ಗುರುವಾಣಿ 48 : ಸುಂದರಕಾಂಡಅಧ್ಯಾಯ 44

ಹನುಮಂತನಿಂದ ಜಂಬುಮಾಲಿಯ ಸಂಹಾರ

|| ಓಂ ಆಂಜನೇಯಾಯ ನಮಃ ||

 

ಕೇಸರಿಪುತ್ರ ಪವನತನಯ ಮಂಗಳಮೂರುತಿ ಆಂಜನೇಯ ಅಶೋಕವನವನ್ನು ಧ್ವಂಸ ಮಾಡಿದ ನಂತರ ಅಲ್ಲಿಯ ರಾಕ್ಷಸರನ್ನು ಸಂಹರಿಸಿದನೆಂದು ನಾವೆಲ್ಲಾ ತಿಳಿದಿದ್ದೇವೆ. ಸೀತಾ ಮಾತೆಯ ವಿಮೋಚನೆಯ ಪಣತೊಟ್ಟ ಈತ ತನ್ನ ಪರಾಕ್ರಮವನ್ನು ಮುಂದುವರೆಸಿ ಪ್ರಹಸ್ತನ ಮಗ ಜಂಬು ಮಾಲಿಯನ್ನು ಸಂಹರಿಸಿದ ವಿಷಯವನ್ನು ಈ ಗುರುವಾಣಿಯಲ್ಲಿ ತಿಳಿಯೋಣ. ಕೆಂಪು ವಸ್ತ್ರ ಮತ್ತು ಕೊರಳಲ್ಲಿ ಮಾಲೆಯನ್ನು ಧರಿಸಿ ಧನುರ್ಧಾರಿಯಾಗಿ ಜಂಬು ಮಾಲಿ ರಾವಣನ ಅಪ್ಪಣೆಯಂತೆ ಹನುಮಂತನನ್ನು ಎದುರಿಸಲು ಹೊರಟನು. ಇಂದ್ರನ ಧನುಸ್ಸಿಗೆ ಸಮಾನವಾದ ಧನುಸ್ಸನ್ನು ಹಿಡಿದು ಕತ್ತೆಗಳನ್ನು ಹೂಡಿದ ರಥದಲ್ಲಿ ಕುಳಿತು ಹನುಮಂತನ ಕಡೆಗೆ ಧಾವಿಸಿದನು. ಮಹಾ ಬಾಹುವಾದ ಜಂಬು ಮಾಲಿ ಚೈತ್ಯಾ ಪ್ರಸಾದದ ದ್ವಾರದ ಮೇಲೆ ಕುಳಿತಿರುವ ಹನುಮಂತನ ಮೇಲೆ ಬಾಣಗಳ ಪ್ರಯೋಗ ಮಾಡಿದನು. ಆತನ ಬಾಣಗಳು ಹನುಮಂತನ ಮುಖ ಕಂಠ ಹಾಗು ಭುಜಗಳ ಮೇಲೆ ಅಪ್ಪಳಿಸಿದವು. ಜಂಬು ಮಾಲಿಯ ಬಾಣಗಳ ಪ್ರಹಾರದಿಂದ ಕೋಪಗೊಂಡ ಹನುಮಂತ ಪಕ್ಕದಲ್ಲಿಯೇ ಇದ್ದ ದೊಡ್ಡ ಬಂಡೆಯನ್ನು ರಭಸದಿಂದ ಕಿತ್ತು. ಅದೇ ರಭಸದಿಂದ ಜಂಬು ಮಾಲಿಯ ಮೇಲೆಸೆದನು. ಆ ಬಂಡೆಯನ್ನು ಜಂಬು ಮಾಲಿ ತನ್ನ ಹರಿತವಾದ ಬಾಣಗಳಿಂದ ಪುಡಿ ಪುಡಿಯಾಗಿಸಿದನು. ತನ್ನ ಪ್ರಯತ್ನ ವ್ಯರ್ಥವಾದದ್ದನ್ನು ಕಂಡ ಮಹಾವೀರನಾದ ಹನುಮಂತ ದೊಡ್ಡ ವೃಕ್ಷವೊಂದನ್ನು ಬುಡ ಸಹಿತ ಕಿತ್ತು ಅದನ್ನು ಪ್ರಯೋಗಿಸಲು ತಯಾರಿ ನಡೆಸುವಾಗ ಜಂಬು ಮಾಲಿ ಮತ್ತೆ ತನ್ನ ಬಾಣಗಳಿಂದ ಆ ಮರವನ್ನೂ ತುಂಡರಿಸಿ ಬಿಟ್ಟನು, ಜೊತೆಗೆ ಹನುಮಂತನ ಮೇಲೆ ಬಾಣ ಪ್ರಯೋಗವನ್ನು ಮುಂದುವರೆಸಿದನು. ಹನುಮಂತನ ಶರೀರವು ಜಂಬು ಮಾಲಿ ಪ್ರಯೋಗಿಸಿದ ಬಾಣಗಳಿಂದ ತುಂಬಿ ಹೋಯಿತು. ಬಾಣಗಳಿಂದ ದೇಹ ಜರ್ಜರಿತವಾದರೂ ವಾನರ ವೀರನು ಜಂಬು ಮಾಲಿಯ ಮೇಲಿನ ಪ್ರಹಾರವನ್ನು ಮುಂದುವರೆಸಿದನು. ಜಂಬು ಮಾಲಿಯ ರಥ ವಾಹನಗಳು ನುಗ್ಗು ನುಗ್ಗಾದವು. ಆತನ ಅವಯವಗಳು ಭೂಷಣಗಳು ಚೂರು ಚೂರಾದವು. ಜಂಬು ಮಾಲಿ ಮತ್ತು ಆತನ 80,000 ಕಿಂಕರರು ಹತರಾದರು. ಆ ವಾರ್ತೆಯನ್ನು ಕೇಳಿದ ರಾವಣನು ಅತುಲ ಬಲಶಾಲಿ ಪರಾಕ್ರಮಿಯಾದ ಅಮಾತ್ಯ ಪುತ್ರರನ್ನು ಹನುಮಂತನೊಡನೆ ಯುದ್ದ ಮಾಡಲು ಕಳುಹಿಸಿದನು.

ಆಂಜನೇಯ ಭಕ್ತರೆ ಅಮಾತ್ಯ ಪುತ್ರರ ಸಂಹಾರದ ವಿಷಯವನ್ನು ಮುಂದಿನ ವಾರದ ಗುರುವಾಣಿಯಲ್ಲಿ ಕೇಳೋಣ.

|| ಓಂ ಆಂಜನೇಯಾಯ ನಮಃ ||