ಗುರುವಾಣಿ – 5: ದೇವ ದೇವತೆಗಳನ್ನು ಒಲಿಸಿಕೊಳ್ಳಬೇಕಾದರೆ ಪೂಜೆ, ಪ್ರಾರ್ಥನೆ ಹಾಗೂ ತಪಸ್ಸಿನ ಅಗತ್ಯವಿದೆ.

ಗುರುವಾಣಿ – 5: ದೇವ ದೇವತೆಗಳನ್ನು ಒಲಿಸಿಕೊಳ್ಳಬೇಕಾದರೆ ಪೂಜೆ, ಪ್ರಾರ್ಥನೆ ಹಾಗೂ ತಪಸ್ಸಿನ ಅಗತ್ಯವಿದೆ.

Voice of RK

 

ಮಹಾಕಾಯ, ರತ್ನ ಕುಂಡಲ ಹಾಗೂ ಸಾಗರೋತ್ತಕ  ನೆಂದು ಸ್ತುತಿಸಲ್ಪಡುವ ಆಂಜನೇಯನ ಶಕ್ತಿ, ಸೇವಾ ಭಾವನೆ ಮತ್ತು ನಾಯಕತ್ವದ ಗುಣಗಳನ್ನು ನಾವೂ ಹೊಂದಲು ಇರುವ ತುಂಬಾ ಸುಲಭವಾದ ಮಾರ್ಗವೆಂದರೆ 

 ‘ಹನುಮಾನ್ ಚಾಲೀಸ ಪಠಣ ಹಾಗೂ ಪಾರಾಯಣ’. ವಾಯುಪುತ್ರನನ್ನು ವರ್ಣಿಸುವ ನಲವತ್ತು ಭಕ್ತಿಯ ಸುಂದರ ಪದ್ಯಗಳನ್ನು ಹದಿನಾರನೇ ಶತಮಾನದಲ್ಲಿ ಸಂತ ತುಳಸಿದಾಸರು ಹಿಂದಿಯ ಉಪಭಾಷೆ ‘ಆವಾದಿ’ ಯಲ್ಲಿ ರಚಿಸಿದ್ದಾರೆ.

ಈ ಭಕ್ತಿಯ ಪದ್ಯಗಳ ಅರ್ಥ ಮತ್ತು ಆಳ ಮಹಾ ಸಾಗರವಿದ್ದಂತೆ. ಈ ಸಾಗರದ ಒಂದು ಹನಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೇ ಇಂದಿನ ಗುರುವಾಣಿ.

‘ಗುರು ಚರಣ’ ವೆಂಬ ನುಡಿಯೊಂದಿಗೆ ಪ್ರಾರಂಭವಾಗುವ ಈ ಪದ್ಯ, ಭಗವಾನ್ ಶ್ರೀರಾಮನನ್ನು ಸಂಬೋಧಿಸುತ್ತದೆ.ಇದರಲ್ಲಿ ದಾಸರು ಏನು ಹೇಳುತ್ತಿದ್ದಾರೆ ಗೊತ್ತೇ?‘ಗುರುವಿನ ಪಾದದ ಧೂಳಿನಿಂದ’ನನ್ನ ಮನಸ್ಸಿನ ಕನ್ನಡಿಯನ್ನು ಶುದ್ಧ ಗೊಳಿಸುತ್ತಿದ್ದೇನೆ.. ಗುರು ಚರಣಕ್ಕೆ ಕಾಯ, ವಾಚ ಹಾಗೂ ಸಂಪೂರ್ಣ ಮನಸ್ಸಿನಿಂದ ನಮ್ಮನ್ನು ಸಮರ್ಪಿಸಿಕೊಂಡರೆ ಮನಸ್ಸಿನ ಕನ್ನಡಿ ಶುಭ್ರಗೊಂಡು, ಹೇಗೆ ಶುಭ್ರವಾದ ಕನ್ನಡಿ ಸ್ವಚ್ಛ ಬಿಂಬವನ್ನು ಪ್ರತಿಫಲಿಸುತ್ತದೆಯೋ ಹಾಗೆಯೇ ಸಮರ್ಪಿತವಾದ ನಮ್ಮ ಮನಸ್ಸು ಸಹಾ ಸದಾ ಉತ್ತಮ ಆಚಾರ ವಿಚಾರಗಳನ್ನು ಚಿಂತಿಸುತ್ತದೆ. ಸಂಕ್ಷಿಪ್ತ ರೀತಿಯಲ್ಲಿ ಹೇಳುವುದಾದರೆ ‘ಸಮರ್ಪಣಾ ಭಾವನೆ’ ಈ ಜೀವನದ ಶಾಂತಿ ಮತ್ತು ಸಮಾಧಾನದ ಮೂಲಮಂತ್ರ.

ಮುಂದುವರಿದ ಈ ಪದ್ಯದಲ್ಲಿ ತುಳಸಿದಾಸರು ತಾನು ಯಾರೆಂಬುದನ್ನು ವಿವರಿಸುತ್ತಾರೆ. “ವಾಯುಪುತ್ರ ನಾನೋ ಅಜ್ಞಾನಿ, ಲೌಕಿಕದ ಅರಿವಿಲ್ಲದ ಅಲ್ಪ ಜ್ಞಾನಿ 

 ನನಗೆ ಶಕ್ತಿ, ಬುದ್ಧಿ ಮತ್ತು ಜ್ಞಾನವನ್ನು ನೀಡಿ ದೇಹದ ಅಸ್ವಸ್ಥತೆಯನ್ನು ಮತ್ತು ಮಾನಸಿಕ ಅಪೂರ್ಣತೆಯನ್ನು ಗುಣಪಡಿಸು.. ಸಂತನ ಈ ಅರಿಕೆಯ ಅರ್ಥ- ನಮ್ಮಲ್ಲಿರುವ ಅಲ್ಪ ಜ್ಞಾನದ ಬಗ್ಗೆ ಗರ್ವ ಪಡದೆ ನಾನು ಅಜ್ಞಾನಿ, ಶೂನ್ಯ, ಹೊರ ಪ್ರಪಂಚದ ಅರಿವಿಲ್ಲವೆಂದು  ನಿಸ್ಸಂಕೋಚವಾಗಿ ಗುರುವಿನ ಮೊರೆ ಹೋದರೆ ಈ ಜೀವನ ಪಥದ ಒಂದು ಮೆಟ್ಟಿಲೇರಿದಂತೆಯೇ. ಇದರರ್ಥ ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು. ಗ್ರೀಕ್ ತತ್ವಜ್ಞಾನಿ ಸಾಕ್ರಟಿಸ್ ಹೇಳಿದಂತೆ ನಾನೇನೂ ಅರಿಯೆ ಎಂದು ಅರಿವುದೇ ನಿಜವಾದ ಜ್ಞಾನ.

ಆಂಜನೇಯ ಭಕ್ತರೇ ಹನುಮಾನ್ ಚಾಲೀಸ ಸ್ತೋತ್ರವನ್ನು ಕಂಠಸ್ಥ ಮತ್ತು  ಹೃದ್ಗತ ಮಾಡಿಕೊಂಡು ನಿತ್ಯ ಪಾರಾಯಣ ಮಾಡಿ ವಾಯುಪುತ್ರನ ಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡು, ಶಾಂತಿ, ಸಮಾಧಾನ ಹಾಗೂ ಪರಿಪೂರ್ಣ ಜೀವನದತ್ತ ಹೆಜ್ಜೆ ಹಾಕೋಣ.

|| ಓಂ ಆಂಜನೇಯಾಯ ನಮಃ||