುಹಿಸಿರಬಹುದು. ನೀವೆಲ್ಲರೂ ಹೋಗಿ ಆತನನ್ನು ಬಂಧಿಸಿ ತನ್ನಿರಿ. ಇಂದ್ರನಾಗಲಿ ಸುರಾಸುರರಾಗಲಿ. ದಾನವರಾಗಲಿ ಯುದ್ಧದಲ್ಲಿ ನಿಮ್ಮೆದುರಿಗೆ ನಿಲ್ಲಲು ಸಮರ್ಥರಲ್ಲ’ . ಈ ಮಾತುಗಳನ್ನು ಕೇಳಿದ ಆ ಸೇನಾನಾಯಕರು ವೇಗವಾಗಿ ನಾಗಾಲೋಟದ ವೇಗದ ಕುದುರೆಗಳನ್ನು ಹತ್ತಿ ವಿವಿಧ ಅಸ್ತ್ರಧಾರಿಗಳಾಗಿ ಆ ಮಾರುತಿಯ ಕಡೆಗೆ ಮುನ್ನುಗ್ಗಿ ಎಲ್ಲಾ ದಿಕ್ಕುಗಳಿಂದ ಭಯಂಕರವಾದ ವಿಚಿತ್ರವಾದ ಆಯುಧಗಳಿಂದ ಹನುಮಂತನನ್ನು ಸುತ್ತುವರೆದರು. ಆದರೆ ಮಹಾಬಲನೂ ಪರಾಕ್ರಮಿಯೂ ಆದ ಹನುಮಂತನು ಭಯಂಕರವಾದ ಎತ್ತರಕ್ಕೆ ಬೆಳೆದು ಗಟ್ಟಿಯಾಗಿ ಘರ್ಜಿಸುತ್ತಾ ಆ ರಾಕ್ಷಸರ ಮೇಲೆ ಎರಗಿದನು. ಗರುಡನು ಭೂಮಿಯಲ್ಲಿಯ ಸರ್ಪವನ್ನು ವೇಗವಾಗಿ ಎತ್ತಿಕೊಂಡು ಹೋಗುವ ರೀತಿಯಲ್ಲಿ ಸಾಲು ವೃಕ್ಷವನ್ನು ಬುಡಸಮೇತ ಕಿತ್ತು ಅದರಿಂದ ಆ ರಾಕ್ಷಸ ಸೇನಾಧಿಪತಿಗಳ ಮೇಲಿನ ಧಾಳಿಯನ್ನು ಮುಂದುವರೆಸಿದನು. ಮುಂದುವರೆದ ಆ ವಾನರನು ಪರ್ವತವೊಂದನ್ನು ಕಿತ್ತು ಅಲ್ಲಿ ಅಳಿಯದೆ ಉಳಿದ ರಾಕ್ಷಸರ ಮೇಲೆ ಎರಗಿದನು. ದೇವೇಂದ್ರ ಅಸುರರನ್ನು ಕೊಂದ ರೀತಿಯಲ್ಲಿ ಮಾರುತಿಯು ಆ ಸೇನಾನಾಯಕರನ್ನು ಸಂಹರಿಸಿದನು. ಸತ್ತು ಬಿದ್ದಿರುವ ಆನೆ ಕುದುರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮಹಾರಥಗಳ ತುಂಡುಗಳಿಂದ ರಣಭೂಮಿಯ ಎಲ್ಲಾ ದಾರಿಗಳು ಮುಚ್ಚಿಹೋದವು. ರಾವಣನ ಸೇನಾಧಿಪತಿಗಳ ಸಂಹಾರದ ನಂತರ ಸಮರಾಂಗಣದಲ್ಲಿ ಮಾರುತಿಯು ಮೃತ್ಯುದೇವತೆಯಂತೆ ಶತ್ರುಗಳ ಬರುವಿಕೆಯನ್ನು ಎದುರು ನೋಡುತ್ತಾ ಕುಳಿತನು.

|| ಓಂ ಆಂಜನೇಯಾಯ ನಮಃ ||