ಗುರುವಾಣಿ 37 : ಸುಂದರಕಾಂಡ ಅಧ್ಯಾಯ 31 ಹನುಮಂತ ಹೇಳಿದರಾಮಕಥೆ

ಗುರುವಾಣಿ 37 : ಸುಂದರಕಾಂಡ ಅಧ್ಯಾಯ 31 ಹನುಮಂತ ಹೇಳಿದರಾಮಕಥೆ

|| ಓಂ ಆಂಜನೇಯಾಯ ನಮಃ ||

 

ಸೀತಾದೇವಿಯನ್ನು ಮಾತನಾಡಿಸುವ ವಿವೇಚನೆಯಲ್ಲಿದ್ದ/ಆಲೋಚನೆಯಲ್ಲಿದ್ದ ವಾನರವೀರನು ಆಕೆಯ ಪೂರ್ಣ ವಿಶ್ವಾಸವನ್ನು ಗಳಿಸುವುದು ಹೇಗೆ ಎಂದು ಹಲವಾರು ವಿಧದಲ್ಲಿ ಆಲೋಚಿಸಿ ಮಹಾಮತಿಯಾದ ಹನುಮಂತನು ಸೀತಾದೇವಿಗೆ ಕೇಳುವಂತೆ ಸುಮಧುರವಾಗಿ ಶ್ರೀ ರಾಮ ಕಥೆಯನ್ನು ಹೇಳಲು ಪ್ರಾರಂಭಿಸಿತ್ತಾನೆ. ಬನ್ನಿ ಗುರುವಾಣಿಯಲ್ಲಿ ಆಂಜನೇಯ ನಿರೂಪಿಸಿದ ಶ್ರೀ ರಾಮನ ಕಥೆಯನ್ನು ಕೇಳೋಣ. ಇಕ್ಷ್ವಾಕು ವಂಶದಲ್ಲಿ ದಶರಥನೆಂಬ ಪ್ರಸಿದ್ಧ ಹಾಗು ಪುಣ್ಯಾತ್ಮನೂ ಆದ ಒಬ್ಬ ರಾಜನಿದ್ದ. ಆತ ಮಹಾ ಕೀರ್ತಿಶಾಲಿಯಾಗಿದ್ದು, ಆತನಲ್ಲಿ ಆನೆಗಳು ಆಶ್ವಗಳು ಹಾಗೂ ದಿವ್ಯ ರಥಗಳು ಹೇರಳವಾಗಿ ಇದ್ದವು. ಆತ ತಪಸ್ಸಿನಲ್ಲಿ ಋಷಿಗಳಿಗೆ, ಬಲದಲ್ಲಿ ಇಂದ್ರನಿಗೆ ಸಮಾನನಾಗಿದ್ದನು. ಅಹಿಂಸಾ ನಿಯಮಗಳನ್ನು ಪಾಲಿಸುವ, ಉದಾರ ಸ್ವಭಾವದವನು, ದಯಾಳು, ಸತ್ಯಸಂಧನು, ಐಶ್ವರ್ಯವಂತನು ಮತ್ತು ದಕ್ಷನೂ ಆಗಿದ್ದ ಮಹಾರಾಜನಿಗೆ ಅತ್ಯಂತ ಪ್ರಿಯನಾದ ಶ್ರೀ ರಾಮನೆಂಬ ಚಂದ್ರನಂತೆ ಪ್ರಸನ್ನ ಸ್ವರೂಪನಾದ, ಧನುರ್ಧಾರಿಗಳಲ್ಲಿ ಅಗ್ರೇಸರನೂ ಆದ ಜೇಷ್ಟ ಪುತ್ರನಿದ್ದ. ಆತ ತಂದೆ ದಶರಥನ ಅಪ್ಪಣೆಯ ಮೇರೆಗೆ ತನ್ನ ಭಾರ್ಯೆಯಾದ ಸೀತಾದೇವಿ ಮತ್ತು ತಮ್ಮನಾದ ಲಕ್ಷ್ಮಣನೊಡನೆ ವನವಾಸಕ್ಕೆ ತೆರಳುತ್ತಾನೆ. ಮಹಾ ಅರಣ್ಯದಲ್ಲಿ ಶೂರರು, ಕಾಮರೂಪಿಗಳೂ ಆದ ಅನೇಕ ರಾಕ್ಷಸರನ್ನು ಸಂಹರಿಸುತ್ತಾನೆ.ರಾಕ್ಷಸರ ಸಂಹಾರದ ವಾರ್ತೆಯನ್ನು ಕೇಳಿದ ರಾಕ್ಷಸರ ಅಧಿಪತಿಯಾದ ರಾವಣನು ಮಾರೀಚನ ಸಹಾಯದಿಂದ, ಶ್ರೀ ರಾಮನನ್ನು ವಂಚಿಸಿ ಆತನ ಭಾರ್ಯೆಯಾದ ಜಾನಕಿಯನ್ನು ಅಪಹರಿಸುತ್ತಾನೆ. ಸೀತಾದೇವಿಯನ್ನು ಕಾಡಿನಲ್ಲಿ ಹುಡುಕುತ್ತಿರುವಾಗ ಶ್ರೀ ರಾಮನು ಸುಗ್ರೀವನೆಂಬ ವಾನರನ ಭೇಟಿಯಾಗಿ ಅವರು ಮಿತ್ರರಾಗುತ್ತಾರೆ. ಆನಂತರ ಶ್ರೀ ರಾಮ ವಾಲಿಯನ್ನು ಸಂಹರಿಸಿ ಮಹಾತ್ಮನಾದ ಸುಗ್ರೀವನಿಗೆ ಕಪಿರಾಜ್ಯವನ್ನು ವಹಿಸಿಕೊಡುತ್ತಾನೆ. ಸುಗ್ರೀವನ ಅಪ್ಪಣೆಯಂತೆ ಸಾವಿರಾರು ವಾನರರು ದಶದಿಕ್ಕುಗಳಲ್ಲಿ ಸೀತೆಗಾಗಿ ಹುಡುಕಾಟ ಮಾಡುತ್ತಾರೆ. ವಿಶಾಲಾಕ್ಷಿಯಾದ ಸೀತಾದೇವಿಯನ್ನು ಹುಡುಕುವ ಸಲುವಾಗಿ ನೂರು ಯೋಜನದಷ್ಟು ವಿಸ್ತಾರವಾದ ಸಮುದ್ರವನ್ನು ಹಾರಿದ ಮಾರುತಿಗೆ ಆಶೋಕವನದಲ್ಲಿ ಸೀತಾದೇವಿ ಕಾಣಿಸುತ್ತಾಳೆ. ಮೊದಲೇ ಶುಭ ಶಕುನಗಳನ್ನು ಕಂಡಿದ್ದ ಸೀತಾದೇವಿ ಸುಮಧುರವಾದ ಮಾತುಗಳನ್ನು ಕೇಳಿ ಅತ್ಯಂತ ವಿಸ್ಮಿತಳಾಗುತ್ತಾಳೆ(ಆಶ್ಚರ್ಯಚಕಿತಳಾಗುತ್ತಾಳೆ). ವೃಕ್ಷದಲ್ಲಿ ಅತಿ ಚಾಣಕ್ಷತನದಿಂದ ಅಡಗಿ ಕುಳಿತಿದ್ದ ಕಪಿರಾಜ, ಸುಗ್ರೀವ ಸಚಿವ ಹಾಗೂ ಬಾನಿನಲ್ಲಿ ಉದಯಿಸುವ ಹೊಳೆವ ಭಾನುವಿನಂತೆ ತೇಜೋಮಯನಾಗಿದ್ದ, ವಾಯುಪುತ್ರ ಹನುಮಂತ ಇದನ್ನು ನೋಡುತ್ತಾನೆ. ಕೇಸರಿಪುತ್ರನ ಮಾತುಗಳನ್ನು ಕೇಳಿ ಅತ್ಯಂತ ವಿಸ್ಮಿತಳಾದ ಜಾನಕಿ ಕ್ಷಣಕಾಲ ಯೋಚಿಸಿ, ಆ ವಾನರ ವೀರ ಶ್ರೀ ರಾಮನ ಸಂದೇಶವಾಹಕನೆಂದು ಖಚಿತಪಡಿಸಿಕೊಂಡ ನಂತರ. ತನ್ನ ವೃತ್ತಾಂತವನ್ನು ಹನುಮಂತನಿಗೆ ತಿಳಿಸುತ್ತಾಳೆ. ಸೀತಾ ದೇವಿ ಹೇಳಿದ ಆಕೆಯ ವೃತ್ತಾಂತವನ್ನು ನಾವೆಲ್ಲರೂ ಮುಂದಿನ ಗುರುವಾಣಿಯಲ್ಲಿ ಕೇಳೋಣ.

|| ಓಂ ಆಂಜನೇಯಾಯ ನಮಃ ||