ಗುರುವಾಣಿ 42 : ಸುಂದರಕಾಂಡ ಅಧ್ಯಾಯ 37

ಹನುಮಂತತನ್ನೊಡನೆಸಮುದ್ರವನ್ನುಹಾರಲುಸೀತಾದೇವಿಯನ್ನುವಿನಂತಿಸಿದ್ದು

|| ಓಂ ಆಂಜನೇಯಾಯ ನಮಃ ||

 

ಸರ್ವಶಕ್ತಿ ಸಂಪನ್ನನು ವಾಯುಸುತನೂ ಆದ ಹನುಮಂತನು ಸೀತಾದೇವಿಯಲ್ಲಿ ವಿಶ್ವಾಸ ತುಂಬಲು ರಾಮ ನಾಮಾಂಕಿತವಾದ ದಿವ್ಯ ಉಂಗುರವನ್ನು ನೀಡಿದನೆಂದು ಹಿಂದಿನ ಗುರುವಾಣಿಯಲ್ಲಿ ನಾವೆಲ್ಲರೂ ಕೇಳಿದ್ದೇವೆ. ಶ್ರೀ ರಾಮನ ಗುಣ ಸಂಕೀರ್ತನ, ಶ್ರಾವ್ಯದ ಪ್ರಭಾವ ಹಾಗೂ ಮೃದು ಮದುರ ವಾಣಿಯಿಂದ ಹನುಮಂತನ ಬಗ್ಗೆ ಸಂಪೂರ್ಣ ವಿಶ್ವಾಸವುಂಟಾಗಿ ಶ್ರೀ ರಾಮನ ಗುಣಗಾನ ಮಾಡಿದರು. ಸಮುದ್ರದಲ್ಲಿ ನೌಕೆಯು ಭಗ್ನವಾಗಿ ನೀರಿಗೆ ಬಿದ್ದ ಮನುಷ್ಯ ಆಯಾಸಗೊಂಡು ಈಜುತ್ತಾ ದಡ ಸೇರುವಂತೆ, ಶ್ರೀ ರಾಮನು ಶೋಕ ಸಾಗರವೆಂಬ ಮಹಾ ಸಮುದ್ರದಲ್ಲಿ ಈಜಿ ಎಂದು ದಡ ಸೇರುವನು. ನನ್ನ ಪ್ರಭುವು ರಾಕ್ಷಸರನ್ನೆಲ್ಲ ಸಂಹರಿಸಿ ಲಂಕೆಯನ್ನು ದ್ವಂಸ ಮಾಡಿ ರಾವಣನನ್ನು ವಿನಾಶಗೊಳಿಸಿ ನನಗೆಂದು ಮುಕ್ತಿ ಕೊಡುವನು. ಎಲೈ ಕಪೀಶ್ವರ, ಶ್ರೀ ರಾಮನಲ್ಲಿ ಅನೇಕ ಕಲ್ಯಾಣ ಗುಣಗಳಿವೆ. ಉತ್ಸಾಹ, ದಯೆ, ಸತ್ವ, ಪರಾಕ್ರಮ ಮತ್ತು ಪ್ರಭಾವಗಳು ಶ್ರೀ ರಾಮನಲ್ಲಿ ಭದ್ರವಾಗಿ ನೆಲೆಸಿವೆ. ಸೂರ್ಯನು ತನ್ನ ತೀಕ್ಷ್ಣವಾದ ಕಿರಣಗಳಿಂದ ನೀರನ್ನು ಸಂಪೂರ್ಣವಾಗಿ ಹಿಂಗಿಸಿಬಿಡುವಂತೆ ಶೂರನಾದ ರಾಮನು ತನ್ನ ಬಾಣ ಪರಂಪರೆಯಿಂದ ರಾಕ್ಷಸ ಸಮೂಹವನ್ನು ನುಚ್ಚು ನೂರಾಗಿಸ ಬಲ್ಲವನು. ಜಾನಕಿಗೆ ರಾಮನ ಬಲದ ಬಗ್ಗೆ ಆತ್ಮವಿಶ್ವಾಸ ಇದ್ದರೂ ಸಹ ಆಕೆಯ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಇದೆಲ್ಲವನ್ನೂ ಕೇಳಿದ ವಾನರವೀರನು ಅತಿ ಸಂಯಮದಿಂದ ಸೀತಾದೇವಿಯನ್ನು ಈ ರೀತಿಯಾಗಿ ಸಂತೈಸತೊಡಗಿದನು. ‘ನಿನ್ನನ್ನು ಈಗಲೇ ಬಂಧಮುಕ್ತಳಾಗುವಂತೆ ಮಾಡುತ್ತೇನೆ, ನನ್ನ ಬೆನ್ನಿನ ಮೇಲೆ ಕುಳಿತುಕೋ, ಮಹಾ ಸಾಗರವನ್ನು ದಾಟಿಸುವೆನು, ನಿನ್ನನ್ನೇ ಏಕೆ, ರಾವಣನ ಸಹಿತವಾಗಿ ಲಂಕೆಯನ್ನೇ ಎತ್ತಿಕೊಂಡು ಹೋಗುವ ಶಕ್ತಿ ನನಗಿದೆ. ನನ್ನ ಮಾತನ್ನು ಉಪೇಕ್ಷಿಸಬೇಡ. ರೋಹಿಣಿಯು ಚಂದ್ರನೊಡನೆ ಸೇರುವಂತೆ ನೀನು ಶ್ರೀ ರಾಮನನ್ನು ಸೇರುವೆ. ನನ್ನ ಬೆನ್ನ ಮೇಲೆ ಕುಳಿತುಕೊಂಡು ಸೂರ್ಯ ಚಂದ್ರರರೊಡನೆ ಸಂಭಾಷಿಸುತ್ತ ಮಹಾ ಸಮುದ್ರವನ್ನು ದಾಟಿಬಿಡು ಎಂದು ಹೇಳಿದನು. ಸೀತಾ ದೇವಿಯು ಕಪಿವರ್ಯನ ಪರಾಮಾದ್ಭುತ ಮಾತುಗಳನ್ನು ಕೇಳಿ ಆನಂದಾಶ್ಚರ್ಯದಿಂದ ಹನುಮಂತನಿಗೆ ಹೀಗೆಂದಳು, ‘ಎಲೈ ವಾನರವೀರನೇ, ನಿನ್ನ ಬಲ ಪರಾಕ್ರಮಗಳನ್ನು, ವಾಯು ವೇಗವನ್ನು, ನಿನ್ನ ತೇಜಸ್ಸನ್ನು ನಾನು ಅರಿತಿರುವೆನು. ಮಹಾಸಾಗರವನ್ನು ದಾಟಲು ನೀನಲ್ಲದೆ ಬೇರೆ ಯಾವ ಸಾಮಾನ್ಯನಿಗೂ ಅಸಾಧ್ಯವಾದ ಮಾತು. ನನ್ನನ್ನು ಎತ್ತಿಕೊಂಡು ಮಹಾ ಸಾಗರವನ್ನು ಹಾರುವ ಅದ್ಬುತ ಶಕ್ತಿ ನಿನ್ನಲ್ಲಿದೆ ಎಂಬ ಅರಿವು ನನಗಿದೆ. ಆದರೆ ಕಪಿಶ್ರೇಷ್ಠನೆ, ನಾನು ನಿನ್ನೊಡನೆ ಪಯಣಿಸುವುದು ಯುಕ್ತವಲ್ಲವೆಂದೆ ಭಾವಿಸುತ್ತೇನೆ. ಏಕೆಂದರೆ ಸಮುದ್ರದ ಮೇಲೆ ಅಷ್ಟೊಂದು ಎತ್ತರದಲ್ಲಿ ಅಷ್ಟು ವೇಗವಾಗಿ ಆಕಾಶ ಮಾರ್ಗದಲ್ಲಿ ಹೋಗುವಾಗ ಭಯದಿಂದ ನಾನು ನಿನ್ನ ಬೆನ್ನ ಮೇಲಿಂದ ಕೆಳಗೆ ಬೀಳಬಹುದು. ನೀನು ನನ್ನನ್ನು ಎತ್ತಿಕೊಂಡು ಹೋಗುವಾಗ ರಾವಣನಿಯೋಜಿತ ರಾಕ್ಷಸರು ನಿನ್ನನ್ನು ಬೆನ್ನಟ್ಟಿ ನನಗೆ ಬಂದಿರುವ ಸಂಕಷ್ಟವನ್ನು ನಿನಗೂ ತರಬಹುದು. ಒಂದು ವೇಳೆ ನೀನು ಎಲ್ಲಾ ರಾಕ್ಷಸರನ್ನು ಸಂಹರಿಸಿ ನನ್ನನ್ನು ಕೊಂಡು ಹೋದರೆ ರಾಘವನ ಕೀರ್ತಿಗೆ ಕಳಂಕ ಬರುತ್ತದೆ. ವಾನರ ಶ್ರೇಷ್ಠನೇ ನಿನ್ನೊಡನೆ ಬರದಿರಲು ಇನ್ನೊಂದು ಕಾರಣವೆಂದರೆ ನನ್ನ ಪತಿಯ ಹೊರತಾಗಿ ಬೇರೆ ಯಾರ ಪುರುಷರ ಶರೀರವನ್ನು ನಾನಾಗಿಯೇ ಪ್ರಾಣವಿರುವ ತನಕ ಸ್ಪರ್ಶಿಸುವುದಿಲ್ಲ. ಆದ್ದರಿಂದ ಶ್ರೀ ರಾಮನೇ ಇಲ್ಲಿಗೆ ಬಂದು ರಾಕ್ಷಸರ ಸಹಿತ ರಾವಣನನ್ನು ಸಂಹರಿಸಿ ನನನ್ನು ಕರೆದುಕೊಂಡು ಹೋದರೆ, ಅದು ಅವರ ಶೌರ್ಯ, ಪರಾಕ್ರಮವನ್ನು ತೋರಿಸುತ್ತದೆ. ಕಪಿಶ್ರೇಷ್ಠನೇ, ಲಕ್ಷ್ಮಣ ಹಾಗೂ ವಾನರ ಸಮೂಹವನ್ನು ಒಡಗೂಡಿರುವ ನನ್ನ ಸ್ವಾಮಿಯನ್ನು ಬೇಗನೆ ಇಲ್ಲಿಗೆ ಕರೆದುಕೊಂಡು ಬಾ ಎಂದು ಆ ಜಾನಕಿ ಕಪೀಶ್ವರನಲ್ಲಿ ವಿನಂತಿಸಿದಳು

|| ಓಂ ಆಂಜನೇಯಾಯ ನಮಃ ||