ಗುರುವಾಣಿ 41 : ಸುಂದರಕಾಂಡ ಅಧ್ಯಾಯ 36

ವಾನರವೀರಸೀತಾದೇವಿಗೆಉಂಗುರನೀಡಿದ್ದು

|| ಓಂ ಆಂಜನೇಯಾಯ ನಮಃ ||

 

ಮಹಾತೇಜಸ್ವಿಯು, ವಾಯುಸುತನೂ ಆದ ಹನುಮಂತನು ಸೀತಾದೇವಿಗೆ ಇನ್ನೂ ಹೆಚ್ಚಿನ ವಿಶ್ವಾಸ ಹುಟ್ಟುವಂತೆ ಮಾಡಲು ವಿನಯಪೂರ್ವಕವಾದ ಮಾತುಗಳನ್ನು ಪುನಃ ಹೇಳತೊಡಗಿದ. ಎಲೈ ಜಾನಕಿಯೇ, ವಾನರನಾದ ನಾನು ಧೀಮಂತನಾದ ಶ್ರೀ ರಾಮನ ದೂತನಾಗಿದ್ದೇನೆ, ರಾಮ ನಾಮಾಂಕಿತವಾದ ದಿವ್ಯ ಉಂಗುರವನ್ನು ನಿನಗೆ ನಂಬಿಕೆ ಹುಟ್ಟಿಸುವ ಸಲುವಾಗಿಯೇ ತಂದಿರುವೆನು ಎಂದು ಹೇಳಿ ಆ ದಿವ್ಯ ಉಂಗುರವನ್ನು ವಾನರ ವೀರ ಸೀತಾದೇವಿಗೆ ಅರ್ಪಿಸುತ್ತಾನೆ. ಜಾನಕಿಯು ಉಂಗುರವನ್ನು ನೋಡಿ ಅನಂದಭರಿತಳಾಗುತ್ತಾಳೆ. ಆಕೆಯ ಮುಖಾರವಿಂದವು ರಾಹುವಿನಿಂದ (ಬಿಡುಗಡೆ ಹೊಂದಿದ)/ಮುಕ್ತವಾದ ಚಂದ್ರನಂತೆ ಹರ್ಷದಿಂದ ಕಂಗೊಳಿಸುತ್ತದೆ. ಸೀತಾದೇವಿಯು ತನ್ನ ಪತಿಯ ಸಂದೇಶ ದೊರಕಿದ/ಪ್ರಾಪ್ತಿಯಿಂದ ಸಂತೋಷದಲ್ಲಿ ಮುಳುಗಿಹೋಗುತ್ತಾಳೆ. ಹರ್ಷಭರಿತಳಾದ ಆಕೆ ಮಹಾ ಕಪಿಯನ್ನು ಪ್ರಶಂಶೆ ಮಾಡುತ್ತಾ ಪ್ರಿಯ ವಚನಗಳನ್ನು ನುಡಿಯುತ್ತಾಳೆ. ‘ಎಲೈ ವಾನರ ಶ್ರೇಷ್ಠನೆ, ನಿಜವಾಗಿಯೂ ನೀನು ಮಹಾ ಪರಾಕ್ರಮಿ ಹಾಗು ಸಮರ್ಥನು. ದೇಶ ಮತ್ತು ಕಾಲೋಚಿತವಾಗಿ ಕಾರ್ಯ ಮಾಡುವುದರಲ್ಲಿ ಕುಶಲನು. ನೂರು ಯೋಜನಾ ವಿಸ್ತಾರವಾದ ಸಮುದ್ರವನ್ನು ಸುಲಭವಾಗಿ ದಾಟಿ ಬಂದಿರುವೆ ನೀನು ಸಾಮಾನ್ಯ ವಾನರನೆಂದು ನಾನು ಭಾವಿಸುವುದಿಲ್ಲ. ಶ್ರೀ ರಾಮನ ದೂತನಾಗಿ ನನ್ನಲ್ಲಿ ಬಂದಿರುವೆ ಎಂದರೆ ಇದು ನಿನ್ನ ಪರಾಕ್ರಮವನ್ನು ತೋರಿಸುತ್ತದೆ. ರಾಮ ನಾಮಾಂಕಿತ ಉಂಗುರ ಮತ್ತು ವಾನರ ವೀರನ ಪರಾಕ್ರಮವನ್ನು ಕಂಡ ಸೀತಾದೇವಿಗೆ ಅತಿ ಹೆಚ್ಚಿನ ವಿಶ್ವಾಸ ಉಂಟಾಯಿತು. ಅತ್ಯಂತ ಸಂತೋಷಗೊಂಡ ವೈದೇಹಿ ರಾಮ ಲಕ್ಷ್ಮಣರ ಕುಶಲವನ್ನು ವಿಚಾರಿಸಿದಳು. ಹೀಗೆ ಸೀತಾದೇವಿಯು ವಾನರೇಂದ್ರನಾದ ಹನುಮಂತನಿಗೆ ಮಹತ್ ಅರ್ಥದಿಂದ ಕೂಡಿದ ಮಾತುಗಳನ್ನು ಹೇಳಿ ಹನುಮಂತನ ಮಾತುಗಳಿಗಾಗಿ ಕಾಯತೊಡಗಿದಳು. ಜಾನಕಿ ದೇವಿ ಹೇಳಿದ ಮೃದು, ಮಧುರ ವಚನಗಳನ್ನು ಕೇಳಿ ಮಾರುತಿಯು ಆಕೆಯನ್ನು ಉದ್ದೇಶಿಸಿ ಹೀಗೆಂದನುಎಲೈ ಕಮಲಲೋಚನೆಯೇ, ನೀನು ಲಂಕೆಯಲ್ಲಿರುವ ಸಂಗತಿ ರಾಮನಿಗೆ ಖಂಡಿತವಾಗಿಯೂ ತಿಳಿಯದು. ವಿಷಯ ಶ್ರೀ ರಾಮನಿಗೆ ತಿಳಿದಿದ್ದರೆ ಮಹಾ ಸಮುದ್ರವನ್ನು ಬಾಣಗಳ ಸಮೂಹದಿಂದ ಸ್ತಂಭನಗೊಳಿಸಿ, ಎಲ್ಲಾ ರಾಕ್ಷಸರನ್ನು ಭಸ್ಮ ಮಾಡಿ, ಲಂಕಾಧೀಶ ರಾವಣನನ್ನು ಕೊಂದು ನಿನ್ನನ್ನು ಬಂಧನದಿಂದ ಮುಕ್ತಿಗೊಳಿಸುತ್ತಿದ್ದ. ಆರ್ಯೆ, ಈಗ ತಾನೇ ಉದಿಸಿರುವ ಹುಣ್ಣಿಮೆಯ ಚಂದ್ರನಂತೆ ಆಹ್ಲಾದಕರವಾದ ಶ್ರೀ ರಾಮನ ಮುಖವನ್ನು ನೀನು ಶೀಘ್ರದಲ್ಲಿಯೇ ನೋಡುವೆ, ಶ್ರೀ ರಾಮನು ನಿನ್ನನ್ನು ಬಿಟ್ಟು ಬೇರೆ ಏನನ್ನೂ ಯೋಚಿಸುವುದಿಲ್ಲ. ಅವನು ಕಠಿಣವಾದ ನಿಯಮಗಳನ್ನು ಆಚರಿಸುತ್ತಾ ನಿನ್ನನ್ನು ಪಡೆಯಲು ಪ್ರಯತ್ನಿಸುತ್ತಿದ್ದಾನೆ. ಶ್ರೀ ರಾಮನ ಗುಣ ಸಂಕೀರ್ತನ,    ಶ್ರವಣ ಮತ್ತು ದಿವ್ಯ ಹೊಗರದಿಂದ ವೈದೇಹಿಯ ಶೋಕ ತೊಲಗಿ ಹೋಯಿತು.

|| ಓಂ ಆಂಜನೇಯಾಯ ನಮಃ ||