ಆತ್ಮ ತೃಪ್ತಿಯೇ ಜೀವನದ ತೃಪ್ತಿ

ಆತ್ಮ ತೃಪ್ತಿಯೇ ಜೀವನದ ತೃಪ್ತಿ

 

ಆಂಗ್ಲ ಬಾಷೆಯಲ್ಲಿ “Human wants are unlimited but the resources are limited” ಎಂಬ ಒಂದು ಮಾತಿದೆ. ಅಂದರೆ ಮಾನವನ ಆಸೆ ಮಿತಿಯಿಲ್ಲದ್ದು, ಆದರೆ ಆ ಆಸೆಯನ್ನು ತೃಪ್ತಿ ಪಡೆಸುವ ಸಂಪತ್ತಿಗೆ ಮಿತಿಯಿದೆ. ಮನುಷ್ಯನ ಆಸೆಗಳಿಗೆ ಮಿತಿಯೇ ಇಲ್ಲ. ದೊಡ್ಡ ಕಾಡಿನ ನದಿಯ ದಡದಲ್ಲಿ ನವಿಲೊಂದು ವಾಸವಾಗಿತ್ತು. ಅದೇ ನದಿಯಲ್ಲಿ ಒಂದು ಪುಟ್ಟ ಮೀನು ಸಹ ಇತ್ತು. ಕಾಲಕ್ರಮೇಣ ಮೀನು ಮತ್ತು ನವಿಲುಗಳು ಒಳ್ಳೆಯ ಗೆಳೆಯರಾದರು. ಒಂದು ದಿನ ಬೇಟೆಗಾರ ನವಿಲನ್ನು ಬೇಟೆಯಾಡಿ ಸೆರೆ ಹಿಡಿದ. ಆಗ ಅಲ್ಲಿಯೇ ಇದ್ದ ಮೀನು ಬೇಟೆಗಾರನಿಗೆ ಕೈ ಮುಗಿದು ‘ನನ್ನ ಗೆಳೆಯನನ್ನು ಬಿಟ್ಟು ಬಿಡು. ನಾನು ನಿನಗೆ ನದಿಯಿಂದ ಒಂದು ಮುತ್ತನ್ನು ತಂದು ಕೊಡುತ್ತೇನೆ’ ಎಂದು ಹೇಳಿತು. ಮುತ್ತಿನ ಆಸೆಯಿಂದ ಬೇಟೆಗಾರ ನವಿಲನ್ನು ಬಿಟ್ಟು, ಮೀನಿನಿಂದ ಮುತ್ತನ್ನು ಪಡೆದು ಮನೆಗೆ ತೆರಳಿದ. ಸ್ವಲ್ಪ ಸಮಯದ ನಂತರ ಪುನಃ ಯೋಚಿಸಿ ಒಂದು ಮುತ್ತಿನಿಂದ ಏನೂ ಪ್ರಯೋಜನವಾಗುವುದಿಲ್ಲ.ಅದೇ ಒಂದು ಜೊತೆ ಮುತ್ತಿದ್ದರೆ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಯೋಚಿಸಿ, ಪುನಃ ನದಿಯ ಬಳಿಗೆ ಬಂದು ನವಿಲು ಮತ್ತು ಮೀನನ್ನು ಉದ್ದೇಶಿಸಿ- ‘ನೀವು ಮತ್ತೊಂದು ಮುತ್ತನ್ನು ಕೊಟ್ಟರೆ ನಾನು ನಿಮ್ಮ ತಂಟೆಗೆ ಬರುವುದಿಲ್ಲ’ ಎಂದು ಗದರಿಸುವ ದನಿಯಲ್ಲಿ ಹೇಳಿದ. ಆಗ ಜಾಣ ಮೀನು ಸ್ವಲ್ಪ ಯೋಚಿಸಿ ಅದಕ್ಕೆ ಒಪ್ಪಿ ‘ಆ ಮುತ್ತನ್ನು ನನಗೆ ಕೊಡು ಆಮೇಲೆ ನಿನಗೆ ಜೋಡಿ ಮುತ್ತನ್ನು ತಂದು ಕೊಡುತ್ತೇನೆ’ ಎಂದು ಹೇಳಿತು. ಅದರ ಮಾತನ್ನು ನಂಬಿದ ಬೇಟೆಗಾರ ತನ್ನಲ್ಲಿದ್ದ ಮುತ್ತನ್ನ ಮೀನಿಗೆ ಒಪ್ಪಿಸಿದ. ಆ ಮುತ್ತನ್ನು ಎತ್ತಿಕೊಂಡ ಮೀನು ಚಂಗನೆ ಹಾರಿ- ‘ನಿನ್ನ ಆಸೆಗೆ ಕೊನೆಯೇ ಇಲ್ಲ. ನೀನು ಮರಳಿ ಬರುತ್ತೀಯ ಎಂದು ನನಗೆ ಮೊದಲೇ ತಿಳಿದಿತ್ತು. ಒಂದು ಸಿಕ್ಕರೆ ಮತ್ತೊಂದು, ಆಮೇಲೆ ಇನ್ನೊಂದು, ಮತ್ತೊಂದು ಹೀಗೆ ನಿನ್ನ ಆಸೆಗೆ ಕೊನೆಯೇ ಇಲ್ಲ. ಈ ಅತಿಯಾದ ಆಸೆಯಿಂದ ನೀನು ಯಾವಾಗಲೂ ದುಃಖ ಅನುಭವಿಸುವೆ. ನಿನ್ನ ಜೀವನದಲ್ಲಿ ನೀನು ಸಂತೋಷವನ್ನು ಕಾಣಲಾರೆ’ ಎಂದು ಹೇಳಿ ನೀರಿನಲ್ಲಿ ಮಾಯವಾಯಿತು. ಆದ್ದರಿಂದ ನಮ್ಮಲ್ಲಿ ಇರುವಷ್ಟು ಸಂಪತ್ತಿನಲ್ಲೇ ಆತ್ಮ ಸಂತೋಷ ಕಂಡು ತೃಪ್ತಿಕರವಾದ ಜೀವನವನ್ನು ನಾವೆಲ್ಲರೂ ನಡೆಸೋಣ. ಎಲ್ಲರಿಗು ಶುಭವಾಗಲಿ.