ಗುರುವಾಣಿ 46 : ಸುಂದರಕಾಂಡಅಧ್ಯಾಯ 42

ಹನುಮಂತನಿಂದ ಕಿಂಕರ ರಾಕ್ಷಸರ ಸಂಹಾರ

|| ಓಂ ಆಂಜನೇಯಾಯ ನಮಃ ||

 

ಮಹಾಬಲನು ಮಹಾಸತ್ವಶಾಲಿಯು ಹಾಗೂ ಮಹಾಬಾಹುವೂ ಆದ ಮುಖ್ಯಪ್ರಾಣ ಹನುಮಂತನಿಗೆ ನಮಿಸೋಣ. ಈ ವಾನರ ವೀರ ಅಶೋಕವನವನ್ನು ಧ್ವಂಸ ಮಾಡಿದ ಸಂಗತಿಯನ್ನು ಹಿಂದಿನ ಗುರುವಾಣಿಯಲ್ಲಿ ಕೇಳಿದ್ದೇವೆ. ಅಶೋಕವನ ಧ್ವಂಸವಾದ ಸಂಗತಿ ಹಾಗೂ ಪ್ರಾಣಿ ಪಕ್ಷಿಗಳು ಮಾಡುತ್ತಿದ್ದ ಆರ್ತ ನಾದವನ್ನು ಕೇಳಿದ ಲಂಕಾ ನಿವಾಸಿಗಳೆಲ್ಲರೂ ಭಯಭೀ ತರಾದರು. ರಾಕ್ಷಸರಿಗೆ ಭಯ ಹುಟ್ಟಿಸುವ ಅಪಶಕುನಗಳು ಕಾಣಿಸಿಕೊಂಡವು. ಕೇಸರಿ ಪುತ್ರನ ಮಹಾ ಘೋರ ರೂಪವನ್ನು ಕಂಡ ಅಶೋಕ ವನದಲ್ಲಿದ್ದ ರಾಕ್ಷಸ ಸ್ತ್ರೀಯರು ಜಾನಕಿಯನ್ನು ಪ್ರಶ್ನಿಸಲಾರಂಭಿಸಿದರು. ಈ ವಾನರ ಯಾರು? ಯಾರಿಗೆ ಸಂಬಂಧಿಸಿದವನು, ಎಲ್ಲಿಂದ ಬಂದ, ನಿನಗೆ ನೀಡಿದ ಸಂದೇಶವಾದರೂ ಏನು? ಎಲ್ಲವನ್ನು ವಿಸ್ತಾರವಾಗಿ ಹೇಳೆಂದು ಜಾನಾಕಿಯನ್ನು ಒತ್ತಾಯಿಸಿದರು. ಆಗ ಸೀತಾದೇವಿಯು ತನಗೇನು ತಿಳಿಯದು ಹಾವಿನ ಜಾಡನ್ನು ಹಾವೇ ಬಲ್ಲದು, ಇವನೊಬ್ಬ ಭಯಂಕರ ರಾಕ್ಷಸನೇ ಇರಬೇಕು ಎಂದಾಗ ವೈಧೇಹಿಯ ಮಾತನ್ನು ಕೇಳಿದ ಕೆಲವು ರಾಕ್ಷಸ ಸ್ತ್ರೀಯರು ದಿಕ್ಕಾಪಾಲಾಗಿ ಓಡಿಹೋದರು ಮತ್ತೆ ಕೆಲವರು ಲಂಕಾಧೀಶ ರಾವಣನಿಗೆ ವಿಷಯ ತಿಳಿಸಲು ಅರಮನೆಗೆ ತೆರಳಿ, ಅವನ ಬಳಿ ಇಂತೆಂದರು. ‘ರಾವಣೇಶ್ವರ ಆತ ಇಂದ್ರನ ದೂತನಾಗಿರಬಹುದು ಅಥವಾ ಸೀತೆಯನ್ನು ಹುಡುಕಲು ರಾಮ ಕಳುಹಿಸಿರುವ ದೂತನಾಗಿರಬಹುದು. ಅದ್ಭುತ ರೂಪವನ್ನು ಹೊಂದಿರುವ ಈ ವಾನರ ಅಶೋಕ ವನದ ಸೀತಾದೇವಿಯ ಜಾಗವನ್ನು ಬಿಟ್ಟು ಉಳಿದೆಲ್ಲ ಭಾಗವನ್ನು ಧ್ವಂಸ ಮಾಡಿದ್ದಾನೆ. ಈತನಿಗೆ ಕಠಿಣ ಶಿಕ್ಷೆಯಾಗಬೇಕು. ರಾಕ್ಷಸ ಸ್ತ್ರೀಯರ ಮಾತನ್ನು ಕೇಳಿದ ರಾವಣನು ಕೋಪದಿಂದ ಕೆಂಡವಾಗಿ ಕಿಡಿ ಕಾರುತ್ತ ಭಯಂಕರವಾಗಿ ಗದರಿ ವಾನರನನ್ನು ಸಂಹರಿಸಲು ಕಿಂಕರರೆಂಬ ರಾಕ್ಷಸರನ್ನು ಕಳುಹಿಸಿದನು. ಆ ಕಿಂಕರ ರಾಕ್ಷಸರು ವಾನರೋತ್ತಮನ ಮೇಲೆ ಮುಗಿಬಿದ್ದರು ಅದಕ್ಕೆ ಉತ್ತರವಾಗಿ ಹನುಮಂತನು ತನ್ನ ಬಾಲವನ್ನು ನೆಲಕ್ಕೆ ಅಪ್ಪಳಿಸಿ. ಗಟ್ಟಿಯಾಗಿ ಸಿಂಹನಾದ ಮಾಡಿದನು. ತನ್ನ ಶರೀರವನ್ನು ಭಯಂಕರವಾಗಿ ಬೆಳೆಸಿಕೊಂಡು ಸಿಂಹದಂತೆ ಘರ್ಜಿಸುತ್ತಾ ಆನಂತರ ಗಟ್ಟಿಯಾಗಿ ಹೂಂಕರಿಸುತ್ತಾ ರಾವಣನ ಕಿಂಕರ ರಾಕ್ಷಸರನ್ನು ಸಂಹಾರ ಮಾಡಿದನು. ಪರಾಕ್ರಮಿಯಾದ ವಾಯುಸುತನು ಮತ್ತೆ ಯುದ್ಧ ಮಾಡುವ ಇಚ್ಛೆಯಿಂದ ಅಶೋಕ ವನದ ಮುಖ್ಯದ್ವಾರದ ಬಳಿ ತನ್ನ ಭಯಂಕರ ರೂಪ ದರಿಸಿ ರಾವಣನ ಸೇನೆಯ ಬರುವಿಕೆಯನ್ನು ಎದುರು ನೋಡತೊಡಗಿದನು.

|| ಓಂ ಆಂಜನೇಯಾಯ ನಮಃ ||