ಗುರುವಾಣಿ 47 : ಸುಂದರಕಾಂಡಅಧ್ಯಾಯ 43

ಹನುಮಂತ ಅಶೋಕವನದ ಚೈತ್ಯಪ್ರಸಾದವನ್ನು ಧ್ವಂಸ ಮಾಡಿದ್ದು

|| ಓಂ ಆಂಜನೇಯಾಯ ನಮಃ ||

 

ರಾವಣನ ಸೈನ್ಯದ ಬಲಾಬಲವನ್ನ ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಹನುಮಂತ ಅಶೋಕವನದಲ್ಲಿ ಕಿಂಕರ ರಾಕ್ಷಸರ ಸಂಹಾರ ಮಾಡಿದನೆಂದು ಹಿಂದಿನ ಗುರುವಾಣಿಯಲ್ಲಿ ತಿಳಿದಿದ್ದೇವೆ. ಹನುಮಂತನು ತನ್ನ ಬಲವೆಷ್ಟೆಂದು ರಾಕ್ಷಸರಿಗೆ ತೋರ್ಪಡಿಸುತ್ತ ತಾನು ಕುಳಿತಿದ್ದ ಅಶೋಕವನದ ಮಹಾದ್ವಾರದಿಂದ ಹಾರಿ ಮೇರುಶಿಖರದಂತೆ ಎತ್ತರವಾಗಿದ್ದ ಆ ಚೈತ್ಯಾ ಪ್ರಸಾದದ ಮೇಲೆ ನೆಗೆದು ಕುಳಿತುಕೊಂಡನು. ಆ ಚೈತ್ಯಾ ಪ್ರಸಾದವನ್ನು ಹತ್ತಿ ಕುಳಿತಿದ್ದ ಮಹಾ ತೇಜಸ್ವಿಯಾದ ಹನುಮಂತನು ಆಗ ತಾನೇ ಉದಯಿಸಿದ ಮತ್ತೊಬ್ಬ ಸೂರ್ಯನಂತೆ ಪ್ರಕಾಶಿಸುತ್ತಿದ್ದನು. ಕ್ಷಣಮಾತ್ರದಲ್ಲಿ ಹತ್ತಲು ಅಸಾಧ್ಯವಾದ ಎತ್ತರವಾದ ಚೈತ್ಯಾ ಪ್ರಸಾದವನ್ನು ಧ್ವಂಸ ಮಾಡಿ ತನ್ನ ಪ್ರಭಾವದಿಂದ ದೊಡ್ಡದಾದ ಶರೀರವನ್ನು ಧರಿಸಿ ಎರಡು ಮಹಾ ಭುಜಗಳಿಂದ ಭಯಂಕರ ಶಬ್ದವನ್ನು ಮಾಡಿದನು. ಆ ಶಬ್ದದಿಂದ ಆಕಾಶದಲ್ಲಿ ಹಾರಾಡುತ್ತಿದ್ದ ಹಕ್ಕಿಗಳು ಕೆಳಗೆ ಬಿದ್ದವು, ಚೈತ್ಯಾ ಪ್ರಸಾದವನ್ನು ಕಾಯುತ್ತಿದ್ದ ರಾಕ್ಷಸರು ಮೂರ್ಚೆ ಹೋದರು. ಬಳಿಕ ಹನುಮಂತನು ರಾಮಲಕ್ಷ್ಮಣ ಮತ್ತು ಸುಗ್ರೀವರಿಗೆ ಜಯಕಾರ ಮಾಡುತ್ತಾ ನಾನು ಶ್ರೀರಾಮನ ದಾಸನು ಹಾಗೂ ಶತ್ರು ಸಂಹಾರಕನಾದ ಹನುಮಂತನೆಂದು ಘರ್ಜಿಸಿದನು. ಹನುಮಂತನ ಆ ಬಲವಾದ ಶಬ್ದ ಕೇಳಿದ ಕ್ಷಣವೇ ಅಲ್ಲಿಯೇ ಇದ್ದ ರಾಕ್ಷಸರು ಗದೆ ಬಾಣ ಇತ್ಯಾದಿ ಯುದ್ಧಾಯುಧಗಳಿಂದ ವಾನರ ಶ್ರೇಷ್ಠನಾದ ಹನುಮಂತನನ್ನು ಸುತ್ತುವರೆದರು. ಅತ್ಯಂತ ಉತ್ಸಾಹಿತನಾಗಿದ್ದ ಹನುಮಂತನು ವಜ್ರಾಯುಧದಿಂದ ಇಂದ್ರನು ದಾನವರನ್ನು ಸಂಹರಿಸಿದಂತೆ ಚೈತ್ಯಾಪ್ರಸಾದದಲ್ಲಿ ಭಗ್ನಾವಶೇಷವಾಗಿ ಉಳಿದಿದ್ದ ಕಂಬಗಳನ್ನು ಹಿಡಿದು ರಾಕ್ಷಸರನ್ನು ಕ್ಷಣಮಾತ್ರದಲ್ಲಿ ಸಂಹರಿಸಿದನು. ಬಳಿಕ ಮಹಾಪರಾಕ್ರಮಿಯಾದ ಹನುಮಂತನು ಮರುಕ್ಷಣದಲ್ಲೇ ಆಕಾಶದಲ್ಲಿ ಹಾರಿ ನಿಂತು ಮಹಾತ್ಮನಾದ ಶ್ರೀರಾಮಚಂದ್ರನಿಗೆ ಜಯಘೋಷ ಮಾಡುತ್ತಾ ಆತನ ಮಹಿಮೆಯನ್ನು ಮತ್ತು ವಾನರರ ಪರಾಕ್ರಮವನ್ನು ಅಲ್ಲಿದ್ದ ರಾಕ್ಷಸರಿಗೆ ಮನದಟ್ಟು ಮಾಡಿದನು.

|| ಓಂ ಆಂಜನೇಯಾಯ ನಮಃ ||