ಹನುಮಂತನಿಂದ ಅಮಾತ್ಯ ಪುತ್ರರ ಸಂಹಾರ
|| ಓಂ ಆಂಜನೇಯಾಯ ನಮಃ ||
ಮಹತ್ಮಾನಾದ ವಾನರನ ಪರಾಕ್ರಮ ಮುಂದುವರೆಯಿತು. ಜಂಬುಮಾಲಿಯ ಸಂಹಾರದ ನಂತರ ಕುಪಿತಗೊಂಡ ರಾವಣೇಶ್ವರ ಏಳು ಮಂದಿ ಅಮಾತ್ಯ ಪುತ್ರರನ್ನು ಆ ವಾನರ ವೀರನೊಡನೆ ಯುದ್ಧ ಮಾಡಲು ಕಳುಹಿಸಿದನು. ಮಹಾಬಲಿಷ್ಠರು ಧನುರ್ಧಾರಿಗಳು ಆಗಿದ್ದ ಆ ಅಮಾತ್ಯ ಪುತ್ರರು ಯುದ್ದ ಕುದುರೆಗಳನ್ನೂಡಿದ ಸುವರ್ಣಮಯ ಜಾಲರಿಗಳಿಂದ ಅಲಂಕೃತವಾಗಿದ್ದ ರಥದೊಂದಿಗೆ ರಣೋತ್ಸಹಾದಿಂದ ಮಿಂಚುವ ಮೋಡಗಳಂತೆ ಘರ್ಜಿಸುತ್ತಾ ಹನುಮಂತನ ಕಡೆಗೆ ಧಾವಿಸಿದರು. ಹನುಮಂತನನ್ನು ಜಯಿಸುವ ತವಕದಿಂದ ಪೈಪೋಟಿಗೆ ಬಿದ್ದ ಪ್ರತಿಸ್ಪರ್ಧಿಗಳಂತೆ ಆ ಮಂತ್ರಿಕುಮಾರರು ಹನುಮಂತನ ಮೇಲೆ ಬಾಣಗಳ ಮಳೆ ಸುರಿಸುತ್ತಾ ವೇಗವಾಗಿ ಮಳೆಯನ್ನು ಸುರಿಸುವ ಮೋಡಗಳಂತೆ ಚಲಿಸುತ್ತಿದ್ದರು.ಆ ಕುಮರರ ಬಾಣಗಳ ಸುರಿಮಳೆಯಿಂದ ಮುಚ್ಚಿಹೋದ ಹನುಮಂತನು ಮಳೆ ಮೋಡಗಳಿಂದ ಮುಚ್ಚಿ ಹೋದ ಪರ್ವತದಂತೆ ಕಂಡನು. ಆದರೆ ಸಾಟಿಯೇ ಇಲ್ಲದ ವೀರನಾದ ಮಾರುತಿಯು ಘೋರವಾಗಿ ಘರ್ಜನೆಗೈದು ಅಮಾತ್ಯಪುತ್ರರ ಸೈನ್ಯವನ್ನು ಭಯಗೊಳಿಸುತ್ತಾ ಅವರ ಮೇಲೆ ಎರಗಿದನು. ಕೆಲವು ರಾಕ್ಷಸರು ವಾನರವೀರನ ಘರ್ಜನೆಯನ್ನು ಕೇಳಿಯೇ ಅಸು ನೀಗಿದರು. ಶತ್ರು ಸಂಹಾರಕನಾದ ಹನುಮಂತನು ಆ ರಾಕ್ಷಸರಲ್ಲಿ ಕೆಲವರನ್ನು ಕಾಲಿನಿಂದ ಅಮುಕಿ ಮುಷ್ಟಿಯಿಂದ ಕೈಉಗುರುಗಳಿಂದ ಸಂಹರಿಸಿದನು. ಆನೆ ಕುದರೆಗಳು ಭೂಮಿಯ ಮೇಲೆ ಹೊರಳಾಡುತ್ತಿದ್ದವು. ಅಮಾತ್ಯಪುತ್ರರ ರಥಗಳು ಮುರಿದು ಬಿದ್ದವು. ಹನುಮಂತನ ಆ ಪರಾಕ್ರಮಕ್ಕೆ ರಾಕ್ಷಸಸೇನೆಯು ಚೆಲ್ಲಪಿಲ್ಲಿಯಾಯಿತು. ಮಹಾಬಲಸಂಪನ್ನಾದ ಹಾಗೂ ಪರಾಕ್ರಮಶಾಲಿಯಾದ ಹನುಮಂತನು ಎಲ್ಲಾ ರಾಕ್ಷಸರನ್ನು ಸಂಹರಿಸಿ ಇನ್ನೂ ಯುದ್ಧ ಮಾಡಬೇಕೆಂಬ ಅಪೇಕ್ಷೆಯಿಂದ ರಾವಣೇಶ್ವರನ ಮತ್ತೊಂದು ಸೈನ್ಯದ ಬರುವಿಕೆಗಾಗಿ ಎದುರು ನೋಡುತ್ತಾ ಕುಳಿತನು.
|| ಓಂ ಆಂಜನೇಯಾಯ ನಮಃ ||