ಗುರುವಾಣಿ 43 : ಸುಂದರಕಾಂಡ ಅಧ್ಯಾಯ 38

ಸೀತಾಮಾತೆಹನುಮಂತನಿಗೆಚೂಡಾಮಣಿಯನ್ನುನೀಡಿದ್ದು

|| ಓಂ ಆಂಜನೇಯಾಯ ನಮಃ ||

 

ವಾಕ್ ವಿಶಾರದನಾದ ಹನುಮಂತನು ಸೀತಾದೇವಿ ತನ್ನೊಡನೆ ಸಮುದ್ರವನ್ನು ದಾಟಲು ಅಸಮ್ಮತಿ ತೋರಿದ್ದು ಯುಕ್ತವು ಹಾಗೂ ಸಂಯೋಚಿತವಾದದ್ದು ಎಂದು ಒಪ್ಪಿ, ಸೀತಾಮಾತೆಗೆ ಇಂತೆಂದನು, ವಿನಯ ಸಂಪನ್ನಳೆ ರಾಮನ ಶರೀರವನ್ನಲ್ಲದೆ ಬೇರೆಯವರ ಶರೀರವನ್ನು ನಾನು ಮುಟ್ಟುವುದೇ ಇಲ್ಲ ಎನ್ನುವ ನಿನ್ನ ತೀರ್ಮಾನ ಧರ್ಮಯುಕ್ತವಾಗಿದೆ. ನನ್ನ ಬೆನ್ನ ಮೇಲೆ ಕುಳಿತು ನೂರು ಯೋಜನೆ ವಿಸ್ತಾರದ ಮಹಾಸಾಗರವನ್ನು ದಾಟುವುದು ಸ್ತ್ರೀ ಸಹಜವಾದ ಭಯ ಸ್ವಭಾವದಿಂದ ಶಕ್ಯವಾಗಲಾರದು. ನೀನು ನುಡಿದ ಪ್ರತಿಯೊಂದು ಮಾತನ್ನೂ ಶ್ರೀ ರಾಮ ಚಂದ್ರನಿಗೆ ವಿಶ್ವಾಸ ಹುಟ್ಟುವಂತೆ ನಾನು ವಿವರವಾಗಿ ಹೇಳುತ್ತೇನೆ. ಈ ಲಂಕೆಯನ್ನು ಪ್ರವೇಶಿಸುವುದು ಸಾಮಾನ್ಯರಿಗೆ    ಸಾಧ್ಯವಾಗದ ಮಾತಾದ್ದರಿಂದ ಮತ್ತು ನೀನು ಪಡುತ್ತಿರುವ ಕಷ್ಟಗಳನ್ನು ನೋಡಿ ನನ್ನ ಬೆನ್ನ ಮೇಲೆ ಕುಳಿತು ಶ್ರೀ ರಾಮಚಂದ್ರನ ಬಳಿಗೆ ಬರುವಂತೆ ನಿನಗೆ ಹೇಳಿದೆನು. ಹೀಗೆ ಹೇಳಲು ಮತ್ತೊಂದು ಕಾರಣವೆಂದರೆ ಶ್ರೀ ರಾಮನಲ್ಲಿರುವ ಅಪಾರವಾದ ಸ್ನೇಹ, ಗೌರವ ಮತ್ತು ಭಕ್ತಿ. ನನ್ನ ಸಂಗಡ ಬರಲು ಸಮ್ಮತಿ ಇಲ್ಲದಿದ್ದರೆ ಶ್ರೀ ರಾಮನು ಗುರುತಿಸಬಹುದಾದ ಮತ್ತು ನಿನ್ನ ನೆನಪನ್ನುಂಟು ಮಾಡುವ ಯಾವುದಾದರು ಒಂದು ನಿಜವಾಗಿಯೂ ಘಟಿಸಿದ ಸನ್ನಿವೇಶವನ್ನು ಹೇಳೆಂದನು. ಅದಕ್ಕೆ ದೇವ ಕನ್ಯೆಯಂತಿದ್ದ ಸೀತಾದೇವಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದಳು. ಸ್ವಲ್ಪ ಸಮಯದ ನಂತರ ತನ್ನನ್ನು ತಾನೇ ಸಂತೈಸಿಕೊಂಡು, ಚಿತ್ರಕೂಟ ಪರ್ವತದಲ್ಲಿ ವಾಸ ಮಾಡುತಿದ್ದಾಗ ಜರುಗಿದ ಘಟನೆಯನ್ನು ಹನುಮಂತನಿಗೆ ವಿವರಿಸಿದಳು. ಆ ಘಟನೆ ಮಾಂಸ ಭಕ್ಷಿಸುವ ಆಸೆಯಿಂದ ಕಾಗೆಯೊಂದು ಸೀತಾದೇವಿಯನ್ನು ಕುಕ್ಕಿ ಕುಕ್ಕಿ ಭಾದಿಸಿದ್ದು, ನಂತರ ಆ ಕಾಗೆಯ ಮೇಲೆ ಶ್ರೀ ರಾಮನು ಕೋಪಗೊಂಡು ದಬ್ಬೆಯ ಬ್ರಹ್ಮಾಸ್ತ್ರವನ್ನು ಉಪಯೋಗಿಸಿದ್ದ ಸನ್ನಿವೇಶವಾಗಿತ್ತು. ಹಾಗೆಯೇ ಮುಂದುವರೆದ ಸೀತಾದೇವಿ ಪಾತಾಳದಲ್ಲಿದ್ದ ಇಂದ್ರನ ಐಶ್ವರ್ಯವನ್ನು ನಾರಾಯಣನು ಕಾಪಾಡಿದಂತೆ, ನನ್ನನ್ನು ರಕ್ಷಿಸಲು ನೀನೆ ಸಮರ್ಥನೆಂದು ಹೇಳುತ್ತಾ ತನ್ನ ಸೀರೆಯ ಸೆರಗಿನಲ್ಲಿ ಕಟ್ಟಿದ್ದ ಶುಭಪ್ರದವಾದ ಮತ್ತು ದಿವ್ಯವಾದ ಚೂಡಮಣಿಯನ್ನು ಹೊರ ತೆಗೆದು ಶ್ರೀ ರಾಮನಿಗೆ ಇದನ್ನು ಅರ್ಪಿಸು ಅಂತ ಹೇಳುತ್ತಾ ಆಂಜನೇಯನಿಗೆ ಕೊಟ್ಟಳು. ವೀರನಾದ ಹನುಮಂತನು ಚೂಡಮಣಿಯನ್ನು ಸ್ವೀಕರಿಸಿ ಸೀತಾದೇವಿಗೆ ಪ್ರದಕ್ಷಿಣೆ ಮಾಡಿ, ಆಕೆಗೆ ನಮಸ್ಕರಿಸಿ ಸ್ವಸ್ಥ ಚಿತ್ತನಾಗಿ ಹಿಂದಿರುಗಲು ಸನ್ನದ್ಧನಾಗುತ್ತಾನೆ.

|| ಓಂ ಆಂಜನೇಯಾಯ ನಮಃ ||