ಗುರುವಾಣಿ 39 : ಸುಂದರಕಾಂಡ ಅಧ್ಯಾಯ 34

ಹನುಮಂತನಿಂದರಾಮನಗುಣಗಾನ- ಮುಂದುವರೆದಭಾಗ

|| ಓಂ ಆಂಜನೇಯಾಯ ನಮಃ ||

 

ಸೀತಾದೇವಿ ತನ್ನ ವೃತ್ತಾಂತವನ್ನು ಹನುಮಂತನಿಗೆ ಹೇಳಿದ ನಂತರ ಅವಳ ವಿಶ್ವಾಸವನ್ನು ಗಳಿಸಲು ವಾನರವೀರ ಒಂದು ಹೆಜ್ಜೆ ಮುಂದೆ ಹೋಗಿ ಶ್ರೀರಾಮನ ಗುಣಗಾನವನ್ನು ಮಾಡಿದನು

ಓ ಜಾನಕಿ, ನಾನು ಸತ್ಯವಾಗಿಯೂ ಶ್ರೀರಾಮನ ದೂತ. ಆ ಸ್ವಾಮಿಯ ಸಂದೇಶದೊಂದಿಗೆ ನಾನು ಇಲ್ಲಿಗೆ ಬಂದಿರುವೆನು. ದಶರಥ ಕುಮಾರನಾದ ಶ್ರೀರಾಮನು ಸರ್ವವೇದಾ ಪಾರಂಗತನು ಹಾಗೂ ವಿವಿಧ ಅಸ್ತ್ರಗಳ ಪ್ರಯೋಗಗಳನ್ನು ತಿಳಿದಿರುವವನು. ಶ್ರೀರಾಮನಿಗೆ ಪ್ರಿಯನು, ಅನುಚರನು ಹಾಗೂ ಮಹಾತೇಜಶಾಲಿಯಾದ ಲಕ್ಷ್ಮಣನು ಕೂಡ ನಿನ್ನ ಕ್ಷೇಮಸಮಚಾರವನ್ನು ಕೇಳಿರುವನು.ರಾಮಲಕ್ಷ್ಮಣರು ಕುಶಲವಾಗಿದ್ದಾರೆಂಬ ವಾರ್ತೆ ಕೇಳಿ ಸೀತೆ ಹರ್ಷಗೊಂಡಳು. ಶ್ರೀರಾಮನ ದೂತನಾಗಿ ಬಂದಿರುವ ಹನುಮಂತನ ಮೇಲೆ ಸೀತಾದೇವಿಗೆ ಪೂರ್ಣ ವಿಶ್ವಾಸ ಉಂಟಾದರೂ ಸಹ, ರಾವಣನೇ ವಾನರ ವೇಷ ಧರಿಸಿ ಬಂದಿರಬಹುದೆಂಬ ಒಂದು ಚಿಕ್ಕ ಸಂದೇಹ ಉಂಟಾಯಿತು. ಆಗ ಸೀತೆ ಕ್ಷಣಕಾಲ ಯೋಚಿಸಿ ಇಲ್ಲಿಯ ತನಕ ತಾನು ಕಂಡಿದ್ದು ಸ್ವಪ್ನವಲ್ಲ ತಾನು ಕೇಳಿದ್ದೆಲ್ಲವು ಸತ್ಯ ಎನಿಸಿ ಅದರ ಪರಿಣಾಮದ ಬಗ್ಗೆ ಕೂಲಂಕಷವಾಗಿ ಆಲೋಚಿಸಿ ಹನುಮಂತನ ಬಳಿ ಯಾವ ಮಾತನ್ನೂ ಆಡದೆ ಮೌನವಾದಳು. ಅವಳ ಮನೋಭಾವವನ್ನು ತಿಳಿದ ವಾಯುಸುತನಾದ ಹನುಮಂತ ಸೀತೆಗೆ ಸಂತಸ ತರುವ ಶ್ರೀರಾಮನ ಗುಣಗಾನವನ್ನು ಮುಂದುವರಿಸಿದನು. ಶ್ರೀರಾಮನು ಸೂರ್ಯನಂತೆ ಮಹಾತೇಜಸ್ವಿಯಾಗಿದ್ದು, ರಾಜಾಧಿರಾಜನಾದ ಕುಬೇರನಂತೆ ಸಕಲ ಲೋಕಗಳಿಗೂ ರಾಜನಾಗಿದ್ದಾನೆ .ಸತ್ಯವಾದಿಯು, ರೂಪಸಂಪನ್ನನು, ಸಮಯವನ್ನರಿತು ಶತ್ರುಗಳನ್ನು ಸಂಹರಿಸುವವನು, ಲೋಕದಲ್ಲಿ ಸರ್ವ ಶ್ರೇಷ್ಠನಾದ ಮಹಾರಥನು, ದೇವಗುರು ಬೃಹಸ್ಪತಿಯಂತೆ ಮಧುರವಾಗಿ ಮಾತನಾಡುವವನು ಆಗಿರುತ್ತಾನೆ.

ಓ ದೇವಿ,ವಾನರನಾದ ಸುಗ್ರೀವ ಹಾಗೂ ದಶರಥಕುಮಾರ ಶ್ರೀ ರಾಮನ ನಡುವೆ ಅಮೋಘವಾದ ಗೆಳೆತನವಿದೆ..

ಎಲೈವೈದೇಹಿಯೆ, ಶ್ರೀರಾಮಚಂದ್ರಪ್ರಭು,ಲಕ್ಷ್ಮಣ,ಸುಗ್ರೀವ ಈ ಎಲ್ಲರೂ ಪ್ರತಿ ಕ್ಷಣವೂ ನಿನ್ನನ್ನು ಸ್ಮರಿಸುತ್ತಿದಾರೆ. ನೀನು ಶೀಘ್ರವೇ ಮಹಾಬಲಶಾಲಿಗಳಾದ ಶ್ರೀರಾಮ ಲಕ್ಷ್ಮಣರನ್ನು ಕಾಣುವೆ. ಸುಗ್ರೀವನ ಮಂತ್ರಿ ಹನುಮಂತ ಎಂಬ ನಾಮಧೇಯದ ವಾನರನಾದ ನಾನು ಮಹಾಸಮುದ್ರವನ್ನು ಲಂಘಿಸಿ ಈ ಲಂಕಾನಗರವನ್ನು ಪ್ರವೇಶಿಸಿದ್ದೇನೆ. ದುರಾತ್ಮನಾದ ರಾವಣನನ್ನು ಮೆಟ್ಟಿ ನಿನ್ನನ್ನು ಈ ಬಂಧನದಿಂದ ಮುಕ್ತಗೊಳಿಸುವುದೇ ನನ್ನ ಪರಮ ಉದ್ದೇಶ. .ಹೀಗೆ ವಾನರವೀರ ಶ್ರೀರಾಮನ ಗುಣಗಾನದೊಂದಿಗೆ ತಾನು ಬಂದ ಉದ್ದೇಶವನ್ನು ಸೀತಾಮಾತೆಗೆ ಮನವರಿಕೆ ಮಾಡುತ್ತಾನೆ.

|| ಓಂ ಆಂಜನೇಯಾಯ ನಮಃ ||