ಗುರುವಾಣಿ 44 : ಸುಂದರಕಾಂಡಅಧ್ಯಾಯ 39

ವಾನರವೀರರ ಪರಾಕ್ರಮದ ಕುರಿತು ಹನುಮಂತ ಮಾಡಿದ ವರ್ಣನೆ

|| ಓಂ ಆಂಜನೇಯಾಯ ನಮಃ ||

 

ವಾನರ ವೀರನ ಕೋರಿಕೆಯಂತೆ ಸೀತಾ ದೇವಿ ಚೂಡಮಣಿಯನ್ನು ಆಂಜನೇಯನಿಗೆ ನೀಡಿದಳೆನ್ನುವುದನ್ನು ಹಿಂದಿನ ವಾರದ ಗುರುವಾಣಿಯಲ್ಲಿ ತಿಳಿದಿದ್ದೇವೆ. ಆ ಪವಿತ್ರ ಮಣಿಯನ್ನು ಪಡೆದ ಹನುಮಂತ ವಿನಮ್ರನಾಗಿ ತನ್ನ ಶಿರದ ಮೇಲೆ ಕೈಯಿರಿಸಿ ವಾನರ ನಾಯಕನ ಪರಾಕ್ರಮವನ್ನು ವಿವರಿಸುತ್ತಾನೆ. ತಾಯಿ ಮಹಾಬಲಸಂಪನ್ನನೂ ಹಾರುವುದರಲ್ಲಿ ನಿಸ್ಸೀಮನೂ/ಅಗ್ರಗಣ್ಯನೂ ವಾನರ ಸೈನ್ಯದ ಒಡೆಯನೂ ಆಗಿರುವ ಸುಗ್ರೀವನು ನಿನ್ನ ವಿಮೋಚನೆಗಾಗಿ ದೃಢ ನಿಶ್ಚಯ ಮಾಡಿದ್ದಾನೆ. ವೈದೇಹಿ, ಅವನು ಅತಿ ಶೀಘ್ರದಲ್ಲಿಯಯೇ ಕೋಟಿ ಕೋಟಿ ವಾನರರ ಜೊತೆಗೂಡಿ ರಾಕ್ಷಸರರನ್ನು ಸಂಹರಿಸಲೆಂದೇ ಇಲ್ಲಿಗೆ ಬರುತ್ತಾನೆ. ಮಹಾ ಬಲಿಷ್ಠರು ಪರಾಕ್ರಮಿಗಳು ಶಕ್ತಿಶಾಲಿಗಳೂ ಸಂಪನ್ನರೂ ಆಗಿರುವ ಈ ವಾನರರು ಮನೋಗತಿಯಿಂದಲೇ ಒಂದೇ ನೆಗೆತಕ್ಕೆ ಎಲ್ಲಿಗೆ ಬೇಕಾದರೂ ಹಾರಬಲ್ಲರು. ರಾಜನ ಎಲ್ಲಾ ಆಜ್ಞೆಗಳನ್ನು ಸರ್ವಕಾಲವೂ ಶಿರಸಾವಹಿಸು ಪಾಲಿಸುವ ಇವರಿಗೆ, ಭೂಮಿಯಲ್ಲಾಗಲಿ ಅಥವಾ ಆಕಾಶದಲ್ಲಾಗಲಿ ಯಾವ ಅಡೆತಡೆಗಳೂ ಇಲ್ಲ. ಮಹಾನ್ ತೇಜೋಮಯಿಗಳಾದ ಇವರು ಯಾವುದೇ ಕಠಿಣ ಕಾರ್ಯವನ್ನಾದರೂ ಅತಿ ಸುಲಭದಲ್ಲಿ ನೆರವೇರಿಸುವರು. ಸುಗ್ರೀವನ ಬಳಿ ಇರುವ ವಾನರರು ನನಗಿಂತ ಶಕ್ತಿವಂತರು, ನಾನೇ ಈ ಮಹಾಸಾಗರವನ್ನು ಜಿಗಿದು ಬಂದಿರುವಾಗ ಮಹಾಬಲಶಾಲಿಗಳ ಕುರಿತು ಹೆಚ್ಚೇನು ಹೇಳುವುದು. ಎಲೈ ಜಾನಕಿ ಇನ್ನು ನಿನಗೆ ಭಯ ಬೇಡ ,ನಿನ್ನ ಶೋಕವು ಈ ಕ್ಷಣದಿಂದಲೇ ಇಲ್ಲವಾಗುವುದು. ವಾನರ ಯೋಧರು ಒಂದೇ ನೆಗೆತಕ್ಕೆ ಹಾರಿ ಬರುವರು. ಪುರುಷಶ್ರೇಷ್ಠರು ಮಹಾ ಸತ್ಯಶಾಲಿಗಳೂ ಆದ ಶ್ರೀ ರಾಮ ಲಕ್ಷ್ಮಣರು ನನ್ನ ಬೆನ್ನ ಮೇಲೆ ಅಧಿಷ್ಟಿತರಾಗಿ ಉದಯಿಸಿದ ಸೂರ್ಯ ಚಂದ್ರರಂತೆ ನಿನ್ನ ಸನ್ನಿಧಿಗೆ ಬುರುವರು. ರಘುವಂಶಕ್ಕೆ ಆನಂದದಾಯಕನಾದ ರಾಘವನು ರಾವಣನನ್ನು ಸಂಹರಿಸಿ ಸಪರಿವಾರ ಸಹಿತನಾಗಿ ನಿನ್ನನ್ನು ಅಯ್ಯೋದ್ಯೆಗೆ ಕರೆದೊಯ್ಯುವನು. ಶ್ರೀ ರಾಮನ ಕೈಯಿಂದ ರಾವಣನ ಸಂಹಾರವಾಗುವುದನ್ನು ನೀನು ಇನ್ನು ಕೆಲವೇ ದಿನಗಳಲ್ಲಿ ನೋಡಲಿರುವೆ. ದೇವಿ ಒಳ್ಳೆಯ ಕಾಲವು ಬರಲಿದೆ ಸಮಾಧಾನವಿರಲಿ ನಿನಗೆ ಮಂಗಳವಾಗಲಿದೆ. ವಾಯುಸುತ ಮಾರುತಿಯು ಈ ಪರಿಯಾಗಿ ವಾನರ ವೀರರ ಪರಾಕ್ರಮವನ್ನು ವಿವರಿಸಿ ವೈದೇಹಿಯನ್ನು ಸಮಾಧಾನಗೊಳಿಸಿದನು.

|| ಓಂ ಆಂಜನೇಯಾಯ ನಮಃ ||